ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೀಪುರ ಗ್ರಾಮದ ಸರ್ಕಾರಿ ಶಾಲಾ ಕಟ್ಟಡದಲ್ಲಿ ಕುರಿ, ಕೋಳಿ ಸಾಕಣೆ!

ಏಳು ತಿಂಗಳುಗಳಿಂದ ಗ್ರಾಮದ ಮುಖಂಡರಿಂದ ಸ್ವಂತಕ್ಕೆ ಬಳಕೆ, ಶಿಕ್ಷಣ ಇಲಾಖೆಗೆ ಗೊತ್ತೇ ಇಲ್ಲ
Last Updated 24 ಆಗಸ್ಟ್ 2020, 13:16 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಮತ್ತೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಗ್ರಾಮದ ಮುಖಂಡರೊಬ್ಬರು ಕುರಿ, ಮೇಕೆ ಕೋಳಿ ಸಾಕಲು ಬಳಸುತ್ತಿದ್ದಾರೆ. ಏಳು ತಿಂಗಳುಗಳಿಂದ ಇದು ನಡೆಯುತ್ತಿದ್ದರೂ ಶಿಕ್ಷಣ ಇಲಾಖೆಗೆ ಇದರ ಮಾಹಿತಿಯೇ ಇಲ್ಲ!

ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಕುಳ್ಳೇಗೌಡ ಎಂಬುವವರು ಶಾಲೆಯ ಹೆಚ್ಚುವರಿ ಕಟ್ಟಡದ ಎರಡು ಕೊಠಡಿಗಳಲ್ಲಿಕುರಿ, ಮೇಕೆ, ಕೋಳಿ ಸಾಕಣೆ ಮಾಡುತ್ತಿದ್ದಾರೆ. ಜೋಳ, ಕೊಮ್ಮು, ಮರದ ದಿಮ್ಮಿ ಸೇರಿದಂತೆ ಅನೇಕ ವಸ್ತುಗಳನ್ನೂ ಇಲ್ಲಿ ಸಂಗ್ರಹಿಸಿಡಲಾಗಿದೆ. ಇವುಗಳ ಕಾವಲಿಗಾಗಿ ಹಕ್ಕಿ ಪಿಕ್ಕಿ (ಅಲೆಮಾರಿ) ಸಮುದಾಯದ ಒಂದು ಕುಟುಂಬ ಕೂಡ ಇದೇ ಕಟ್ಟಡದಲ್ಲಿ ವಾಸಿಸುತ್ತಿದೆ.

ದಾನ ನೀಡಿದ್ದ ಮುಖಂಡ: ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿರುವ ಜಮೀನಿನ ಮೂಲ ಮಾಲೀಕರು ಇದೇ ಕುಳ್ಳೇಗೌಡರು. 2008ರಲ್ಲಿ ಅವರ ಕುಟುಂಬ ಶಾಲೆಗಾಗಿ ಅರ್ಧ ಎಕರೆ ಜಮೀನನ್ನು ದಾನ ಮಾಡಿದ್ದರು. ಈಗ ದಾಖಲೆಗಳೆಲ್ಲ ಶಿಕ್ಷಣ ಇಲಾಖೆಯ ಹೆಸರಿನಲ್ಲಿದೆ. ಸರ್ವ ಶಿಕ್ಷಣ ಅಭಿಯಾನ ಅಡಿಯಲ್ಲಿ ₹8 ಲಕ್ಷ ವೆಚ್ಚದಲ್ಲಿ ಎರಡು ಹೆಚ್ಚುವರಿ ಕೊಠಡಿಗಳನ್ನು ಆ ಜಮೀನಿನಲ್ಲಿ ನಿರ್ಮಿಸಲಾಗಿತ್ತು. 2011–12ರಲ್ಲಿ ಕಟ್ಟಡ ಉದ್ಘಾಟನೆ ಮಾಡಲಾಗಿತ್ತು.

ದಾಖಲಾತಿ ಕಡಿಮೆ: 1ರಿಂದ 6ನೇ ತರಗತಿವರೆಗೆ ಇರುವ ಶಾಲೆಯಲ್ಲಿ ಸದ್ಯ 19 ಮಕ್ಕಳು ಇದ್ದಾರೆ. ಶಾಲೆಯ ಹಳೆ ಕಟ್ಟಡಕ್ಕೂ ಹೊಸ ಕಟ್ಟಡಕ್ಕೂ 200 ಮೀಟರ್‌ ದೂರ ಇದೆ.ಹೆಚ್ಚು ಮಕ್ಕಳು ಇದ್ದ ಸಂದರ್ಭದಲ್ಲಿ ಈ ಹೆಚ್ಚುವರಿ ಕೊಠಡಿಗಳನ್ನು ಬಳಸಲಾಗುತ್ತಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಂತೆ, ಈ ಎರಡು ಕೊಠಡಿಗಳ ಬಳಕೆ ಕಡಿಮೆಯಾಯಿತು.ಸಭೆ, ಸಮಾರಂಭ, ಕ್ರೀಡೆ ಸೇರಿದಂತೆ ಮಾತ್ರ ಅಲ್ಲಿಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದರು. ಕಟ್ಟಡ ಪಾಳು ಬೀಳುತ್ತಿದ್ದುದನ್ನು ಕಂಡು ಕುಳ್ಳೇಗೌಡ ಅವರು ಅದನ್ನು ಸ್ವಂತಕ್ಕೆ ಬಳಲು ಆರಂಭಿಸಿದರು ಎಂದು ಆರೋಪಿಸುತ್ತಾರೆ ಗ್ರಾಮಸ್ಥರು.

‘ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅವರು ಜಮೀನು ನೀಡಿದ್ದಾರೆ. ಈಗ ಅದು ಸರ್ಕಾರದ ಆಸ್ತಿ. ಯಾರು ಕೂಡ ಅದನ್ನು ದುರುಪಯೋಗ ಮಾಡಬಾರದು’ ಎಂದು ಗ್ರಾಮಸ್ಥ ಶಂಕರ್‌ ಅವರು ಹೇಳಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕುಳ್ಳೇಗೌಡ ಅವರು, ‘ಅರ್ಧ ಎಕರೆ ಜಮೀನು ಶಾಲೆಗೆ ದಾನವಾಗಿ ಕೊಟ್ಟಿದ್ದೇವೆ. ಕೊಠಡಿಗಳನ್ನು ಇಲಾಖೆ ಬಳಸುತ್ತಿರಲಿಲ್ಲ. ಕೆಲವು ಪುಂಡರು ಇಲ್ಲಿ ಜೂಜು, ಮದ್ಯ ಸೇವನೆ ಸೇರಿದಂತೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು. ಇದರಿಂದ ಬೇಸರವಾಗಿತ್ತು. ಕಟ್ಟಡ ಖಾಲಿ ಇದ್ದುದರಿಂದ ಬಳಸಿದೆ. ‌ಎರಡು ದಿನಗಳಲ್ಲಿ ಖಾಲಿ ಮಾಡುತ್ತೇನೆ’ ಎಂದು ಹೇಳಿದರು.

ಖಾಲಿ ಮಾಡಿಸಲು ಕ್ರಮ: ‘ಗ್ರಾಮಸ್ಥರು ಎರಡು ದಿನಗಳ ಹಿಂದೆ ಕರೆ ಮಾಡಿ ನನಗೆ ಮಾಹಿತಿ ನೀಡಿದ್ದಾರೆ.ಹೆಚ್ಚುವರಿ ಕೊಠಡಿಯಲ್ಲಿ ಇರುವ ವಸ್ತುಗಳನ್ನು ತಕ್ಷಣ ಖಾಲಿ ಮಾಡಿಸುತ್ತೇನೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯೆ ಪಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರಿಗೆ ಕರೆ ಮಾಡಲಾಯಿತಾದರೂ, ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT