ಶನಿವಾರ, ಜುಲೈ 24, 2021
28 °C

ಮಳೆ, ನೆರೆ ಪರಿಸ್ಥಿತಿ ಎದುರಿಸಲು ಸನ್ನದ್ಧ: ಆರ್.ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಈ ಬಾರಿಯ ಮಳೆಗಾಲದಲ್ಲಿ ಉಂಟಾಗಬಹುದಾದ ನೆರೆ ಪರಿಸ್ಥಿತಿ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ತುರ್ತು ವೆಚ್ಚಕ್ಕಾಗಿ ₹312 ಕೋಟಿ ನಿಧಿ ಇಲಾಖೆ ಬಳಿ ಇದೆ’ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ನಿಯಂತ್ರಿಸಲು ರಾಜ್ಯಕ್ಕೆ ₹1,311 ಕೋಟಿ ಮಂಜೂರು ಮಾಡಿದೆ. ಅದರಲ್ಲಿ ₹310 ಕೋಟಿ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಪ್ರವಾಹ ಕಾಣಿಸಿಕೊಳ್ಳಬಹುದಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕಾಗಿ ಬಳಸಲಿದ್ದೇವೆ’ ಎಂದರು. 

ಶಾಶ್ವತ ಕಟ್ಟಡ: ‘ನೆರೆ ಬಂದ ಸಂದರ್ಭದಲ್ಲಿ ಸಂತ್ರಸ್ತರಾದವರನ್ನು ಸದ್ಯ ಶಾಲೆಗಳಲ್ಲಿ, ಸಮುದಾಯ ಭವನಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡುತ್ತಿದ್ದೇವೆ. ಅಲ್ಲಿ ಶೌಚಾಲಯ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳಿಲ್ಲದೇ ತೊಂದರೆಯಾಗುತ್ತಿದೆ. ಅದಕ್ಕಾಗಿ, ಕೊಡಗು, ಬೆಳಗಾವಿ, ಕರಾವಳಿ ಪ್ರದೇಶಗಳು ಸೇರಿದಂತೆ ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲು ಎಲ್ಲ ಸೌಕರ್ಯಗಳುಳ್ಳ ಶಾಶ್ವತ ಕಟ್ಟಡಗಳನ್ನು ಕಟ್ಟಲು ಚಿಂತಿಸಲಾಗುತ್ತಿದೆ. ಅಲ್ಲದೇ ತುರ್ತು ಪರಿಹಾರಕ್ಕೆ ನೆರವಾಗುವುದಕ್ಕಾಗಿ ಅಗ್ನಿ ಶಾಮಕ ದಳಕ್ಕೆ ಆಧುನಿಕ ಉಪಕರಣಗಳನ್ನು ಖರೀದಿಸಲು ಇಲಾಖೆಯಿಂದ ನೆರವು ನೀಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು. 

ಸಮುದ್ರಕ್ಕೆ ಇಳಿಯದಿರಿ: ‘ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸಿರುವ ನಿಸರ್ಗ ಚಂಡಮಾರುತವು ರಾಜ್ಯದ ಕರಾವಳಿ, ಬೆಳಗಾವಿ, ವಿಜಯಪುರ, ಬಾಗಲಕೋಟೆಗಳಲ್ಲಿ ಹಗುರವಾದ ಮಳೆ ಉಂಟು ಮಾಡಲಿದೆ. ಗಾಳಿಯು ಪ್ರತಿ ಗಂಟೆಗೆ 50ರಿಂದ 60ಕಿ.ಮೀ ವೇಗದಲ್ಲಿ ಬೀಸಲಿದೆ. ಸಮುದ್ರದ ಅಲೆಗಳು ಎರಡರಿಂದ ನಾಲ್ಕು ಮೀಟರ್‌ ಎತ್ತರ ಇರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು’ ಎಂದು ಆರ್.ಅಶೋಕ ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು