ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಉತ್ತಮ ಮಳೆ, ಕಳೆಗಟ್ಟಿದ ಕೆರೆ ಕಟ್ಟೆ

ಎರಡು ವಾರಗಳಿಂದೀಚೆಗೆ ಜಲಾಶಯಗಳಿಗೂ ಹರಿದು ಬರುತ್ತಿದೆ ನೀರು
Last Updated 14 ಅಕ್ಟೋಬರ್ 2019, 21:51 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಗಾರು ಅವಧಿ ಮುಕ್ತಾಯದ ನಂತರವೂ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳು, ಕೆರೆ ಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಮಳೆಗಾಲದಲ್ಲಿ ಅರ್ಧ ತುಂಬಿದ್ದಬಹುತೇಕ ಕಟ್ಟೆಗಳು ಹಾಗೂ ಕೆರೆಗಳು ಎರಡು ವಾರಗಳಿಂದ ಸುರಿಯುತ್ತಿರುವ ಮಳೆಗೆ ಬಹುತೇಕ ಭರ್ತಿಯಾಗಿವೆ. ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ, ಚಿಕ್ಕಹೊಳೆ ಸೇರಿದಂತೆ ಜಿಲ್ಲೆಯ ವಿವಿಧ ಅಣೆಕಟ್ಟೆಗಳಲ್ಲಿನ ನೀರಿನ ಸಂಗ್ರಹವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

ಪ್ರತಿ ದಿನ ಹಗಲು ಹೊತ್ತು ಬಿಡುವು ಕೊಟ್ಟು, ಸಂಜೆ ಹಾಗೂ ರಾತ್ರಿ ಸುರಿಯುತ್ತಿರುವ ಮಳೆ ರೈತರ ಮುಖದಲ್ಲೂ ಮಂದಹಾಸ ಮೂಡಿಸಿದೆ. ಹುರುಳಿ, ಉದ್ದು ಕೊತ್ತಂಬರಿ, ನೆಲಕಡಲೆ, ಜೋಳ, ಅವರೆ ಸೇರಿದಂತೆ ಹಲವು ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದು, ಚಳಿಗಾಲದಲ್ಲಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

ಎಲ್ಲ ತಾಲ್ಲೂಕುಗಳಲ್ಲೂ ಮಳೆ: ಜಿಲ್ಲೆಯ ಐದು ತಾಲ್ಲೂಕುಗಳಲ್ಲೂ ಉತ್ತಮವಾಗಿ ಮಳೆಯಾಗುತ್ತಿದೆ. ಪ್ರತಿ ವರ್ಷ ಹನೂರು ಭಾಗದಲ್ಲಿ ಕಡಿಮೆ ಮಳೆ ಬೀಳುತ್ತದೆ. ಆದರೆ, ಈ ವರ್ಷ ಅಲ್ಲೂ ಉತ್ತಮ ಮಳೆಯಾಗಿದೆ.

ಅಕ್ಟೋಬರ್‌ 1ರಿಂದ 14ರವರೆಗೆ ಹನೂರು, ಲೊಕ್ಕನಹಳ್ಳಿ, ಪಾಳ್ಯ ಹಾಗೂ ರಾಮಾಪುರ ಹೋಬಳಿಗಳಲ್ಲಿ ಕ್ರಮವಾಗಿ 131 ಮಿ.ಮೀ (ವಾಡಿಕೆ–88) , 109 ಮಿ.ಮೀ (92), 104 ಮಿ.ಮೀ (88) ಮತ್ತು 119 ಮಿ.ಮೀ (89) ಮಳೆಯಾಗಿದೆ. ತಾಲ್ಲೂಕಿನ ಕೆರೆಗಳು ಇನ್ನೂ ಸಂಪೂರ್ಣವಾಗಿ ತುಂಬಿಲ್ಲದಿದ್ದರೂ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಜಿಲ್ಲೆಯ 16 ಹೋಬಳಿಗಳ ಪೈಕಿ ಸಂತೇಮರಹಳ್ಳಿ ಭಾಗದಲ್ಲಿ ಸ್ವಲ್ಪ ಕಡಿಮೆ ಮಳೆಯಾಗಿದೆ. ಹಾಗಿದ್ದರೂ ಬಿತ್ತನೆಗೆ ತೊಂದರೆಯಾಗಿಲ್ಲ.

‘ಈ ವರ್ಷ ನಮ್ಮ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಸಾಮಾನ್ಯವಾಗಿ ರೈತರು ಪುಬ್ಬ, ಉತ್ತರ ಮತ್ತು ಹಸ್ತ ಮಳೆಯ ಸಂದರ್ಭದಲ್ಲಿ ಬಿತ್ತನೆ ಮಾಡುತ್ತಾರೆ. ಹನೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಈ ವರ್ಷ ಉತ್ತಮ ಬಿತ್ತನೆಯಾಗಿದೆ. ಚಳಿ ವಾತಾವರಣ ಆರಂಭವಾಗುತ್ತಿದ್ದಂತೆ ಬೆಳೆ ಹುಲುಸಾಗಿ ಬೆಳೆಯುತ್ತದೆ’ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೊಡ್ಡ ದೊಡ್ಡ ಕೆರೆಗಳನ್ನು ಬಿಟ್ಟು, ಮಧ್ಯಮ ಗಾತ್ರದ ಕೆರೆಗಳು, ಕಟ್ಟೆಗಳು ಭರ್ತಿಯಾಗಿವೆ. ಸಂತೇಮರಹಳ್ಳಿ ಭಾಗದಲ್ಲಿ ಹೆಚ್ಚು ಮಳೆಯಾಗದಿರುವುದರಿಂದ ಕೆರೆಗಳಿಗೆ ನೀರು ಬಂದಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಇದರ ಜೊತೆಗೆ, ಕೆರೆ ತುಂಬಿಸುವ ಯೋಜನೆಯ ಅಡಿಯಲ್ಲಿ ಆಲಂಬೂರಿನಿಂದ ಜಿಲ್ಲೆಯ ವಿವಿಧ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಹಲವು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ.

ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಕ್ಕೆ ಗಣನೀಯ ನೀರು
ಜಿಲ್ಲೆಯ ಎರಡು ಪ್ರಮುಖ ಜಲಾಶಯಗಳಾದ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಗೆ 20 ದಿನಗಳ ಅವಧಿಯಲ್ಲಿ ಗಣನೀಯ ಪ್ರಮಾಣದ ನೀರು ಹರಿದು ಬಂದಿದೆ.

54.5 ಅಡಿ ನೀರು ಸಂಗ್ರಹ ಸಾಮರ್ಥ್ಯದ ಸುವರ್ಣಾವತಿ ಜಲಾಶಯದಲ್ಲಿ 20 ದಿನಗಳ ಹಿಂದೆ 27 ಅಡಿ ನೀರಿತ್ತು. ಅದೀಗ 40 ಅಡಿಗೆ ತಲುಪಿದೆ.

74 ಅಡಿ ಸಾಮರ್ಥ್ಯದ ಚಿಕ್ಕಹೊಳೆ ಜಲಾಶಯದಲ್ಲಿ ಸದ್ಯ 56 ಅಡಿ ನೀರಿದೆ. ಮೂರು ವಾರಗಳ ಅವಧಿಯಲ್ಲಿ 9 ಅಡಿಗಳಷ್ಟು ನೀರು ಹರಿದು ಬಂದಿದೆ ಎಂದು ಕಾವೇರಿ ನಿಗಮದ ಸಿಬ್ಬಂದಿ ತಿಳಿಸಿದ್ದಾರೆ.

ಕಳೆದ ವರ್ಷ ಸುವರ್ಣಾವತಿ ಜಲಾಶಯ ಭರ್ತಿಯಾಗಿತ್ತು. ಚಿಕ್ಕಹೊಳೆ ಜಲಾಶಯ 68 ಅಡಿಗಳಷ್ಟು ತುಂಬಿತ್ತು. ಈ ವರ್ಷ ಇದೇ ಪ್ರಮಾಣದಲ್ಲಿ ಮಳೆಯಾದರೆ ಎರಡೂ ಜಲಾಶಯಗಳು ಭರ್ತಿಯಾಗಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT