ಶನಿವಾರ, ಮೇ 21, 2022
23 °C
ಹಳ್ಳ–ಕೊಳ್ಳಗಳಲ್ಲಿ ನೀರಿನ ರಭಸ, ಕೋಡಿ ಬಿದ್ದಿವೆ ಕೆರೆಗಳು; ಅರಣ್ಯ ಅಧಿಕಾರಿಗಳ ಸಂತಸ

ಮಳೆ ಅಬ್ಬರ; ಬಿಆರ್‌ಟಿಯಲ್ಲಿ ನೀರ ಹಾಡು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯು ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಜಲಮೂಲಗಳು ಉಕ್ಕೇರುವಂತೆ ಮಾಡಿದ್ದು, ಹಳ್ಳ–ಕೊಳ್ಳ ತುಂಬಿ ರಭಸದಿಂದ ಹರಿಯುತ್ತಿವೆ.

ಶನಿವಾರ ರಾತ್ರಿ ಸುರಿದ ಭರ್ಜರಿ ವರ್ಷಧಾರೆಗೆ ಬಿಆರ್‌ಟಿ ಅರಣ್ಯದ ಹಲವು ಹಳ್ಳಗಳಲ್ಲಿ ಪ್ರವಾಹ ಸ್ಥಿತಿಯೇ ಸೃಷ್ಟಿಯಾಗಿತ್ತು.

ಕೆ.ಗುಡಿ ರಸ್ತೆಯಲ್ಲಿ ಹೊಂಡರಬಾಳು ಗೇಟಿನ ನಂತರ ಸಿಗುವ ಮುತ್ತಪ್ಪನ ಪಾಲ ಎಂಬಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದುದರಿಂದ ವಾಹನಗಳ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತ್ತು.

ಹಳ್ಳದ ಮೇಲೆಯೇ ರಸ್ತೆ ಮಾಡಲಾಗಿದ್ದು, ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದ್ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯು ಬಿದರೆ ವಾಹನಗಳು ಏನೂ ತೊಂದರೆ ಇಲ್ಲದೆ ಸಾಗುತ್ತವೆ. 

ಆದರೆ, ಭಾನುವಾರ ನೀರಿನ ಸೆಳೆತ ಎಷ್ಟಿತ್ತೆಂದರೆ, ವಾಹನಗಳು ಹೋಗುವುದಕ್ಕೆ ಸಾಧ್ಯವೇ ಇರಲಿಲ್ಲ. ಎರಡೂ ಬದಿಗಳಲ್ಲಿ ವಾಹನ ಸವಾರರು ನೀರಿನ ಹರಿವು ತಗ್ಗುವುದಕ್ಕೆ ಕಾಯುವುದು ಅನಿವಾರ್ಯವಾಯಿತು.

ಪ್ರವಾಸಿಗರು ವಾಹನಗಳಿಂದ ಕೆಳಗಿಳಿದು ನೀರಿನ ಹರಿಯುವಿಕೆಯನ್ನು ನೋಡುತ್ತಾ ಸಮಯ ಕಳೆದರು. ಕೆಲವರು, ವಿಡಿಯೊ, ಫೋಟೊ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲೂ ಹರಿ ಬಿಟ್ಟರು. 

ಹೊಂಡರಬಾಳು ಗೇಟಿನ ಬಳಿಯೂ ಭಾರಿ ಪ್ರಮಾಣದಲ್ಲಿ ನೀರು ನಿಂತು ರಸ್ತೆ ಜಲಾವೃತವಾಗಿತ್ತು. 

‘ಶನಿವಾರ ರಾತ್ರಿ ಚೆನ್ನಾಗಿ ಮಳೆಯಾ ಗಿತ್ತು. ಹಾಗಾಗಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಹೊಂಡರಬಾಳು ಗೇಟ್‌ ಸೇರಿದಂತೆ ತಗ್ಗು ಪ್ರದೇಶಗಳಲ್ಲೆಲ್ಲಾ ನೀರು ನಿಂತಿತ್ತು’ ಎಂದು ಕೆ.ಗುಡಿ ವಲಯ ಅರಣ್ಯಾಧಿಕಾರಿ ಶಾಂತಪ್ಪ ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಮುತ್ತಪ್ಪನ ಪಾಲ ಹಳ್ಳ ಮಾತ್ರವಲ್ಲದೇ, ಅರಣ್ಯ ವ್ಯಾಪ್ತಿಯ ಎಲ್ಲ ಹಳ್ಳ ಕೊಳ್ಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಉತ್ತಮ ಮಳೆ: ಈ ಬಾರಿ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ಬಹುತೇಕ ಕೆರೆ ಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು
ಹರಿದಿದೆ. ಎಲ್ಲ ಜಲಮೂಲಗಳು ಕೋಡಿ ಬಿದ್ದಿವೆ ಎಂದು ಹೇಳುತ್ತಾರೆ ಅವರು.

‘ಕೆ.ಗುಡಿ ವಲಯದ ಎಲ್ಲ ಕೆರೆಗಳು ಭರ್ತಿಯಾಗಿ ನೀರು ಹೊರಗಡೆ ಹೋಗುತ್ತಿದೆ. ಬೇರೆ ವಲಯಗಳಲ್ಲೂ ಇದೇ ಸ್ಥಿತಿ ಇದೆ. ಕಳೆದ ಬಾರಿ ಮಳೆಯಾಗಿದ್ದರೂ, ಈ ಬಾರಿಯಷ್ಟು ಆಗಿಲ್ಲ. ಅರಣ್ಯ ಸಿಬ್ಬಂದಿಗೆ ಇದು ಅತ್ಯಂತ ಸಂತಸದ ವಿಚಾರ. ಮುಂದಿನ ವರ್ಷ ಪ್ರಾಣಿಗಳಿಗೆ ನೀರಿನ ಕೊರತೆ ಕಾಡದು’ ಎಂದು ಶಾಂತಪ್ಪ ಪೂಜಾರ ವಿವರಿಸಿದರು.

ಮುಂದುವರೆಯಲಿದೆ ಮಳೆ

ಎರಡು ಮೂರು ದಿನಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಭಾನುವಾರ, ಸೋಮವಾರ ಕೊಂಚ ಕಡಿಮೆ ಮಳೆಯಾಗಿದೆ. ಸೋಮವಾರ ಬೆಳಿಗ್ಗೆ 8.30ರವರೆಗೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ 0.24 ಸೆಂ.ಮೀ. ಮಳೆಯಾಗಿದೆ. ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣವಿದ್ದರೂ ಹೆಚ್ಚು ಮಳೆಯಾಗಿಲ್ಲ. ಅಲ್ಲಲ್ಲಿ ಚದುರಿದಂತೆ ಮಳೆ ಬಿದ್ದಿದೆ.

ಜಿಲ್ಲೆಯಾದ್ಯಂತ 23ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 21ರವರೆಗೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿಯಲಿದ್ದು, 22, 23ರಂದು ಕ್ರಮವಾಗಿ 1.5 ಸೆಂ.ಮೀ, 1.6 ಸೆಂ.ಮೀ.ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು