ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಉತ್ತಮ ಮುಂಗಾರು, ರೈತರ ಹರ್ಷ

ಜೂನ್‌ 1ರಿಂದ ಇದುವರೆಗೆ ಶೇ 78ರಷ್ಟು ಹೆಚ್ಚು ಮಳೆ, ಹುಲುಸಾಗಿ ಬೆಳೆದಿದೆ ಬೆಳೆ
Last Updated 24 ಜುಲೈ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ವಾಡಿಕೆಗಿಂತ ಶೇ 70ರಷ್ಟು ಹೆಚ್ಚು ಮಳೆಯಾಗಿದೆ.

ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಹರ್ಷಗೊಂಡಿದ್ದು, ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ, ಇದೇ ರೀತಿ ಮಳೆ ಮುಂದುವರಿದರೆ ಬಾಳೆ, ಅರಿಸಿನದಂತಹ ಬೆಳೆಗಳಿಗೆ ನೀರು ಹೆಚ್ಚಾಗಿ, ಕೊಳಕು ಮಾರು ರೋಗ ಕಾಣಿಸಿಕೊಳ್ಳಬಹುದು ಎಂಬ ಭೀತಿಯೂ ಅವರನ್ನು ಕಾಡುತ್ತಿದೆ. ಅಗತ್ಯಕ್ಕಿಂತ ಹೆಚ್ಚು ತೇವಾಂಶ ಇರುವುದು ಸೂರ್ಯಕಾಂತಿ, ಜೋಳದ ಬೆಳೆಗೂ ಒಳ್ಳೆಯದಲ್ಲ ಎಂಬುದು ಅವರ ವಾದ.

ಆದರೆ, ಸದ್ಯಕ್ಕೆ ಅಂತಹ ಪರಿಸ್ಥಿತಿ ಸೃಷ್ಟಿಯಾಗಿಲ್ಲ. ಜಿಲ್ಲೆಯಾದ್ಯಂತ ಬಿಸಿಲಿನ ವಾತಾವರಣ ಇದೆ. ಮಧ್ಯಾಹ್ನದ ಮೇಲೆ ಮಳೆಯಾಗುತ್ತಿದೆ ಎಂದು ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯೂ ಚೆನ್ನಾಗಿ ಬಂದಿತ್ತು. ನೈರುತ್ಯ ಮುಂಗಾರು ಆರಂಭಗೊಂಡ ನಂತರವೂ ಇದು ಮುಂದುವರಿದಿದೆ. ಜೂನ್‌ 1ರಿಂದ ಶುಕ್ರವಾರದವರೆಗೆ (ಜುಲೈ 24) ಜಿಲ್ಲೆಯಲ್ಲಿ 18.2 ಸೆಂ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 10.7 ಸೆಂ.ಮೀ ಮಳೆಯಾಗುತ್ತದೆ.

ಜುಲೈನಲ್ಲಿ ಉತ್ತಮ ಮಳೆ: ಜುಲೈ ತಿಂಗಳಲ್ಲೂ ಜಿಲ್ಲೆಯಲ್ಲಿ ಚೆನ್ನಾಗಿ ಮಳೆ ಬರುತ್ತಿದೆ. 24 ದಿನಗಳ ಅವಧಿಯಲ್ಲಿ 10.5 ಸೆಂ.ಮೀ ಮಳೆಯಾಗಿದೆ. ಸಾಮಾನ್ಯವಾಗಿ 4.9 ಸೆಂ.ಮೀ ಮಳೆಯಾಗುತ್ತದೆ. ಶೇ 116ರಷ್ಟು ಹೆಚ್ಚು ಮಳೆಯಾಗಿದೆ.

ಪ್ರತಿ ವರ್ಷ ಹನೂರು ತಾಲ್ಲೂಕಿನಲ್ಲಿ ಕಡಿಮೆ ಮಳೆಯಾಗುತ್ತಿತ್ತು. ಈ ಬಾರಿ ಅಲ್ಲಿಯೂ ಉತ್ತಮ ಮಳೆಯಾಗಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಜುಲೈ ತಿಂಗಳಲ್ಲಿ ಸಾಮಾನ್ಯವಾಗಿ ತಾಲ್ಲೂಕಿನಲ್ಲಿ 3.8 ಸೆಂ.ಮೀನಷ್ಟು ಮಳೆ ಸುರಿಯುತ್ತಿತ್ತು. ಈ ಬಾರಿ 11.3 ಸೆಂ.ಮೀ ನಷ್ಟು ಮಳೆ ಬಿದ್ದಿದೆ.

ಚುರುಕು ಪಡೆದ ಬಿತ್ತನೆ:ಜಿಲ್ಲೆಯಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಅವಧಿಯಲ್ಲಿ ಈವರೆಗೆ 73,868 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಮುಂಗಾರು ಪೂರ್ವದಲ್ಲಿ ಸೂರ್ಯಕಾಂತಿ, ಉದ್ದು, ಹುರುಳಿ ಅಲಸಂದೆ, ಜೋಳ, ಮುಸುಕಿನ ಜೋಳ ಬಿತ್ತನೆ ಮಾಡಲಾಗಿದ್ದರೆ. ಜೂನ್‌ 1ರಿಂದ ಈಚೆಗೆ ರಾಗಿ ಹಾಗೂ ಮುಸುಕಿನ ಜೋಳವನ್ನು ರೈತರು ಬಿತ್ತನೆ ಮಾಡುತ್ತಿದ್ದಾರೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ತೋಟಗಾರಿಕಾ ಬೆಳೆಗಳ ಪೈಕಿ 14 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದ್ದರೆ, 8,500 ಹೆಕ್ಟೇರ್‌ನಲ್ಲಿ ಅರಿಸಿನ ಬೆಳೆಯಲಾಗಿದೆ.

ಎಲ್ಲ ಕಡೆಗಳಲ್ಲೂ ಬೆಳೆಗಳು ಹುಲುಸಾಗಿ ಬೆಳೆದಿದೆ.ಅಗತ್ಯಕ್ಕೆ ತಕ್ಕಂತೆ ಮಳೆಯಾಗುತ್ತಿರುವುದರಿಂದ ಇಳುವರಿಯೂ ಉತ್ತಮವಾಗಿರಲಿದೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಹಾಗೂ ರೈತರಿದ್ದಾರೆ.

ಕೊಳೆ ಮಾರು ಕಾಡುವ ಆತಂಕ

ಮಳೆ ಉತ್ತಮವಾಗಿ ಆಗುತ್ತಿರುವುದರ ನಡುವೆಯೇ ಹೆಚ್ಚಿನ ತೇವಾಂಶದಿಂದ ಬೆಳೆಗಳಿಗೆ ತೊಂದರೆಯಾಗಬಹುದು ಎಂಬ ಆತಂಕ ರೈತರನ್ನು ಕಾಡುತ್ತಿದೆ.

‘ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿರುವುದು ಬೆಳೆಗಳಿಗೆ ಅನುಕೂಲ. ಆದರೆ, ಮುಂದೇ ಇದೇ ರೀತಿ ಮಳೆಯಾದರೆ ಬಾಳೆ ಹಾಗೂ ಅರಿಸಿನ ಬೆಳೆಗಳಿಗೆ ಒಳ್ಳೆಯದಲ್ಲ. ನೀರಿನ ಅಂಶ ಜಾಸ್ತಿಯಾಗುವುದರಿಂದ ಕೊಳೆ ಮಾರು (ಬೇರು ಕೊಳೆಯುವುದು) ರೋಗ ಬರುತ್ತದೆ. ಇದು ಬಂದರೆ ಇಳುವರಿ ನಷ್ಟವಾಗುತ್ತದೆ’ ಎಂದು ರಾಮಸಮುದ್ರದ ರೈತ ಪ್ರದೀಪ್‌ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಊರಿನಲ್ಲಿ ಬಹುತೇಕ ರೈತರು ಸೂರ್ಯಕಾಂತಿ ಬೆಳೆದಿದ್ದಾರೆ. ಕೆಲವರದ್ದು ಕಟಾವು ಹಂತಕ್ಕೆ ಬಂದಿದೆ. ಇನ್ನೂ ಕೆಲವು ಕಡೆಗಳಲ್ಲಿ ಇನ್ನೂ ಒಂದು ತಿಂಗಳು ಬೇಕು. ಇದುವರೆಗೂ ಬಂದ ಮಳೆಯಿಂದ ಅನುಕೂಲವಾಗಿದೆ. ಇನ್ನು ಹೆಚ್ಚು ಬರಬಾರದು. ಜಾಸ್ತಿಯಾದರೆ ಸೂರ್ಯಕಾಂತಿಗೆ ಹಾನಿಯಾಗುತ್ತದೆ. ಜೋಳಕ್ಕೂ ಒಳ್ಳೆಯದಲ್ಲ’ ಎಂದು ದೊಡ್ಡರಾಯಪೇಟೆಯ ಗಿರೀಶ್‌ಗ ಅವರು ಹೇಳಿದರು.

‘ಇದುವರೆಗೆ ಬಂದ ಮಳೆಯಿಂದ ಏನೂ ಸಮಸ್ಯೆ ಇಲ್ಲ. 2017ರಲ್ಲಿ ಜಿಲ್ಲೆಯಲ್ಲಿ ವಿಪರೀತ ಮಳೆ ಬಂದಿತ್ತು. ಆ ವರ್ಷ ಬಾಳೆ ಹಾಗೂ ಅರಿಸಿನಕ್ಕೆ ಕೊಳೆರೋಗ ಕಾಣಿಸಿಕೊಂಡಿತ್ತು. ಜುಲೈನಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿದ್ದರೂ, ಬೆಳೆಗೆ ಹಾನಿಯಾಗುವ ಪ್ರಮಾಣದಲ್ಲಿ ಸುರಿದಿಲ್ಲ’ ಎಂದುತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್‌ ಅವರು‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT