ಮಂಗಳವಾರ, ಜೂನ್ 28, 2022
24 °C
ಸಿಎಂ, ಶಿಕ್ಷಣ ಸಚಿವ, ಜಿಪಂ ಸಿಇಓಗೆ ಅಣ್ಣೂರು ಕೇರಿ ಪ್ರೌಢಶಾಲೆ ವಿದ್ಯಾರ್ಥಿಗಳ ಪತ್ರ

ಕೂಡಿಟ್ಟ ₹35 ಕೊಡುವೆ, ಶೌಚಾಲಯ ಕಟ್ಟಿ: ಸಿಎಂ, ಜಿ.ಪಂ ಸಿಇಒಗೆ ವಿದ್ಯಾರ್ಥಿಗಳ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಶಾಲೆಯಲ್ಲಿ ಶೌಚಾಲಯ ಕಟ್ಟಿಸಲು, ನಾನು ಕೂಡಿಟ್ಟ ಹಣ ₹ 35 ಅನ್ನು ಕೊಡಲು ಸಿದ್ಧಳಿದ್ದೇನೆ. ದಯಾಮಯಿಗಳಾದ ತಾವು ನನ್ನನ್ನು ನಿಮ್ಮ ಮಗಳೆಂದು ಭಾವಿಸಿ ಒಂದು ಶೌಚಾಲಯ ಕಟ್ಟಿಸಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ’

ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರು ಕೇರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಎನ್‌.ಐಶ್ವರ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಅವರಿಗೆ ಇತ್ತೀಚೆಗೆ ಬರೆದ ಪತ್ರದ ಮುಖ್ಯಾಂಶ ಇದು. ಇದೇ ಮಾದರಿಯಲ್ಲಿ ಇನ್ನೂ 14 ವಿದ್ಯಾರ್ಥಿಗಳು ಅವರಿಗೆ ಬರೆದಿದ್ದಾರೆ.  

ಈ ವಿದ್ಯಾರ್ಥಿನಿಯ ರೀತಿಯಲ್ಲೇ ಇನ್ನಷ್ಟು ವಿದ್ಯಾರ್ಥಿಗಳು ಶೌಚಾಲಯ ಸೌಕರ್ಯಕ್ಕಾಗಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೂ ಪತ್ರ ಬರೆದಿದ್ದಾರೆ.

‘ನಮ್ಮ ಶಾಲೆಯಲ್ಲಿ 132 ವಿದ್ಯಾರ್ಥಿಗಳಿದ್ದೇವೆ. ನಮಗೆ ಒಂದೇ ಶೌಚಾಲಯವಿದೆ. ವಿರಾಮದ ವೇಳೆಯಲ್ಲಿ ನಾವು ಶೌಚಾಲಯಕ್ಕೆ ಹೋಗಲು ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ (30 ನಿಮಿಷ). ಇದು ತುಂಬಾ ಮುಜುಗರವನ್ನುಂಟು ಮಾಡುತ್ತಿದೆ.  ಶೌಚಾಲಯ ಇಲ್ಲದಿದ್ದರೆ ನಾವು ರೋಗಕ್ಕೆ ಒಳಗಾಗುತ್ತೇವೆ. ಎಲ್ಲಿದೆ ಶೌಚಮುಕ್ತ ಭಾರತ’ ಎಂದೂ ಐಶ್ವರ್ಯ ಪ್ರಶ್ನಿಸಿದ್ದಾಳೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆ.ಎಂ.ಗಾಯತ್ರಿ ಅವರು, ‘ಪತ್ರ ದೊರಕಿದ ತಕ್ಷಣ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದ್ದೇನೆ. ತಕ್ಷಣವೇ, ನರೇಗಾ ಹಾಗೂ ಶಿಕ್ಷಣ ಇಲಾಖೆಯ ಯೋಜನೆಯಡಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು. 

’ವಿದ್ಯಾರ್ಥಿಗಳು ಪತ್ರ ಬರೆದಿರುವುದು ಗಮನಕ್ಕೆ ಬಂದಿದೆ. ಶಾಲೆಯಲ್ಲಿ ಈಗಾಗಲೇ ಶೌಚಾಲಯ ಇದೆ. ಆದರೆ, ಅದು ಸಾಕಾಗುತ್ತಿಲ್ಲ. ಹೆಚ್ಚುವರಿ ಶೌಚಾಲಯ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಶೀಘ್ರ ನಿರ್ಮಾಣವಾಗಲಿದೆ‘ ಎಂದು ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿ ಶಿವಮೂರ್ತಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

47 ಶಾಲೆಗಳಲ್ಲಿ ಹೊಸ ಶೌಚಾಲಯ: ಈ ಮಧ್ಯೆ, 2021–22ನೇ ಸಾಲಿಗೆ ಜಿಲ್ಲೆಯ 47 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ದೊರೆತಿದ್ದು, ಜಿಲ್ಲಾಪಂಚಾಯಿತಿಯು ನರೇಗಾ ಯೋಜನೆ ಹಾಗೂ ಶಿಕ್ಷಣ ಇಲಾಖೆಯ ಅನುದಾನದಿಂದ ಅಲ್ಲಿ ಶೌಚಾಲಯಗಳನ್ನು ನಿರ್ಮಿಸಲಿದೆ. 

ಚಾಮರಾಜನಗರ, ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳ ತಲಾ ಎಂಟು, ಗುಂಡ್ಲುಪೇಟೆಯ 12 ಮತ್ತು ಹನೂರು ತಾಲ್ಲೂಕಿನ 11 ಶಾಲೆಗಳಲ್ಲಿ ಹೆಚ್ಚುವರಿಯಾಗಿ ಹೊಸ ಶೌಚಾಲಯಗಳು ನಿರ್ಮಾಣವಾಗಲಿವೆ. 

ಬಾಲಕರಿಗಾಗಿ ಒಂದು ಶೌಚಾಲಯ ಹಾಗೂ ಮೂತ್ರ ವಿಸರ್ಜನೆಗೆ ಮೂರು ಘಟಕಗಳು ಹಾಗೂ ಬಾಲಕಿಯರಿಗಾಗಿ ಮೂರು ಶೌಚಾಲಯಗಳು ನಿರ್ಮಾಣವಾಗಲಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

‌ವಿದ್ಯಾರ್ಥಿಗಳ ಪತ್ರಕ್ಕೆ ಸಿಇಒ ಶ್ಲಾಘನೆ

ಶಾಲಾ ಮಕ್ಕಳು ಬರೆದ ಪತ್ರಕ್ಕೆ ಪ್ರತಿಯಾಗಿ ಕೆ.ಎಂ.ಗಾಯತ್ರಿ ಅವರು ಎಲ್ಲ 15 ಮಕ್ಕಳಿಗೂ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಶಾಲೆಯಲ್ಲಿರುವ ಸಮಸ್ಯೆಗಳನ್ನು ಪತ್ರದ ಮೂಲಕ ಗಮನಕ್ಕೆ ತಂದಿರುವುದನ್ನು ಶ್ಲಾಘಿಸಿದ್ದಾರೆ. ಮುಂದೆಯೂ ಶಾಲೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಗಮನಕ್ಕೆ ತರಬಹುದು ಎಂದು ಹೇಳಿದ್ದಾರೆ. 

ಸಂಗ್ರಹಿಸಿರುವ ವಂತಿಗೆಯನ್ನು ಶಿಕ್ಷಣಕ್ಕೆ ಬಳಸಿ ಎಂದು ಸಲಹೆ ನೀಡಿರುವ ಗಾಯತ್ರಿ ಅವರು, ಮಕ್ಕಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.  

’ಫೆ.17ರಂದು ನಾನು ಶಾಲೆಗೆ ಭೇಟಿ ನೀಡಿದ್ದೇನೆ. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ಅವಶ್ಯಕತೆ ಮನಗಂಡು, ವಿಳಂಬಕ್ಕೆ ಅವಕಾಶ ನೀಡದಂತೆ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ತುರ್ತು ಕ್ರಮ ವಹಿಸಲಾಗಿದೆ‘ ಎಂದು ಪತ್ರದಲ್ಲಿ ಹೇಳಿದ್ದಾರೆ. 

ಮಕ್ಕಳ ಗ್ರಾಮ ಸಭೆ: ’ಮಕ್ಕಳು ತಮ್ಮ ಸಂರಕ್ಷಣೆ, ವ್ಯವಸ್ಥೆ, ಕುಂದು ಕೊರತೆಗಳನ್ನು ಹೇಳಿಕೊಳ್ಳುವ ಹಾಗೂ ತಮ್ಮ ಬಗ್ಗೆ ತೀರ್ಮಾನವಾಗುವ ವಿಷಯಗಳ ಬಗ್ಗೆ ಚರ್ಚಿಸಲು ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಇದರಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಬಹುದು. ಪ್ರತಿ ವರ್ಷ ನವೆಂಬರ್‌ನಲ್ಲಿ ಮಕ್ಕಳ ಹಕ್ಕುಗಳ ಮಾಸಾಚರಣೆ ನಡೆಸಲಾಗುತ್ತಿದ್ದು, ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸಬೇಕು ಎಂದು ಸರ್ಕಾರ ಸೂಚಿಸಿದೆ.ಈ ಗ್ರಾಮಸಭೆಯಲ್ಲಿ ಆಯಾ ಪಂಚಾಯಿತಿಯ ಆಯ್ದ ಮಕ್ಕಳನ್ನು ಒಳಗೊಂಡ ಮಕ್ಕಳ ಹಕ್ಕುಗಳ ಸಮಿತಿಯನ್ನೂ ರಚಿಸಲಾಗಿದ್ದು, ಈ ಸಮಿತಿಯ ಮೂಲಕ ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇದೆ‘ ಎಂದು ಗಾಯತ್ರಿ ಅವರು ಮಕ್ಕಳ ಗಮನಕ್ಕೆ ತಂದಿದ್ದಾರೆ. 

--

ಅಣ್ಣೂರುಕೇರಿ ಶಾಲೆಯಲ್ಲದೇ, ಜಿಲ್ಲೆಯಾದ್ಯಂತ 47 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅನುಮತಿ ಸಿಕ್ಕಿದ್ದು, ತ್ವರಿತವಾಗಿ ಕಾಮಗಾರಿ ನಡೆಸಲಾಗುವುದು

-ಕೆ.ಎಂ.ಗಾಯತ್ರಿ, ಜಿ.ಪಂ ಸಿಇಒ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು