ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡ ಪಾವತಿಗೆ ಸರ್ಕಾರಿ ನೌಕರರ ಹಿಂದೇಟು

ಜಿಲ್ಲೆಯ 562 ಮಂದಿ ಸಿಬ್ಬಂದಿ ಬಳಿ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌
Last Updated 17 ಮೇ 2022, 15:45 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ 562 ಸರ್ಕಾರಿ ನೌಕರರು ಅಂತ್ಯೋದಯ ಇಲ್ಲವೇ ಬಿಪಿಎಲ್‌ ಪಡಿತರ ಕಾರ್ಡ್‌ ಹೊಂದಿರುವುದು ಪತ್ತೆಯಾಗಿದ್ದು, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಈ ನೌಕರರ ಪಡಿತರ ಚೀಟಿ ರದ್ದುಪಡಿಸಿ ದಂಡ ವಸೂಲಿ ಮಾಡುತ್ತಿದೆ.

ಆರ್ಥಿಕವಾಗಿ ಸದೃಢರಾಗಿದ್ದರೂ ಸುಳ್ಳು ಮಾಹಿತಿ ನೀಡಿ ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿರುವವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಇಲಾಖೆ ನಡೆಸುತ್ತಿದೆ. ಶಿಕ್ಷಕರು, ಅಧಿಕಾರಿಗಳು, ಗ್ರೂಪ್‌ ಡಿ ಹುದ್ದೆಯವರು ಸೇರಿದಂತೆ ಹಲವು ಸರ್ಕಾರಿ ನೌಕರರು ಅಂತ್ಯೋದಯ ಇಲ್ಲವೇ ಬಿಪಿಎಲ್‌ ಪಡಿತರ ಚೀಟಿ ಹೊಂದಿ, ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯುತ್ತಿದ್ದುದು ಕಂಡು ಬಂದಿತ್ತು.

ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 98 ನೌಕರರು ಅಂತ್ಯೋದಯ ಪಡಿತರ ಚೀಟಿ ಹಾಗೂ 464 ಮಂದಿ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದಾರೆ.

ಈ ಎಲ್ಲ ಪಡಿತರ ಚೀಟಿ ರದ್ದುಪಡಿಸಿರುವ ಇಲಾಖೆ, ಎಲ್ಲರಿಗೂ ದಂಡ ಕಟ್ಟುವಂತೆ ತಾಕೀತು ಮಾಡಿದೆ. ಇದುವರೆಗೆ 35 ನೌಕರರು ದಂಡ ಪಾವತಿ ಮಾಡಿದ್ದಾರೆ. ಅದರಲ್ಲಿ ಏಳು ಮಂದಿ ಅಂತ್ಯೋದಯ ಕಾರ್ಡ್‌ನವರಾದರೆ, 28 ಮಂದಿ ಬಿಪಿಎಲ್‌ ಕಾರ್ಡ್‌ದಾರರು.

₹ 8.5 ಲಕ್ಷ ದಂಡ: ಈವರೆಗೆ ₹ 8,53,712 ದಂಡ ವಸೂಲಿ ಮಾಡಲಾಗಿದೆ. ಅಂತ್ಯೋದಯ ಕಾರ್ಡ್‌ ಹೊಂದಿದ್ದ ನೌಕರರಿಂದ ₹ 2,58,423 ಹಾಗೂ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದ ನೌಕರರಿಂದ ₹ 5,95,289 ವಸೂಲಿ ಮಾಡಲಾಗಿದೆ.

ದಂಡ ಪಾವತಿಗೆ ಹಿಂದೇಟು: ಇಲಾಖೆಯು ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿದ ನಂತರ ನೌಕರರು ಪಡಿತರ ಚೀಟಿಗಳನ್ನು ಇಲಾಖೆಗೆ ನೀಡಿದ್ದರೂ, ಹಲವರು ದಂಡ ಪಾವತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಮಾಡಿಸಿಕೊಂಡಾಗಿನಿಂದ ಅದು ರದ್ದು ಆಗುವವರೆಗಿನ ಅವಧಿಯಲ್ಲಿ ಪಡೆದ ಅಕ್ಕಿ ಹಾಗೂ ಇತರ ಪಡಿತರಗಳ ಮೌಲ್ಯವನ್ನು ಲೆಕ್ಕ ಹಾಕಿ ನೌಕರರಿಗೆ ದಂಡ ವಿಧಿಸಲಾಗುತ್ತಿದೆ. ಉದಾಹರಣೆಗೆ ಅಕ್ಕಿಗೆ ಒಂದು ಕೆ.ಜಿ.ಗೆ ₹ 23ರಂತೆ ದಂಡ ವಸೂಲಿ ಮಾಡಲಾಗುತ್ತಿದೆ.

ಹಲವು ವರ್ಷಗಳಿಂದ ಕಾರ್ಡ್‌ ಹೊಂದಿದ್ದರೆ ದಂಡದ ಮೊತ್ತ ಸಾವಿರಾರು ರೂಪಾಯಿ ಆಗುತ್ತದೆ. ಅಷ್ಟು ಮೊತ್ತವನ್ನು ಏಕಾಏಕಿ ಪಾವತಿ ಮಾಡಲು ನೌಕರರು ಸಿದ್ಧರಿಲ್ಲ. ಹಾಗಾಗಿ, ಹಲವು ಗಡುವು ನೀಡಿದರೂ ಬಹುತೇಕ ನೌಕರರು ಪಾವತಿ ಮಾಡಲು ಮುಂದಾಗಿಲ್ಲ.

ದಂಡ ಪಾವತಿ ಕಡ್ಡಾಯ

ಸುಳ್ಳು ಮಾಹಿತಿ ನೀಡಿ, ಬಡವರಿಗೆ ಮೀಸಲಾದ ಸೌಲಭ್ಯ ಪಡೆದಿರುವುದು ಅಪರಾಧ. ಸರ್ಕಾರ ನೌಕರರಿಂದ ದಂಡ ವಸೂಲು ಮಾಡಲು ಮಾತ್ರ ನಿರ್ಧರಿಸಿದೆ. ಹಾಗಾಗಿ, ದಂಡ ಪಾವತಿಸುವುದು ಕಡ್ಡಾಯ ಎಂದು ಹೇಳುತ್ತಾರೆ ಅಧಿಕಾರಿಗಳು.

‘ಎಲ್ಲ ನೌಕರರು ದಂಡ ಪಾವತಿಸುವುದು ಒಳ್ಳೆಯದು. ಒಂದು ವೇಳೆ ಪಾವತಿಸದೇ ಇದ್ದರೆ, ಇಲಾಖೆಯು ಅಂತಹ ನೌಕರರ ಪಟ್ಟಿಯನ್ನು ಆಯಾ ಇಲಾಖೆಗಳಿಗೆ ಕಳುಹಿಸುತ್ತದೆ. ಆಯಾ ಇಲಾಖೆಗಳು ಆ ನೌಕರರ ವೇತನದಲ್ಲಿ ಆ ಮೊತ್ತವನ್ನು ಕಡಿತ ಮಾಡಲಿವೆ. ಜೊತೆಗೆ, ಈ ಬಗ್ಗೆ ಷರಾವನ್ನೂ ಬರೆಯಲಿವೆ. ನೌಕರರ ಸೇವಾ ಅವಧಿಯಲ್ಲಿ ಇದೊಂದು ಕಪ್ಪು ಚುಕ್ಕೆಯಾಗಲಿದೆ’ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗಾನಂದ್‌ ತಿಳಿಸಿದರು.

--

ಈಗಾಗಲೇ ಕಾರ್ಡ್‌ ಹೊಂದಿದ್ದ ಎಲ್ಲ ನೌಕರರಿಗೂ ದಂಡ ಪಾವತಿಸುವಂತೆ ಸೂಚನೆ ನೀಡಿದ್ದೇವೆ. ಅವರೇ ಆನ್‌ಲೈನ್‌ಲ್ಲಿ ನೇರ ಹಣ ಪಾವತಿಸಬೇಕು
ಯೋಗಾನಂದ, ಆಹಾರ, ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT