ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಮಳೆ; ಕೃಷಿಗೆ ಹಿನ್ನಡೆ

Last Updated 17 ಮೇ 2022, 15:41 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ‘ಅಸನಿ’ ಚಂಡಮಾರುತದ ಪ್ರಭಾವ ಕಡಿಮೆಯಾದ ಬಳಿಕ ಎರಡು ದಿನ ಜಿಲ್ಲೆಯಲ್ಲಿ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಆರಂಭವಾಗಿದೆ.

ಸೋಮವಾರದಿಂದಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಸೋಮವಾರ ರಾತ್ರಿ ಜಿಲ್ಲೆಯ ಬಹುತೇಕ ಎಲ್ಲ ಕಡೆಗಳಲ್ಲೂ ಮಳೆಯಾಗಿದೆ. ಮಂಗಳವಾರವೂ ಮುಂದುವರಿದಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಡಕುಂಟಾಗಿದೆ.

ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಚಾಮರಾಜನಗರ ಮತ್ತು ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಸ್ವಲ್ಪ ಹೆಚ್ಚೇ ಮಳೆಯಾಗಿದೆ. ಮಂಗಳವಾರ ಮಧ್ಯಾಹ್ನದ ನಂತರ ಜಿಲ್ಲಾ ಕೇಂದ್ರದ ಸುತ್ತಮುತ್ತಲೂ ಮಳೆಯಾಗಿದೆ.

ಜನ ಜೀವನ ಅಸ್ತವ್ಯಸ್ತ: ಗುಂಡ್ಲುಪೇಟೆತಾಲ್ಲೂಕಿನ ವಿವಿಧ ಭಾಗ ಸೇರಿದಂತೆ ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತವಾಯಿತು. ಮಂಗಳವಾರ ಮಧ್ಯಾಹ್ನದ ವೇಳೆ ಶುರುವಾದ ಮಳೆ ಮೂರು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಪಟ್ಟಣ ವ್ಯಾಪ್ತಿಯ ಕೆಲವು ವಾರ್ಡ್‌ಗಳ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ.

ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಗುಂಡ್ಲುಪೇಟೆ ಪಟ್ಟಣದ ನಿಲ್ದಾಣದೊಳಗೆ ಮಳೆ ಹಾಗೂ ಚರಂಡಿ ನೀರು ಹರಿದು ಅವಾಂತರ ಸೃಷ್ಟಿಸಿತು. ಊಟಿ ಸರ್ಕಲ್‌ನ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಮಡಹಳ್ಳಿ ವೃತ್ತದಲ್ಲಿ ಮಳೆ ನೀರು ಹೆಚ್ಚಿನ ರೀತಿಯಲ್ಲಿ ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಪಟ್ಟಣ ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿರುವ ಕಾರಣ, ಮಳೆ ನೀರು ಚರಂಡಿಯಲ್ಲಿ ಹೋಗದೆ ರಸ್ತೆ ಮೇಲೆ ಹರಿಯಿತು.

ಜಮೀನುಗಳಲ್ಲಿ ನಿಂತ ನೀರು: ಗ್ರಾಮೀಣ ಭಾಗದಲ್ಲೂ ಉತ್ತಮ ಮಳೆಯಾಗಿದ್ದರಿಂದ ಹಲವು ಜಮೀನುಗಳಲ್ಲಿ ನೀರು ನಿಂತಿತ್ತು. ಇನ್ನು ಕೆಲವೆಡೆ ಹತ್ತಿ, ಸೂರ್ಯಕಾಂತಿ ಬೆಳೆಗೆ ಹಾನಿಯಾಗಿದೆ. ಬಂಡೀಪುರದ ಕಾಡಂಚಿನ ಗ್ರಾಮದ ವ್ಯಾಪ್ತಿಯಲ್ಲಿ ರೈತರು ನಾಟಿ ಮಾಡಿದ್ದ ಹಾಗಲಕಾಯಿ ಬೆಳೆಗೆ ಹಾನಿಯಾಗಿದೆ.

ಬಂಡೀಪುರ-ಕಾಡಂಚಿನಲ್ಲಿಯೂ ಮಳೆ: ಬಂಡೀಪುರ ವ್ಯಾಪ್ತಿಯ ಕಾಡಂಚಿನ ಗ್ರಾಮ ಹಾಗೂ ಅಭಯಾರಣ್ಯಕ್ಕೆ ಉತ್ತಮ ಮಳೆಯಾಗಿದ್ದು, ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿವೆ. ಮೇಲುಕಾಮನಹಳ್ಳಿ, ಹಂಗಳ, ಮಗುವಿನಹಳ್ಳಿ, ಶಿವಪುರ, ಚೌಡಹಳ್ಳಿ, ಪುತ್ತನಪುರ, ದೇವರಹಳ್ಳಿ, ಗೋಪಾಲ ಸ್ವಾಮಿ ಬೆಟ್ಟದ ಭಾಗದಲ್ಲಿ ಉತ್ತಮ ಮಳೆಯಾಗಿದೆ.

ಬಡಾವಣೆಗಳನ್ನು ಆವರಿಸಿದ ನೀರು

ಯಳಂದೂರು:ತಾಲ್ಲೂಕಿನ ಎಲ್ಲೆಡೆ ಸೋಮವಾರ ರಾತ್ರಿಯಿಂದ ಮುಂಜಾನೆವರೆಗೆ ಧಾರಾಕಾರ ಮಳೆ ಸುರಿಯಿತು.

ಮಂಗಳವಾರ ತುಸು ಬಿಡುವು ನೀಡಿದ್ದ ಮಳೆ ಮಧ್ಯಾಹ್ನ ಮೋಡಗಳ ಆವರಣ ನಿರ್ಮಿಸಿತ್ತು. ಸಂಜೆ ವೇಳೆಗೆ ತುಂತುರು ಮಳೆ ಬಿರುಸಾಯಿತು.

ಕೆಲವು ಗ್ರಾಮಗಳ ಹೊಸ ಬಡಾವಣೆಗಳಲ್ಲಿ ನೀರು ನಿಂತಿದ್ದು, ನಿವಾಸಿಗಳು ಓಡಾಡಲು ಪ್ರಯಾಸಪಟ್ಟರು. ಕೆಲವು ಪಂಚಾಯಿತಿ ವ್ಯಾಪ್ತಿಗಳಲ್ಲಿ ಚರಂಡಿಗಳ ನಿರ್ಮಾಣವಾಗದೆ ನೀರು ಗುಡಿಸಲುಗಳ ಸುತ್ತಮುತ್ತ ನಿಂತಿರುವುದು ಕಂಡುಬಂತು.

'ಮದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆಹಳ್ಳಿ ಹೊಸ ಬಡಾವಣೆಯ ಸುತ್ತಲೂ ನೀರು ಆವರಿಸಿದ್ದು, ರಸ್ತೆ ಕೆಸರುಮಯವಾಗಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಈ ಭಾಗದ ನಿವಾಸಿಗಳು ಓಡಾಡಲು ತ್ರಾಸು ಪಡುವಂತಾಗಿದೆ’ ಎಂದು ಗ್ರಾಮಸ್ಥ ಮಹದೇವಶೆಟ್ಟಿ ಹೇಳಿದರು.

‘ಮಳೆಗಾಲ ಬಂತೆಂದರೆ ಮನೆಗಳಲ್ಲಿ ವಾಸ ಮಾಡಲು ಆಗುತ್ತಿಲ್ಲ. ಗುಡಿಸಲುಗಳ ಸುತ್ತಲೂ ನೀರು ನಿಂತು ವಿಶ್ರಮಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಚರಂಡಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿರುವುರಿಂದ ಮಳೆ ನೀರು ಒಂದೇ ಕಡೆ ಶೇಖರವಾಗುತ್ತದೆ. ಇದು ರೋಗ ರುಜಿನ ಹರಡಲು ಕಾರಣವಾಗಿದೆ. ಈ ಬಗ್ಗೆ ಶಾಸಕರು ಆಸ್ಥೆ ವಹಿಸಿ ಗ್ರಾಮದ ಅಭಿವದ್ಧಿಗೆ ನೆರವಾಗಬೇಕು’ ಎಂಬುದು ಗ್ರಾಮಸ್ಥರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT