ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮ ಆಧರಿತ ಸಂಘಗಳಿಗೆ ನಿರ್ಬಂಧ: ಸರ್ಕಾರದ ಸುತ್ತೋಲೆಗೆ ವಿರೋಧ

Last Updated 4 ಫೆಬ್ರುವರಿ 2021, 13:12 IST
ಅಕ್ಷರ ಗಾತ್ರ

ಚಾಮರಾಜನಗರ: ಸರ್ಕಾರಿ ನೌಕರರ ಸೇವಾ ಸಂಘಗಳನ್ನು ಜಾತಿ, ಧರ್ಮದ ಹೆಸರಿನಲ್ಲಿ ಸ್ಥಾಪಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ವಿರೋಧಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಶಿವಣ್ಣ ಅವರು, ‘ರಾಜ್ಯ ಸರ್ಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೂಲಕ ಜನವರಿ 18ರಂದು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಜಾತಿ, ಧರ್ಮ, ವಂಶ ಸೇರಿದಂತೆ ಯಾವುದೇ ಸಮೂಹದ ಆಧಾರದ ಮೇಲೆ ಸಂಘಗಳನ್ನು ರಚಿಸುವಂತಿಲ್ಲ ಎಂದು ಅದರಲ್ಲಿ ಹೇಳಿದೆ. ಈಗಾಗಲೇ ಸ್ಥಾಪನೆಯಾಗಿರುವ ಇಂತಹ ಸಂಘಗಳ ಮಾನ್ಯತೆಯನ್ನು ಕೂಡಲೇ ರದ್ದುಗೊಳಿಸುವಂತೆ ಹಾಗೂ ಮಾನ್ಯತೆ ಪಡೆಯದೇ ಚಾಲ್ತಿಯಲ್ಲಿರುವ ಸಂಘಗಳನ್ನು ನಿರ್ಬಂಧಿಸುವಂತೆ ಇಲಾಖೆಗಳಿಗೆ ಸೂಚಿಸಿದೆ. ಇದು ಸಂವಿಧಾನ ಬಾಹಿರ ಕ್ರಮ’ ಎಂದು ಹೇಳಿದರು.

‘ಸಂವಿಧಾನದ ಕಲಂ 19 (1)ರ ಅಡಿಯಲ್ಲಿ ದತ್ತವಾದ ಹಕ್ಕುಗಳನ್ನು ಜನತೆಯಿಂದ ಕಿತ್ತುಕೊಳ್ಳುವ ಹುನ್ನಾರ ಇದರಲ್ಲಿದೆ. ನೋಂದಣಿ ಕಾಯ್ದೆಯ ಅಡಿಯಲ್ಲೇ ನಾವು ಸಂಘಗಳನ್ನು ರಚಿಸಿಕೊಂಡಿದ್ದೇವೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಂಘ ಭಾಗವಹಿಸುತ್ತಿಲ್ಲ. ನಮ್ಮ ಸಮುದಾಯದ ನೌಕರರಿಗೆ ಅನ್ಯಾಯವಾದರೆ, ಸಂಘದ ಅಡಿಯಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ನೌಕರರ ಕ್ಷೇಮಾಭಿವೃದ್ಧಿಗಾಗಿ ಸಂಘವನ್ನು ಕಟ್ಟಿಕೊಂಡಿದ್ದೇವೆ. ಇಂತಹ ಸಂಘಗಳಿಗೆ ನಿರ್ಬಂಧ ಹೇರುವುದು ಸರಿಯಾದ ಕ್ರಮವಲ್ಲ. ಇದನ್ನು ನಾವು ಖಂಡಿಸುತ್ತೇವೆ. ಸರ್ಕಾರ ಸುತ್ತೋಲೆ ವಾಸಪ್‌ ಪಡೆಯಬೇಕು. ಈ ಸಂಬಂಧ ಶನಿವಾರ ಜಿಲ್ಲಾಧಿಕಾರಿ ಅವರಿಗೆ ಮನವಿಯನ್ನೂ ಸಲ್ಲಿಸಲಿದ್ದೇವೆ’ ಎಂದರು.

ಸಂಘದ ರಾಜ್ಯ ಪರಿಷತ್‌ ಸದಸ್ಯ ಮಂಜುನಾಥ ಪ್ರಸನ್ನ ಅವರು ಮಾತನಾಡಿ, ‘ಸಂಘದ ಅಡಿಯಲ್ಲಿ ಸೇವಾ ಕಾರ್ಯಗಳನ್ನೂ ನಡೆಸುತ್ತಿದ್ದೇವೆ. ಪ್ರತಿಭಾವಂತ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವುದು, ಕಷ್ಟದಲ್ಲಿರುವ ಸಂಘದ ಸದಸ್ಯರಿಗೆ ಆರ್ಥಿಕ ನೆರವು ನೀಡುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಿದ್ದೇವೆ’ ಎಂದರು.

ಎಸ್‌ಟಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಲಿಂಗರಾಜು ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘದ ಕೋಶಾಧ್ಯಕ್ಷ ಎಂ.ರಾಜು, ಉಪಾಧ್ಯಕ್ಷ ಆರ್‌.ಹೇಮಂತ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT