ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಉದ್ಯೋಗಮೇಳ: 1,054 ಜನ ಭಾಗಿ, 916 ಮಂದಿ ಆಯ್ಕೆ

ಜಿಲ್ಲಾ ಪಂಚಾಯಿತಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ
Last Updated 23 ಡಿಸೆಂಬರ್ 2021, 20:15 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಪಂಚಾಯಿತಿಯುಜಿಲ್ಲಾ ಪಂಚಾಯಿತಿಯ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ, ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್‌ನ ಡಿಡಿಯು-ಜಿಕೆವೈ ಯೋಜನೆಯಡಿ ’ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಭಿಯಾನ’ ಕಾರ್ಯಕ್ರಮದಡಿ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮೇಳದಲ್ಲಿ ಸ್ಥಳೀಯ ಹಾಗೂ ಹೊರ ಜಿಲ್ಲೆಗಳ 25 ಸಂಸ್ಥೆಗಳು ಭಾಗವಹಿಸಿದ್ದವು. 1,054 ಮಂದಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 916 ಅಭ್ಯರ್ಥಿಗಳು ಕೌಶಲ ತರಬೇತಿ ಹಾಗೂ ಉದ್ಯೋಗಕ್ಕಾಗಿ ನೇರ ನೇಮಕಾತಿಯಾಗಿದೆ.

ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿರುವ ಸಂಸ್ಥೆಗಳು, ಅವರಿಗೆ ತರಬೇತಿ ನೀಡಿ ನಂತರ ಕೆಲಸ ನೀಡಲಿವೆ. ನರ್ಸಿಂಗ್‌ ಸೇರಿದಂತೆ ಇನ್ನಿತರ ಕೆಲವು ಹುದ್ದೆಗಳಿಗೆ ಅಭ್ಯರ್ಥಿಗಳು ನೇರ ನೇಮಕಾತಿಗೊಂಡಿದ್ದಾರೆ. ಇವರ ವಿವರ ಇನ್ನಷ್ಟೇ ತಿಳಿಯಬೇಕಿದೆ.

‘25 ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, ಗ್ರಾಮೀಣ ಯುವಕ ಯುವತಿಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕೋವಿಡ್‌ ಕಾರಣಕ್ಕೆ ಹಲವರು ಕೆಲಸ ಕಳೆದುಕೊಂಡು ಮನೆಯಲ್ಲಿದ್ದರು. ಅಂತಹವರಿಗೆ ಈ ಮೇಳದಿಂದ ಅನುಕೂಲವಾಗಿದೆ’ ಎಂದು ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಕೃಷ್ಣರಾಜ್‌ ಅವರು ’ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮೀಣ ನಿರುದ್ಯೋಗ ಯುವಕ, ಯುವತಿಯರನ್ನು ಗುರಿಯಾಗಿಸಿಕೊಂಡು ಈ ಮೇಳವನ್ನು ಆಯೋಜಿಸಲಾಗಿತ್ತು. 8ನೇ ತರಗತಿ, ಎಸ್ಸೆಸ್ಸೆಲ್ಸಿ, ಪಿಯುಸಿ, ಬಿ.ಎ, ಬಿ.ಕಾಂ, ಬಿ.ಎಸ್ಸಿ, ಐಟಿಐ, ಡಿಪ್ಲೊಮಾ, ಬಿ.ಇ, ಬಿ.ಟೆಕ್, ಸ್ನಾತಕೋತ್ತರ ಪದವಿ ಹಾಗೂ ಇತರೆ ವಿದ್ಯಾರ್ಹತೆ ಹೊಂದಿದ 18ರಿಂದ 35ವರ್ಷದ ಗ್ರಾಮೀಣ ಯುವಕ ಯುವತಿಯರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಎಲ್‌ಐಸಿ, ಏರ್‌ಟೆಲ್‌, ಶಾಹಿ ಎಕ್ಸ್‌ಪೋರ್ಟ್ಸ್‌, ಅಪೋಲೊ ಹೋಂ ಹೆಲ್ತ್‌ ಕೇರ್‌, ಟೀಮ್ ಲೆಸ್‌ ಸರ್ವಿಸಸ್‌, ಬಿವಿಜಿ ಎಜುಕೇಷನಲ್ ಟ್ರಸ್ಟ್‌, ಸಂವಿತ್‌ ಎಜುಕೇಷನಲ್‌ ಟ್ರಸ್ಟ್‌, ಎಕ್ಸೆಂಟ್ರಿಕ್‌ ಸೊಲ್ಯೂಷನ್ಸ್‌, ಎಕ್ಸ್‌ಟ್ರೀಮ್‌ ಸಾಫ್ಟ್‌ ಟೆಕ್‌ ಸೇರಿದಂತೆ ಶೈಕ್ಷಣಿಕ, ಕೌಶಲ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಕಂಪನಿಗಳು ಹಾಗೂ ಸಂಸ್ಥೆಗಳು ಮೇಳದಲ್ಲಿದ್ದವು.

ಕೋವಿಡ್‌ನಿಂದ ವಿಳಂಬ: ಇದಕ್ಕೂ ಮೊದಲು ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಅವರು, ‘ಕೋವಿಡ್ ಕಾರಣದಿಂದಾಗಿ ಜಿಲ್ಲೆಯಲ್ಲಿ ಒಂದೂವರೆ ವರ್ಷದಿಂದ ಉದ್ಯೋಗ ಮೇಳ ಆಯೋಜನೆ ಯಾಗಿರಲಿಲ್ಲ. ಕೋವಿಡ್‌ ಸೇರಿದಂತೆ ಇನ್ನಿತರ ಕಾರಣಗಳಿಂದ ಜಿಲ್ಲೆಯ ಯುವಕ ಯುವತಿಯರು ಉದ್ಯೋಗ ತೊರೆದು ಮತ್ತೆ ಊರಿಗೆ ಬಂದಿದ್ದಾರೆ. ಈ ಮೇಳದಿಂದ ಅವರಿಗೆಲ್ಲ ಅನುಕೂಲವಾಗಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕೃಷ್ಣರಾಜ್‌, ಮುಖ್ಯ ಲೆಕ್ಕಾಧಿಕಾರಿ ಮಿಲನಾ, ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ರಾಜೇಂದ್ರಪ್ರಸಾದ್, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಶ್ರೀಕಾಂತ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಅರುಣ್ ಕುಮಾರ್, ಜಿಲ್ಲಾ ಪಂಚಾಯಿತಿಯ ಎನ್ಆ‌ರ್‌ಎಲ್‌ಎಂ ವ್ಯವಸ್ಥಾಪಕ ಗೋವಿಂದರಾಜು ಇತರರು ಇದ್ದರು.

’ಸ್ವ ಉದ್ಯೋಗಕ್ಕೆ ಒತ್ತು ಕೊಡಿ’

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜ್ ಅವರು ಮಾತನಾಡಿ, ‘ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಉದ್ಯೋಗಾಕಾಂಕ್ಷಿಗಳು ಕೌಶಲ ತರಬೇತಿ ಪಡೆದು ಸ್ವ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

‘30 ವರ್ಷಗಳ ಹಿಂದೆಗೆ ಹೋಲಿಸಿದರೆ ಈಗ ಸಾಕಷ್ಟು ಉದ್ಯೋಗವಕಾಶಗಳಿವೆ. ನಮ್ಮಲ್ಲಿ ಉದ್ಯೋಗ ಪಡೆಯಲು ಕೌಶಲ ಇದೆಯೇ ಎಂಬುದನ್ನು ನೋಡಬೇಕು. ಸಣ್ಣ ಕೆಲಸ, ದೊಡ್ಡ ಕೆಲಸ ನೋಡದೆ, ಆರಂಭದಲ್ಲಿ ಕೆಲಸಕ್ಕೆ ಸೇರಿ ನಂತರ ನಿರಂತರ ಪ್ರಯತ್ನ ಮುಂದುವರೆಸಿ ಉನ್ನತ ಹುದ್ದೆಗೆ ಹೋಗುವುದಕ್ಕೆ ಅವಕಾಶ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT