ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಸೆರೆ‌: ಗ್ರಾಮಸ್ಥರ ನಿಟ್ಟುಸಿರು

ಬಂಡೀಪುರ: ಮೂರು ಗಂಟೆಯಲ್ಲಿ ವ್ಯಾಘ್ರನ ಸೆರೆ ಹಿಡಿಯಲು ಯಶಸ್ವಿಯಾದ ಅರಣ್ಯ ಇಲಾಖೆ
Last Updated 3 ಜುಲೈ 2022, 16:06 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಲಕ್ಕಿಪುರ ಗ್ರಾಮದಲ್ಲಿ ರೈತರಿಬ್ಬರ ಮೇಲೆ ದಾಳಿ ಮಾಡಿದ್ದ. ಹಸುವನ್ನು ಕೊಂದಿದ್ದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಯಶಸ್ವಿಯಾಗುತ್ತಿದ್ದಂತೆಯೇ ಆತಂಕದ ಮಡುವಿನಲ್ಲಿದ್ದ ಗೋಪಾಲಪುರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಇದುವರೆಗೆ ಹುಲಿ, ಚಿರತೆ ಮುಂತಾದ ಪ್ರಾಣಿಗಳು ಜಾನುವಾರುಗಳ ಮೇಲೆ ದಾಳಿ ಮಾಡಿದ್ದರೂ, ಜನರ ಮೇಲೆ ಎರಗಿರಲಿಲ್ಲ. ಒಂದೇ ದಿನ ಇಬ್ಬರ ಮೇಲೆ ವ್ಯಾಘ್ರ ದಾಳಿ ಮಾಡಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಶೀಘ್ರವಾಗಿ ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು.

ಬೆಳಿಗ್ಗೆಯೇ ಕಾರ್ಯಾಚರಣೆ: ದಾಳಿ ಮಾಡಿದ ಬಳಿಕ ಪಕ್ಕದ ಜಮೀನಿನಲ್ಲೇ ಅವಿತು ಕುಳಿತಿದ್ದ ಹುಲಿಯನ್ನು ಸೆರೆ ಹಿಡಿಯುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸಿದ್ದರು. ಕೃಷಿ ಜಮೀನಿನಲ್ಲಿ ಹುಲಿಯ ಚಲನವಲನ ನೋಡಿದ್ದ ಸಿಬ್ಬಂದಿ, ಅದರ ಕಾಲಿಗೆ ಗಾಯವಾಗಿರುವುದನ್ನು ಗಮನಿಸಿದ್ದರು.

ಹಾಗಾಗಿ, ಅದನ್ನು ಸೆರೆ ಹಿಡಿಯುದಕ್ಕೆ ಅನುಮತಿ ಪಡೆಯುವುದಕ್ಕಾಗಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್‌ ಅವರು ಹೆಚ್ಚುವರಿ ಪ್ರಧಾನ ಮುಖ್ಯ ಆರಣ್ಯ ಸಂರಣ್ಯಾಧಿಕಾರಿಗಳು (ವನ್ಯಜೀವಿ), ಪ್ರಧಾನ ಮುಖ್ಯ ಅರಣ್ಯ ಸಂರಣ್ಯಾಧಿಕಾರಿ (ವನ್ಯಜೀವಿ) ಹಾಗೂ ವನ್ಯಜೀವಿ ಪರಿಪಾಲಕರು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಐ.ಜಿ ಅವರನ್ನು ಸಂಪರ್ಕಿಸಿದ್ದರು. ಎಲ್ಲರ ಅನುಮತಿ ದೊರೆತ ನಂತರ ಭಾನುವಾರ ಬೆಳಿಗ್ಗೆ ಬೇಗ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದ್ದರು. ಎರಡು ಸಾಕಾನೆಗಳನ್ನು ಕರೆಸಲೂ ನಿರ್ಧರಿಸಿದ್ದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆಯಿಂದಲೇ ಜಿಟಿ ಜಿಟಿ ಮಳೆಯಾಗುತ್ತಿತ್ತು. ಸುರಿಯುತ್ತಿದ್ದ ಮಳೆಯ ನಡುವೆಯೇ ಬೆಳಿಗ್ಗೆ 6 ಗಂಟೆಗೆ ಅಭಿಮನ್ಯು ಹಾಗೂ ಶ್ರೀಕಂಠ ಆನೆಗಳನ್ನು ಬಳಸಿಕೊಂಡು ಹುಲಿಯ ಪತ್ತೆ ಕಾರ್ಯಾಚರಣೆಯನ್ನು ಸಿಬ್ಬಂದಿ ಆರಂಭಿಸಿದ್ದರು. ಅರಿವಳಿಕೆ ಚುಚ್ಚುಮದ್ದು ನೀಡುವುದಕ್ಕಾಗಿ ಇಲಾಖೆಯ ಪಶು ವೈದ್ಯರಾದಮಿರ್ಜಾ ವಾಸೀಂ, ಹಾಗೂ ಮುಜೀಬ್‌ ರೆಹಮಾನ್ ಅವರೂ ಇದ್ದರು. ಹುಲಿ ಪತ್ತೆಯಾದಾಗ ವೈದ್ಯರು ಅರಿವಳಿಕೆ ಚುಚ್ಚುಮದ್ದು ಹೊಡೆದರು. ಒಟ್ಟು ಮೂರು ಬಾರಿ ಚುಚ್ಚುಮದ್ದು ಹೊಡೆಯಲಾಯಿತು.

ತೀವ್ರವಾಗಿ ನಿತ್ರಾಣಗೊಂಡು ಬಿದ್ದಿದ್ದ ಹುಲಿಯನ್ನು ಬಲೆಯಲ್ಲಿ ಸೆರೆ ಹಿಡಿದು ನಂತರ ಬೋನಿಗೆ ಸ್ಥಳಾಂತರಿಸಲಾಯಿತು.

ಹಲವು ಕಡೆ ಗಾಯ:ಸೆರೆಯಾದ ಹುಲಿಯನ್ನು ವೈದ್ಯರು ಪರಿಶೀಲಿಸಿದಾಗ ಹುಲಿಯ ಕಾಲು, ಭುಜದ ಹಿಂಭಾಗ, ಹೊಟ್ಟೆ ಭಾಗ, ಬಾಲದ ಬುಡದಲ್ಲಿ ಗಂಭೀರ ಗಾಯಗಳಾಗಿರುವುದು ಕಂಡು ಬಂದಿದೆ. ಮುಂಭಾಗದ ಎರಡು ಕಾಲುಗಳು ಸವೆದಿರುವುದನ್ನು ಗಮನಿಸಿ ಚಿಕಿತ್ಸೆಗಾಗಿ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ತೀರ್ಮಾನಿಸಲಾಯಿತು.

ಸೆರೆ ಹಿಡಿದ ನಂತರ ಹುಲಿಯನ್ನು ಬಂಡೀಪುರಕ್ಕೆ ತೆಗೆದುಕೊಂಡು ಹೋಗಲಾಯಿತು. ಮೇಲುಕಾಮನಹಳ್ಳಿ ಬಳಿಯಲ್ಲಿ ವಾಹನ ನಿಲ್ಲಿಸಿದಾಗ ಸೆರೆ ಹಿಡಿದ ಹುಲಿಯನ್ನು ನೋಡಲು ಜನರು ಮುಂದಾದರು.

ಹಸು ತಿನ್ನಲು ಬಂದ ವಾಘ್ರ: ಹುಲಿ ಜಮೀನಿನಲ್ಲೇ ಇದ್ದುದರಿಂದ ಅದರ ಚಲನವಲನದ ಮೇಲೆ ನಿಗಾ ಇಡುವುದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ರಾತ್ರಿ ಜಮೀನಿನ ಬಳಿಯೇ ಬೀಡು ಬಿಟ್ಟಿದ್ದರು.

ಹಸಿದಿದ್ದ ಹುಲಿ ರಾತ್ರಿ ಹೊತ್ತು ತಾನು ಕೊಂದಿದ್ದ ಹಸುವನ್ನು ತಿನ್ನಲು ಬೆಳಿಗ್ಗೆ ಬಂದಿತ್ತು. ಈ ದೃಶ್ಯವನ್ನುಸಿಬ್ಬಂದಿ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಜಿಲ್ಲಾಧಿಕಾರಿ ಉಪಸ್ಥಿತಿ: ಶನಿವಾರ ರಾತ್ರಿ ಗೋಪಾಲಪುರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಭಾನುವಾರ ಬೆಳಿಗ್ಗೆ ಕಾರ್ಯಾಚರಣೆ ಸಂದರ್ಭದಲ್ಲೂ ಇದ್ದರು.

‘ಜಿಲ್ಲಾಧಿಕಾರಿ ಅವರು ರಾತ್ರಿ ಭೇಟಿ ಮಾಡಿ ಗ್ರಾಮಸ್ಥರನ್ನುಮಾತನಾಡಿಸಿ ಧೈರ್ಯ ತುಂಬಿದರು. ಬಳಿಕ ಮಧ್ಯರಾತ್ರಿ ಮತ್ತೆ ಗ್ರಾಮಕ್ಕೆ ಬಂದು ಕಾರ್ಯಾಚರಣೆ ಮುಗಿಯುವವರೆಗೂ ಗ್ರಾಮದಲ್ಲಿಯೇ ಇದ್ದರು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್‌ ತಿಳಿಸಿದರು.

ಡಿ.ಸಿಗೆ ಗ್ರಾಮಸ್ಥರ ಮನವಿ

ತಾಲ್ಲೂಕಿನ ಅನೇಕ ಗ್ರಾಮಗಳು ಕಾಡಂಚಿನಲ್ಲಿ ಬರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ. ರಾತ್ರಿ ಸಮಯದಲ್ಲಿ ಜಮೀನುಗಳಿಗೆ ಹೋಗಿ ಬರಲು ತೊಂದರೆಯಾಗುತ್ತದೆ. ಆದ್ದರಿಂದ ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬದಲು ಹಗಲಿನಲ್ಲೇ ಮೂರು ಫೇಸ್ ವಿದ್ಯುತ್ ಪೂರೈಕೆ, ರೈತರ ಜಮೀನುಗಳಿಗೆ ಸೋಲಾರ್ ವಿದ್ಯುತ್ ತಂತಿ ಬೇಲಿ ಅಳವಡಿಸಲು ಹೆಚ್ಚಿನ ಸಬ್ಸಿಡಿ, ಹಸು ಕಳೆದುಕೊಂಡ ಮತ್ತು ಗಾಯಾಳು ರೈತರಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಚಾರುಲತಾ ಅವರಿಗೆ ಮನವಿ ಸಲ್ಲಿಸಿದರು.

ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಅವುಗಳನ್ನು ಪರಿಹ‌ರಿಸುವುದಕ್ಕೆ ಕ್ರಮ ವಹಿಸು ವುದಾಗಿ ಭರವಸೆ ನೀಡಿದರು.

ಆರೋಗ್ಯ ಚೇತರಿಕೆ: ಈ ಮಧ್ಯೆ, ಹುಲಿ ದಾಳಿಯಿಂದಾಗಿ ಗಾಯಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗವಿಯಪ್ಪ ಹಾಗೂ ಗುಂಡ್ಲುಪೇಟೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜಶೇಖರ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

--

ಅಧಿಕಾರಿಗಳು, ಸಿಬ್ಬಂದಿ ಮತ್ತು ಗ್ರಾಮಸ್ಥರ ಸಹಾಯದಿಂದ ಹುಲಿಯನ್ನು ಶೀಘ್ರವಾಗಿ ಸೆರೆ ಹಿಡಿಯಲು ಸಾಧ್ಯವಾಗಿದೆ
ಡಾ.ಪಿ.ರಮೇಶ್‌ಕುಮಾರ್‌, ಹುಲಿ ಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT