ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಟೈರ್‌ ಸುಟ್ಟು ಸರ್ಕಾರದ ವಿರುದ್ಧ ಆಕ್ರೋಶ

ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳಿಗೆ ವಿರೋಧ; ಗಡಿ ಜಿಲ್ಲೆಯಲ್ಲಿ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ
Last Updated 28 ಸೆಪ್ಟೆಂಬರ್ 2020, 13:19 IST
ಅಕ್ಷರ ಗಾತ್ರ

ಚಾಮರಾಜನಗರ:ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆ ಹಾಗೂ ಮಸೂದೆಗಳನ್ನು ವಿರೋಧಿಸಿ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಗಡಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಎರಡು ರೈತ ಸಂಘಗಳು, ಕಬ್ಬು ಬೆಳೆಗಾರರ ಸಂಘ, ದಲಿತ ಸಂಘಟನೆಗಳು, ಪ‍್ರಗತಿಪರ ಸಂಘಟನೆಗಳ ಒಕ್ಕೂಟ, ಕಾರ್ಮಿಕ ಸಂಘಟನೆ, ಎಸ್‌ಡಿಪಿಐ, ಕರ್ನಾಟಕ ರಕ್ಷಣಾ ವೇದಿಕೆ, ಬಹುಜನ ವಿದ್ಯಾರ್ಥಿ ಸಂಘ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬಂದ್‌ನಲ್ಲಿ ಭಾಗಿಯಾದರು. ಕಾಂಗ್ರೆಸ್‌ ಪಕ್ಷ ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿತು.

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನರ ಓಡಾಟ ಕಡಿಮೆ ಇತ್ತು.ಸರ್ಕಾರಿ ಕಚೇರಿ, ಆಸ್ಪತ್ರೆ, ಬ್ಯಾಂಕ್‌ಗಳು ತೆರೆದಿದ್ದವು. ಔಷಧ ಅಂಗಡಿಗಳು, ಹಾಲಿನ ಕೇಂದ್ರಗಳು ಎಂದಿನಂತೆ ವಹಿವಾಟು ನಡೆಸಿದವು. ದಿನಸಿ, ಬೇಕರಿ, ಮಾಂಸ ಅಂಗಡಿಗಳು ಸೇರಿದಂತೆಹೆಚ್ಚಿನ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದಿದ್ದವು. ಹೆಚ್ಚಿನ ಹೋಟೆಲ್‌ಗಳು ಮುಚ್ಚಿದ್ದರೆ, ಇನ್ನೂ ಕೆಲವು ಕಾರ್ಯನಿರ್ವಹಿಸಿದವು.

ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದವು. ಆದರೆ, ನಂತರ ಪ್ರತಿಭಟನನಿರತರು ಬಸ್‌ ನಿಲ್ದಾಣಕ್ಕೆ ಹೋಗಿ ಬಸ್‌ ಓಡಿಸಬಾರದು ಎಂದು ಪಟ್ಟು ಹಿಡಿದು ಬಸ್‌ಗಳ ಸಂಚಾರವನ್ನು ತಡೆದರು.ಪ್ರಯಾಣಿಕರು ಇಲ್ಲದ ಕಾರಣಕ್ಕೆ ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿಲ್ಲ.ಆಟೊಗಳ ಓಡಾಟ ಎಂದಿನಂತೆಯೇ ಇತ್ತು. ಖಾಸಗಿ ವಾಹನ ಉಳ್ಳವರ ಸಂಚಾರಕ್ಕೆ ತೊಂದರೆಯಾಗಲಿಲ್ಲ.

ಟೈರ್‌ಗೆ ಬೆಂಕಿ, ರಸ್ತೆ ತಡೆ:ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಟೈರ್‌ಗೆ ಬೆಂಕಿ ಹಾಕಿ, ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಬೆಳಿಗ್ಗೆ 6 ಗಂಟೆಗೇ ಸೇರಿದ ಪ್ರತಿಭಟನನಿರತರು ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಖ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು, ಸಂಸದರು ಹಾಗೂ ಸರ್ಕಾರ ರೈತರ ಪಾಲಿಗೆ ಸತ್ತುಹೋಗಿದೆ ಎಂದು ಎಂದು ಬಾಯಿಬಡಿದು, ಕುಣಿದು ಆಕ್ರೋಶ ವ್ಯಕ್ತಪಡಿಸಿದರು.

ಡಿವಿಯೇಷನ್ ರಸ್ತೆಯ ಮೂಲಕ ಬೈಕ್ ರ‍್ಯಾಲಿ ನಡೆಸಿದ ಪ್ರತಿಭಟನನಿರತರು ಎಪಿಎಂಸಿ ಹತ್ತಿರ ಸತ್ತಿರಸ್ತೆಯಲ್ಲಿ ಟೈರ್‌ಗೆ ಬೆಂಕಿಹಚ್ಚಿ ರಸ್ತೆ ತಡೆ ನಡೆಸಿದರು. ಸಂತೇಮರಹಳ್ಳಿ ವೃತ್ತದಲ್ಲಿ, ಜೋಡಿರಸ್ತೆಯಲ್ಲೂ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎ.ಎಂ.ಮಹೇಶ್‌ಪ್ರಭು, ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಹೆಬ್ಬಸೂರು ಬಸವಣ್ಣ ಎನ್.ಮಹೇಶ್ ಅಭಿಮಾನಿ ಬಳಗದ ಆಲೂರುಮಲ್ಲು, ನಿಜಧ್ವನಿಗೋವಿಂದರಾಜ್, ಮೂಕಳ್ಳಿಮಹದೇವಸ್ವಾಮಿ, ಪಟೇಲ್‌ಶಿವಮೂರ್ತಿ, ಪಾಲಹಳ್ಳಿ ಕುಮಾರ್, ಕುಂತೂರು ಪ್ರಭುಸ್ವಾಮಿ, ನಾಗರಾಜು, ಪರ್ವತ್‌ರಾಜ್, ಸುಂದರ್‌ರಾಜ್, ಸಿದ್ದರಾಜು, ಚೆನ್ನಬಸಪ್ಪ, ಸಿ.ಎಸ್.ಸೈಯದ್ ‌ಆರೀಪ್ ಇತರರು ಭಾಗವಹಿಸಿದ್ದರು.

ಕಾಂಗ್ರೆಸ್ ಬೆಂಬಲ‌: ಜಿಲ್ಲಾ ಕಾಂಗ್ರೆಸ್‌ ಸಮಿತಿಯೂ ಬಂದ್‌ಗೆ ಬೆಂಬಲ ನೀಡಿತ್ತು. ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌,ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಕಾಗಲವಾಡಿಚಂದ್ರು, ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಎಂ.ಶಿವಮೂರ್ತಿ,ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹಮ್ಮದ್‌ಅಸ್ಗರ್, ಗುರುಸ್ವಾಮಿ, ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT