ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಟಿ ಜಿಟಿ ಮಳೆಗೆ ಕೊಂಚ ಬಿಡುವು

ಶುಕ್ರವಾರ ಬೆಳಿಗ್ಗೆ 11ರವರೆಗೂ ಸುರಿದ ಮಳೆ; ಬಸಪ್ಪನ ಪಾಳ್ಯದಲ್ಲಿ ಕಾಲುವೆ ಒಡೆದು ಅವಾಂತರ
Last Updated 13 ಮೇ 2022, 16:00 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಡೀ ಜಿಟಿ ಜಿಟಿ ಮಳೆಯಾಗಿದ್ದು, ಶುಕ್ರವಾರ ಬೆಳಿಗ್ಗೆಯೂ ಮುಂದುವರೆಯಿತು. ಬೆಳಿಗ್ಗೆ 11 ಗಂಟೆಯ ನಂತರ ಬಿಡುವು ಕೊಟ್ಟಿತು. ಇಡೀ ದಿನ ಮೋಡದ ವಾತಾವರಣ ಇತ್ತು.

ನಿರಂತರವಾಗಿ ಸುರಿದ ಮಳೆಗೆ ಗುರುವಾರ ರಾತ್ರಿ ತಾಲ್ಲೂಕಿನ ಚಂದಕವಾಡಿ ಹೋಬಳಿಯ ಬಸಪ್ಪನಪಾಳ್ಯ ಗ್ರಾಮದಲ್ಲಿ ಕಾಲುವೆ ಒಡೆದು 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಪ್ರಕಾರ,ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 3.97 ಸೆಂ.ಮೀ ಮಳೆಯಾಗಿದೆ.

ಯಳಂದೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 8.35 ಸೆಂ.ಮೀ ಮಳೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿ ಕಡಿಮೆ ಎಂದರೆ 1.94 ಸೆಂ.ಮೀ ಮಳೆ ಬಿದ್ದಿದೆ. ಉಳಿದಂತೆ ಚಾಮರಾಜನಗರ ತಾಲ್ಲೂಕಿನಲ್ಲಿ 6.93 ಸೆಂ.ಮೀ, ಹನೂರು ತಾಲ್ಲೂಕು 3.27 ಸೆಂ.ಮೀ, ಕೊಳ್ಳೇಗಾಲದಲ್ಲಿ 2.9 ಸೆಂ.ಮೀಗಳಷ್ಟು ವರ್ಷಧಾರೆಯಾಗಿದೆ.

ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಶೀತ ವಾತಾವರಣ ತಲೆದೋರಿದ್ದು, ಜನಜೀವನ ಅಸ್ತವ್ಯಸ್ತವಾಯಿತು.ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಯಿತು.

ಯಳಂದೂರಿನಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಬಿಳಿಗಿರಿರಂಗನಬೆಟ್ಟ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ತಾಲ್ಲೂಕಿನಲ್ಲಿ ಒಂದೇ ದಿನ ಎಂಟು ಸೆಂ.ಮೀ.ಗಿಂತಲೂ ಹೆಚ್ಚು ವರ್ಷಧಾರೆಯಾಗಿದೆ.

ಚಾಮರಾಜನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಹೊಂಗನೂರು, ಇರಸವಾಡಿ, ದೊಡ್ಡಮೋಳೆ ಸೇರಿದಂತೆ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 6 ಸೆಂ.ಮೀ.ಗೂ ಹೆಚ್ಚು ಮಳೆಯಾಗಿದೆ.

ಒಡೆದ ಕಾಲುವೆ: ತಾಲ್ಲೂಕಿನ ಚಂದಕವಾಡಿ ಹೋಬಳಿಯ ಬಸಪ್ಪನಪಾಳ್ಯ ಗ್ರಾಮದಲ್ಲಿ ಗುರುವಾರ ರಾತ್ರಿಹೆಂಗಳಿಕಟ್ಟೆಕೆರೆ ಕಾಲುವೆ ಒಡೆದು 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.

‘ಗ್ರಾಮದ ವ್ಯಾಪ್ತಿಯಲ್ಲಿ ನಾಲ್ಕು ಕೆರೆಗಳಿದ್ದು, ಗೆಂಗಳಿಕಟ್ಟೆಕೆರೆ ಕಾಲುವೆ ಒಡೆದು ಗ್ರಾಮದತ್ತ ನೀರು ಹರಿಯಿತು. ಮನೆಗಳಿಗೆ ನೀರು ನುಗ್ಗಿತು. 25ಕ್ಕೂ ಹೆಚ್ಚು ಕುಟುಂಬಗಳು ತೊಂದರೆಗೆ ಒಳಗಾಗಿವೆ. ಎಲ್ಲರ ಮನೆಗಳಿಗೂ ನೀರು ನುಗ್ಗಿದ್ದು, ರಾತ್ರಿ ಪೂರ್ತಿ ನೀರು ಹೊರ ಹಾಕಬೇಕಾಯಿತು. ನೀರು ನುಗ್ಗಿದ್ದರಿಂದ ದಿನಸಿ ಸಾಮಗ್ರಿ, ಬಟ್ಟೆ ಬರೆ ಸೇರಿದಂತೆ ಅಗತ್ಯ ವಸ್ತುಗಳು ನೀರಿನಲ್ಲಿ ತೋಯ್ದವು’ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ನೀರು ಬಸಿದು ಹೋಗಿದೆ. ಕಾಲುವೆ ದುರಸ್ತಿ ಮಾಡಬೇಕಿದೆ. ಇಲ್ಲದಿದ್ದರೆ, ಮಳೆ ಬಂದಾಗಲೆಲ್ಲ ಸಮಸ್ಯೆ ತಲೆ ದೋರಲಿದೆ’ ಎಂದು ಅವರು ಹೇಳಿದರು.

ದೊಡ್ಡರಸನಕೊಳ ಬಹುತೇಕ ಭರ್ತಿ: ನಿರಂತರ ಮಳೆಯಿಂದಾಗಿ ಕೆರೆ–ಕಟ್ಟೆಗಳಿಗೆ ನೀರು ಹರಿದು ಬಂದಿದ್ದು, ನಗರದ ಐತಿಹಾಸಿಕ ದೊಡ್ಡರಸನ ಕೊಳ ಬಹುತೇಕ ಭರ್ತಿಯಾಗಿದೆ. ಮಳೆ ನಿಂತರೂ ನೀರು ಹರಿದು ಬರುತ್ತಿರುವುದರಿಂದ ಶೀಘ್ರದಲ್ಲಿ ಕೊಳ ತುಂಬಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮಹದೇಶ್ವರ ಬೆಟ್ಟ: ವಿದ್ಯುತ್‌ ಕಡಿತ

ಗಾಳಿ–ಮಳೆಯಿಂದಾಗಿ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ರಾತ್ರಿ ಹೊತ್ತು ಗಾಳಿ ಬೀಸಿ, ಮಳೆ ಬರುತ್ತಿರುವುದರಿಂದ ಕಾಡಿನ ದಾರಿಯಲ್ಲಿ ಮರಗಳು ಮುರಿದು ಬೀಳುತ್ತಿದ್ದು, ವಿದ್ಯುತ್‌ ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಗುರುವಾರ ರಾತ್ರಿ ಸ್ಥಗಿತಗೊಂಡಿದ್ದ ವಿದ್ಯುತ್‌ ಪೂರೈಕೆ, ಶುಕ್ರವಾರ ಮಧ್ಯಾಹ್ನ ಮತ್ತೆ ಸಹಜ ಸ್ಥಿತಿಗೆ ಬಂತು.

ಗೋಡೆ ಕುಸಿತ; 3 ಮೇಕೆ, 2 ಕುರಿ ಸಾವು

ಸಂತೇಮರಹಳ್ಳಿ: ಇಲ್ಲಿಗೆ ಸಮೀಪದ ಕಸ್ತೂರಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಮನೆಯೊಂದರ ಗೋಡೆ ಕುಸಿದು 3 ಮೇಕೆ ಹಾಗೂ 2 ಕುರಿಗಳು ಮೃತಪಟ್ಟಿವೆ.

ಇವು ಗ್ರಾಮದ ಸಂಸೋನಾ ಎಂಬುವರಿಗೆ ಸೇರಿದ್ದಾಗಿದ್ದು, ಮಳೆಗೆ ಕೊಟ್ಟಿಗೆಯ ಗೋಡೆ ಮೇಕೆ ಹಾಗೂ ಕುರಿಗಳ ಮೇಲೆ ಬಿದ್ದಿದ್ದರಿಂದ ಮೃತಪಟ್ಟಿವೆ.

ಸ್ಥಳಕ್ಕೆ ಕಂದಾಯ ಅಧಿಕಾರಿ ಪರಮೇಶ್, ಗ್ರಾಮ ಲೆಕ್ಕಾಧಿಕಾರಿ ಮಹದೇವಮ್ಮ ಭೇಟಿ ನೀಡಿ ಪ‍ರಿಶೀಲನೆ ನಡೆಸಿದರು.

‘ಸ್ಥಳಕ್ಕೆ ಭೇಟಿ ನೀಡಿ ವರದಿ ತಯಾರಿಸಿ ತಹಶೀಲ್ದಾರ್ ಕಚೇರಿಗೆ ನೀಡಲಾಗಿದೆ. ಆದಷ್ಟು ಬೇಗ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪರಮೇಶ್ ತಿಳಿಸಿದರು.

ಗ್ರಾಮದ ಸಂಸೋನಾ ಬಡವರಾಗಿದ್ದು, ಮೇಕೆ ಕುರಿಗಳನ್ನು ಸಾಕಿ ಜೀವನ ನಡೆಸುತ್ತಿದ್ದರು. ಈಗ ಅವು ಮೃತಪಟ್ಟಿರುವುದರಿಂದ ₹ 40 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ತಕ್ಷಣ ಪರಿಹಾರ ಒದಗಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT