ಚಾಮರಾಜನಗರ: ‘ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 540 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ತಮಿಳುನಾಡು ಮೂಲದ ಲಕ್ಷ್ಮೀ ಮಧುರೈ ಎಂಬಾಕೆಯನ್ನು ಬಂಧಿಸಿದ್ದು, ಆರೋಪಿಯಿಂದ ₹ 27 ಲಕ್ಷ ಮೌಲ್ಯದ 432 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಸೆ.1ರಂದು ಚಾಮರಾಜನಗರ ನಿವಾಸಿ ಪುಷ್ಪಾಲತಾ ಸತ್ಯಮಂಗಲದಲ್ಲಿ ಮದುವೆ ಸಮಾರಂಭಕ್ಕೆ ತೆರಳಲು ಬಸ್ ಹತ್ತುವಾಗ ಅವರ ಗಮನ ಬೇರೆಡೆ ಸೆಳೆದು ವ್ಯಾನಿಟಿ ಬ್ಯಾಗ್‌ನೊಳಗಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು.
ಈ ಸಂಬಂದ ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿ ಯಾವ ಕಡೆ ತೆರಳಿದ್ದಾಳೆ ಎಂಬ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಯಿತು. ಆರೋಪಿ ಸತ್ಯಮಂಗಲದ ಕಡೆಗೆ ಹೋಗಿದ್ದನ್ನು ಖಚಿತಪಡಿಸಿಕೊಂಡು ಅಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಆಟೊ ಚಾಲಕರೊಬ್ಬರು ನೀಡಿದ ಸುಳಿವಿನ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಪುಣಜೂರು ಬಳಿಯ ಕುಂಬಾರಗುಂಡಿಯಲ್ಲಿ ಬಂಧಿಸಲಾಯಿತು’ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ನಗರಠಾಣೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಪ್ರಾಥಮಿಕ ತನಿಖೆಯಲ್ಲಿ ಆರೋಪಿತ ಮಹಿಳೆ ಒಬ್ಬಳೇ ಕೃತ್ಯ ಎಸಗಿರುವುದು ಕಂಡುಬಂದಿದೆ. ಆರೋಪಿಗೆ ಯಾರೆಲ್ಲ ನೆರವು ನೀಡಿದ್ದಾರೆ, ಪೂರ್ವಾಪರಗಳು ಏನು ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದ್ದು ಸದ್ಯ ಆರೋಪಿತೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದರು.
ವಶಪಡಿಸಿಕೊಂಡ ಚಿನ್ನಾಭರಣ:
ಚಿನ್ನದ ಮಾವಿನಕಾಯಿ ಹಾರ, ಚಿನ್ನದ ಮೋಹನ ಗುಂಡು ಮಾಲೆ, ಚಿನ್ನದ ಡಾಲರ್ ಚೈನ್, ಹರಳಿನ ಚಿನ್ನದ ನೆಕ್ಲೇಸ್, ಚಿನ್ನದ ಬ್ರಾಸ್‌ಲೆಟ್, ಒಂದು ಜೊತೆ ಫ್ಯಾನ್ಸಿ ಬಳೆಗಳು, ಎರಡು ಬಳೆಗಳು, 14 ಜೊತೆ ಚಿನ್ನದ ಓಲೆ, ಒಂದು ಜೊತೆ ಮಾಟಿ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ತಂಡ:
ಡಿವೈಎಸ್‌ಪಿ ಲಕ್ಷ್ಮಯ್ಯ ಮಾರ್ಗದರ್ಶನದಲ್ಲಿ ಚಾಮರಾಜನಗರ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಎ.ಕೆ. ರಾಜೇಶ್ ನೇತೃತ್ವದಲ್ಲಿ ಪಿಎಸ್ಐ ಎಂ.ಸಿದ್ದರಾಜು ಸಿಬ್ಬಂದಿ ಲೋಕೇಶ್, ಪಿ.ಕೃಷ್ಣಮೂರ್ತಿ, ಮೋಹನ್ ಕುಮಾರ್, ಮಹದೇವ, ಎಸ್.ನಿಂಗರಾಜು, ರಾಜೇಶ್ವರಿ, ಹೇಮಾ ಅವರನ್ನೊಳಗೊಂಡ ತಂಡ ಆರೋಪಿಯ ಪತ್ತೆ ಕಾರ್ಯಾಚರಣೆ ತಂಡದಲ್ಲಿ ಭಾಗವಹಿಸಿತ್ತು.
ಹನೂರು ತಾಲ್ಲೂಕಿನಲ್ಲಿ ಮದುವೆಗೆ ಕೂಡಿಟ್ಟ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ ಆರೋಪಿಯ ಸುಳಿವು ಸಿಕ್ಕಿದ್ದು ಶೀಘ್ರ ಬಂಧಿಸಲಾಗುವುದು.