ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗುಮಟಾಪುರದಲ್ಲಿ ವಿಜೃಂಭಣೆಯ ಗೊರೆ ಹಬ್ಬ

ಚಾಮರಾಜನಗರ: ಸೆಗಣಿಯಲ್ಲಿ ಹೊಡೆದಾಡಿಕೊಂಡ ಜನರು, ನೂರಾರು ಗ್ರಾಮಸ್ಥರು ಭಾಗಿ
Last Updated 27 ಅಕ್ಟೋಬರ್ 2022, 16:14 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಗಡಿಭಾಗ ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಗುಮಟಾಪುರದಲ್ಲಿ ಸೆಗಣಿಯಲ್ಲಿ ಹೊಡೆದಾಡುವ ‘ಗೊರೆ ಹಬ್ಬ’ಗುರುವಾರ ವಿಜೃಂಭಣೆಯಿಂದ ನಡೆಯಿತು.

ಶತಮಾನದಿಂದಲೂ ದೀಪಾವಳಿ ಹಬ್ಬದ ಮಾರನೇ ದಿನ ನಡೆಯುವ ಈ ಹಬ್ಬದಲ್ಲಿ ಗುಮಟಾಪುರ ಹಾಗೂ ಸುತ್ತಮುತ್ತಲಿನ ಜನರು ಉತ್ಸಾಹದಿಂದ ಪಾಲ್ಗೊಂಡರು. ದೊಡ್ಡ ದೊಡ್ಡ ಸೆಗಣಿ ಉಂಡೆಗಳನ್ನು ಪರಸ್ಪರ ಎರಚಾಡುತ್ತಾ ಗಂಟೆಗೂ ಹೆಚ್ಚು ಕಾಲ ಹೊಡೆದಾಡಿದರು.

ತಾಳವಾಡಿ ತಮಿಳುನಾಡಿಗೆ ಸೇರಿದ್ದರೂ, ಅಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗೊರೆ ಹಬ್ಬದಲ್ಲಿ ಭಾಗವಹಿಸುವವರೆಲ್ಲರೂ ಕನ್ನಡಿಗರೇ. ಜಾತಿ ಮತ, ವಯಸ್ಸಿನ ಭೇದವಿಲ್ಲದೆ ಎಲ್ಲರೂ ಈ ಬಡಿದಾಟದಲ್ಲಿ ಭಾಗಿಯಾಗುವುದು ವಿಶೇಷ.ಪಟಾಕಿ, ಮಂಗಳವಾದ್ಯಗಳ ಸದ್ದು, ಜನರ ಕೇಕೆ, ಶಿಳ್ಳೆ, ಅರಚಾಟ, ಕೂಗಾಟಗಳು ಸೆಗಣಿ ಎರಚಾಟದಲ್ಲಿ ತೊಡಗಿದ್ದವರ ಉತ್ಸಾಹ ಇಮ್ಮಡಿಗೊಳಿಸಿತ್ತು.

‌ಗ್ರಾಮದ ಬೀರೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಅಂಬೇಡ್ಕರ್‌ ಕಾಲೊನಿಯಲ್ಲಿ ಈ ಹಬ್ಬ ನಡೆಯಿತು. ಹಬ್ಬಕ್ಕಾಗಿ ಬೆಳಿಗ್ಗೆಯಿಂದಲೇ ಸೆಗಣಿ ಸಂಗ್ರಹಿಸಿ ಎರಡು ದೊಡ್ಡ ರಾಶಿಗಳನ್ನು ಮಾಡಲಾಗಿತ್ತು.

ಚಾಡಿಕೋರನ ಮೆರವಣಿಗೆ: ಈ ಹಬ್ಬದ ಇನ್ನೊಂದು ವಿಶೇಷ ಎಂದರೆ ಚಾಡಿಕೋರನ ಮೆರವಣಿಗೆ.ಮಧ್ಯಾಹ್ನ 2.30ಕ್ಕೆ ಸುಮಾರಿಗೆ ಗ್ರಾಮದ ಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಕ್ಕಳು ಸಾಂಕೇತಿಕವಾಗಿ ಸಗಣಿ ಎರಚಾಡಿಕೊಳ್ಳುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು.

ನಂತರ ಚಾಡಿಕೋರನ ಮೆರವಣಿಗೆ ನಡೆಯಿತು. ಹುಲ್ಲಿನ ಮೀಸೆ, ದಾಡಿ ಹಾಗೂ ಹಂಬು ಸೊಪ್ಪಿನ ಹಾರ ಧರಿಸಿದ್ದ ಚಾಡಿಕೋರನನ್ನು ಕತ್ತೆ ಮೇಲೆ ಕೂರಿಸಲಾಯಿತು. ಆರ್‌.ಮಹದೇವ ಆವರು 44ನೇ ಬಾರಿಗೆಚಾಡಿಕೋರನ ಪಾತ್ರ ನಿರ್ವಹಿಸಿದರು.

ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ, ಚಾಡಿಕೋರರನ್ನು ಬೀರೇಶ್ವರ ದೇವಾಲಕ್ಕೆ ಕರೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯದ ಅರ್ಚಕರು ಸೆಗಣಿಯ ರಾಶಿಗಳಿಗೆ ಪೂಜೆ ಸಲ್ಲಿಸಿದರು. ನಂತರ ಹೊಡೆದಾಟ ನಡೆಯಿತು. ಸಂಜೆ ಗೊಂಡೆಕಾರನಗುಡ್ಡದಲ್ಲಿ ಚಾಡಿಕೋರನ ಪ್ರತಿಕೃತಿಯನ್ನು ದಹಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.

ಬೀರಪ್ಪನ ಪವಾಡದ ಕಥೆ
ಗೊರೆ ಹಬ್ಬ ಆಚರಣೆಯ ಹಿಂದೆ ಪವಾಡದ ಕಥೆಯೊಂದಿದೆ. ಗ್ರಾಮಸ್ಥರು ಅದನ್ನು ರಸವತ್ತಾಗಿ ಹೇಳುತ್ತಾರೆ.

ಹಿಂದೆ ಬೀರಪ್ಪ ಎಂಬ ವ್ಯಕ್ತಿ ಗ್ರಾಮದ ಜಮೀನ್ದಾರನ ಬಳಿ ಜೀತ ಮಾಡಿಕೊಂಡಿದ್ದ. ಜಮೀನ್ದಾರನ ಮಗನಂತೆಯೇ ಬೆಳೆದಿದ್ದ ಆತನಿಗೆ ದೇವರ ಮೇಲೆ ಭಕ್ತಿ ಹೆಚ್ಚಿತ್ತು.ಬೀರಪ್ಪ ನಿಧನಹೊಂದಿದ ಬಳಿಕ ಆತ ಬಳಸುತ್ತಿದ್ದ ಬೆತ್ತ ಹಾಗೂ ಜೋಳಿಗೆಯನ್ನು ಜಮೀನ್ದಾರ ಕಸದ ರಾಶಿಗೆ ಎಸೆಯುತ್ತಾನೆ.

‘ತಿಪ್ಪೆಯಿಂದ ಕಸ ತೆರವುಗೊಳಿಸುವ ಸಂದರ್ಭದಲ್ಲಿ ಎತ್ತಿನ ಗಾಡಿಯ ಚಕ್ರಕ್ಕೆ ಕಲ್ಲೊಂದು ಸಿಕ್ಕಿ ಒಡೆಯುತ್ತದೆ. ಅದರಲ್ಲಿ ರಕ್ತ ಸುರಿಯುತ್ತದೆ. ಬೀರಪ್ಪನ ಬೆತ್ತ ಹಾಗೂ ಜೋಳಿಗೆಗಾಗಿ ಹುಡುಕಾಡಿದಾಗ ಅವುಗಳು ಸಿಗುವುದಿಲ್ಲ. ಅದು ಅದೇ ಲಿಂಗ ರೂಪವಾಗಿರುತ್ತದೆ’ ಎಂದು ಹೇಳುತ್ತಾರೆ ಗ್ರಾಮಸ್ಥರು.

ನಂತರಗ್ರಾಮಸ್ಥರ ಕನಸಿನಲ್ಲಿ ಕಾಣಿಸಿಕೊಳ್ಳುವ ಬೀರಪ್ಪ, ದೀಪಾವಳಿಯ ನಂತರ ಗೊರೆ ಹಬ್ಬ ಆಚರಿಸಬೇಕು ಎಂದು ಹೇಳುತ್ತಾನೆ. ಹಾಗಾಗಿ, ತಿಪ್ಪೆ ಗುಂಡಿ ಇದ್ದ ಜಾಗದಲ್ಲೇ ಬೀರಪ್ಪನ ದೇವಸ್ಥಾನ ನಿರ್ಮಿಸಲಾಗುತ್ತದೆ. ಅಂದಿನಿಂದಲೇ ಈ ಹಬ್ಬ ಆಚರಣೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT