ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಲಾ ಕಲಾವಿದರಿಗೆ ಸುವರ್ಣ ಸಂಭ್ರಮ

20ರಂದು ಉದ್ಘಾಟನೆ, ವಿಜ್ಞಾನಕ್ಕೆ ಸಂಬಂಧಿಸಿದ ಕ್ಯು ಇ ಡಿ ನಾಟಕ ಪ್ರದರ್ಶನ
Last Updated 18 ನವೆಂಬರ್ 2022, 5:01 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ರಂಗಭೂಮಿ ತಂಡ, ಶಾಂತಲಾ ಕಲಾವಿದರು ತಂಡ 50ನೇ ವರ್ಷಾಚರಣೆ ಸಂಭ್ರಮದಲ್ಲಿದ್ದು, ಸುವರ್ಣ ಸಂಭ್ರಮ ಹೆಸರಿನಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮ, ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಸುವರ್ಣಮಹೋತ್ಸವದ ಉದ್ಘಾಟನೆ ಇದೇ 20ರಂದು ನಗರದಲ್ಲಿ ನಡೆಯಲಿದೆ. ಅದೇ ದಿನ ವಿಜ್ಞಾನಕ್ಕೆ ಸಂಬಂಧಿಸಿದ ಕ್ಯುಇಡಿ ನಾಟಕ ಪ್ರದರ್ಶನ ನಡೆಯಲಿದೆ.

ಶಾಂತಲಾ ಕಲಾವಿದರು ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಹಾಗೂ ರಂಗಕರ್ಮಿ ಕೆ.ವೆಂಕಟರಾಜು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಹಾಗೂ ತಂಡ ಬೆಳೆದು ಹಾದಿಯ ಬಗ್ಗೆ ವಿವರಿಸಿದರು.

‘ನಾಟಕದ ಬಗ್ಗೆ ವಿಶೇಷ ಆಸಕ್ತಿ ಉಳ್ಳವರು ಸೇರಿ 1973ರ ಅಕ್ಟೋಬರ್‌ 10ರಂದು ತಂಡ ಕಟ್ಟಿದ್ದೆವು. ಆಗ ಅದಕ್ಕೆ ಹೆಸರು ಏನೂ ಇರಲಿಲ್ಲ. ನಂತರ ಅದಕ್ಕೆ ತಂಡದ ರೂಪ ನೀಡಿ ವಿವಿಧ ನಾಟಕ ಪ್ರದರ್ಶನಗಳನ್ನು ಮಾಡುತ್ತಾ ಬಂದೆವು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಂಡದ 10 ಕಲಾವಿದರು ಬಂಧಕ್ಕೆ ಒಳಗಾಗಿದ್ದರು. ಅವರ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ತಂಡದ ನಿರ್ವಹಣೆ ಕಷ್ಟವಾಯಿತು. ನಗರದಲ್ಲಿ ನಾಟಕ ಪ್ರದರ್ಶನಕ್ಕೆ ಸಮರ್ಪಕ ವ್ಯವಸ್ಥೆ ಇಲ್ಲದಿದ್ದರೂ, ಇರುವ ಸೌಲಭ್ಯ ಬಳಸಿಕೊಂಡು ರಂಗ ಚಟುವಟಿಕೆ ನಡೆಸುತ್ತಾ ಬಂದಿದ್ದೆವು. ಐವತ್ತು ವರ್ಷಗಳ ಅವಧಿಯಲ್ಲಿ 70ಕ್ಕೂ ಅಧಿಕ ನಾಟಕಗಳನ್ನು ಪ್ರದರ್ಶಿಸಿದ್ದೇವೆ’ ಎಂದರು.

‘ಸುವರ್ಣ ಸಂಭ್ರಮದ ಅಂಗವಾಗಿ ವರ್ಷಪೂರ್ತಿ ಕನಿಷ್ಠ ತಿಂಗಳಿಗೊಂದು ಕಾರ್ಯಕ್ರಮ ಆಯೋಜಿಸುವ ಯೋಜನೆ ರೂಪಿಸಿದ್ದೇವೆ. ಮುಂದಿನ ಅಕ್ಟೋಬರ್‌ ಇಲ್ಲವೇ ನವೆಂಬರ್‌ನಲ್ಲಿ ಮೂರು ದಿನಗಳ ರಂಗ ಉತ್ಸವ ಆಯೋಜಿಸಲಿದ್ದೇವೆ’ ಎಂದರು.

‘ಶಾಂತಲಾ 50– ಸುವರ್ಣ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮ ಇದೇ 20ರಂದು ಸಂಜೆ 6 ಗಂಟೆಗೆ ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಆಯೋಜಿಸಿದ್ದು, ರಂಗಕರ್ಮಿ ಪ್ರಸನ್ನ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಜ್ಞಾನಿ ಡಾ.ಕೊಳ್ಳೇಗಾಲ ಶರ್ಮ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕಿ ಡಾ.ಡಿ.ಶೀಲಾಕುಮಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಂತಲಾ ಟ್ರಸ್ಟ್‌ ಅಧ್ಯಕ್ಷ ಅಬ್ರಹಾಂ ಡಿ‘ಸಿಲ್ವ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ವೆಂಕಟರಾಜು ಹೇಳಿದರು.

‘ಉದ್ಘಾಟನೆ ಕಾರ್ಯಕ್ರಮದ ಬಳಿಕ ಪೀಟರ್‌ ಪಾರ್ನೆಲ್‌ ಅವರು ರಚಿಸಿರುವ, ಶಶಿಧರ್‌ ಡೋಂಗ್ರೆ ಅವರು ಅನುವಾದಿಸಿರುವ, ಡಾ.ರಿಚರ್ಡ್‌ ಫೈನ್‌ ಮನ್‌ ಜೀವನಾಧಾರಿತಾದ ‘ಕ್ಯುಇಡಿ’ ನಾಟಕವನ್ನು ಮೈಸೂರಿನ ಅರಿವು ರಂಗ ತಂಡದವರು ಪ್ರದರ್ಶಿಸಲಿದ್ದಾರೆ. ಯತೀಶ್‌ ಕೊಳ್ಳೇಗಾಲ ನಾಟಕವನ್ನು ನಿರ್ದೇಶಿಸಿದ್ದಾರೆ. ನಾಟಕದ ಪ್ರಾಯೋಜಕತ್ವವನ್ನು ಕುತೂಹಲಿ ಸ್ಕೋಪ್‌ ಯೋಜನೆ ಹಾಗೂ ದೆಹಲಿಯ ವಿಜ್ಞಾನ ಪ್ರಸಾರ್‌ ವಹಿಸಿಕೊಂಡಿದೆ’ ಎಂದರು.

ಟ್ರಸ್ಟ್‌ ಅಧ್ಯಕ್ಷ ಅಬ್ರಹಾಂ ಡಿ’ಸಿಲ್ವ, ಟ್ರಸ್ಟಿಗಳಾದ ನಾಗೇಶ್, ಪ್ರಕಾಶ್ ಬೆಲ್ಲದ್, ಕಲಾವಿದೆ ದಾಕ್ಷಾಯಿಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT