ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎ ಮೀಸಲಾತಿ: ಗೌಡ ಲಿಂಗಾಯತರಿಂದ ಮತ್ತೆ ಸಭೆ

ಬೆಂಗಳೂರು ಚಲೋ ಹಮ್ಮಿಕೊಳ್ಳಲು ತೀರ್ಮಾನ, ಹೆಚ್ಚು ಮಂದಿ ಭಾಗವಹಿಸಲು ಮನವಿ
Last Updated 30 ಮಾರ್ಚ್ 2021, 13:11 IST
ಅಕ್ಷರ ಗಾತ್ರ

ಚಾಮರಾಜನಗರ: ಗೌಡ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿ ನಡೆಸಲು ನಿರ್ಧರಿಸಿರುವ ಹೋರಾಟದ ರೂಪುರೇಷೆಯ ಬಗ್ಗೆ ಚರ್ಚಿಸಲು ನಗರಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಮುಖಂಡ ಅಮ್ಮನಪುರ ಮಲ್ಲೇಶ್‌ ಅವರು, ‘ಉತ್ತರ ಕರ್ನಾಟಕ ಭಾಗದಲ್ಲಿರುವ ಬಹುಸಂಖ್ಯಾತ ಪಂಚಮಸಾಲಿ ಲಿಂಗಾಯತರು 2ಎ ಗೆ ಸೇರಿಸುವಂತೆ ಒತ್ತಾಯಿಸಿ ಬೃಹತ್ ಹೋರಾಟ ನಡೆಸಿ, ಸರ್ಕಾರದ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಅವರು ಕೂಡ ಅವರಿಗೆ ಭರವಸೆಯನ್ನು ನೀಡಿದ್ದಾರೆ. ದಕ್ಷಿಣ ಭಾಗದಲ್ಲಿರುವಗೌಡ ಲಿಂಗಾಯತ, ಒಕ್ಕಲಿಗ ಲಿಂಗಾಯತ ಸೇರಿದಂತೆ ಒಕ್ಕಲುತನ ಮಾಡುವ ಎಲ್ಲಾ ಲಿಂಗಾಯತರು ಕೂಡ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು, ಈ ಸಮುದಾಯಕ್ಕೂ 2ಎ ಮೀಸಲಾತಿ ಕಲ್ಪಿಸಬೇಕು ಎಂಬುದು ನಮ್ಮ ಒತ್ತಾಯ’ ಎಂದರು.

ಸಮಾಜದವರಿಗೆ ಉತ್ತಮ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಸ್ಥಾನಮಾನಗಳಿಗಾಗಿ ಈ ಬೇಡಿಕೆಯನ್ನು ಇಡುತ್ತಿದ್ದೇವೆ. ಸಮಾಜದ ಉದ್ಧಾರಕ್ಕೆ 2ಎ ಮೀಸಲಾತಿ ಕಲ್ಪಿಸುವುದು ಮುಖ್ಯ. ಇದಕ್ಕಾಗಿ ಹೋರಾಟ ಮಾಡಬೇಕಾಗಿದೆ. ಸರ್ಕಾರಕ್ಕೆ ಮನವಿ ಸಲ್ಲಿಸಬೇಕಿದೆ’ ಎಂದು ಹೇಳಿದರು.

‘ಇದಕ್ಕಾಗಿ ಸಂಘಟನೆ ಅತ್ಯಗತ್ಯ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿರುವ ವೀರಶೈವ ಲಿಂಗಾಯತರು ಸಂಘಟಿತರಾಗಬೇಕು. ನಮ್ಮ ಹೋರಾಟ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವ ಪಕ್ಷಗಳ ವಿರುದ್ಧವೂ ಅಲ್ಲ. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳುವುದಷ್ಟೇ ನಮ್ಮ ಉದ್ದೇಶ’ ಎಂದರು.

‘ಸರ್ಕಾರದ ಗಮನವನ್ನು ನಾವು ಸೆಳೆಯಬೇಕು. ಅದಕ್ಕಾಗಿ ದೊಡ್ಡ ಹೋರಾಟ ಮಾಡಬೇಕು. ಎಲ್ಲರನ್ನೂ ಒಟ್ಟಗೂಡಿಸಿ ಬೆಂಗಳೂರು ಚಲೋ ಹಮ್ಮಿಕೊಳ್ಳಬೇಕು. ಇದರಲ್ಲಿ ಸಮಾಜದ ಸಾವಿರಾರು ಜನರು ಭಾಗವಹಿಸಬೇಕು’ ಎಂದು ಮಲ್ಲೇಶ್‌ ಹೇಳಿದರು.

‘ಉಪ ಚುನಾವಣೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಸಿಗಲಿದ್ದಾರೆ. ಈ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಸಿ.ಎಂ ಬಳಿಗೆ ನಿಯೋಗ ತೆರೆಳಿ ಮನವಿ ಸಲ್ಲಿಸಿ, ನಮ್ಮ ಸಂಕಷ್ಟ ಹೇಳಿಕೊಳ್ಳೋಣ. ಇದರೊಟ್ಟಿಗೆ ಹಿಂದುಳಿದ ವರ್ಗಗಳ ಆಯೋಗ, 2ಎ ಮೀಸಲಾತಿಗಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಅವರನ್ನು ಭೇಟಿಯಾಗಿ ನಮ್ಮ ಮನವಿಯನ್ನು ಸಲ್ಲಿಸೋಣ’ ಎಂದರು.

ಪಂಚಮಸಾಲಿ ಪೀಠದ ಶ್ರೀಗಳು ಹೋರಾಟದ ನೇತೃತ್ವ ವಹಿಸಿ, ಅಲ್ಲಿನ ಜನರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. ಆದೇ ಮಾದರಿಯಲ್ಲಿ ದಕ್ಷಿಣ ಕರ್ನಾಟಕದಲ್ಲಿರುವ ಮಠಾಧೀಶರು ಕೂಡ ಹೋರಾಟದಲ್ಲಿ ಭಾಗಿಯಾಗಿ ಭಕ್ತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ಸಮಾಜದ ಮುಖಂಡರು ಹೋರಾಟದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಆರ್.ವಿ.ಮಹದೇವಸ್ವಾಮಿ, ಶಂಕರಪ್ಪ, ಅರಕಲವಾಡಿ ಮಹೇಶ್, ಸುಭಾಷ್ ಸೇರಿದಂತೆ ಅನೇಕರು ಮಾತನಾಡಿ, ‘ಗೌಡ ಲಿಂಗಾಯತ ಪದ ಸರಿಯಾಗಿದೆ. ಆದರೆ, ಜನಗಣತಿ ಸಂದರ್ಭದಲ್ಲಿ ಈ ಭಾಗದಲ್ಲಿ ಜಾತಿ ಕಾಲಂನಲ್ಲಿ ಗೌಡ ಎಂದು ನಾವು ನಮೂದಿಸಿಲ್ಲ. ವೀರಶೈವ, ಲಿಂಗಾಯತ ಎಂಬ ಪದಗಳನ್ನಷ್ಟೇ ಬರೆಸಿದ್ದೇವೆ. ಈಗ ಗೌಡ ಲಿಂಗಾಯತರನ್ನು 2ಎಗೆ ಸೇರ್ಪಡೆ ಮಾಡಿದರೆ ನಮಗೆ ಅನ್ಯಾಯವಾಗುತ್ತದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲೇಶ್‌ ಅವರು ‘ಲಿಂಗಾಯತ ಧರ್ಮ ಸೂಚಕ ಪದವಾಗಿದ್ದು, ಗೌಡ ಲಿಂಗಾಯತ ಎಂಬುವುದು ಉಪ ಜಾತಿಯಾಗಿದೆ. 2ಎಗೆ ಸೇರ್ಪಡೆಯಾದರೆ ಉಪ ಪಂಗಡದಲ್ಲಿರುವ ನಾವೆಲ್ಲರೂ ರಾಜಕೀಯ, ಶೈಕ್ಷಣಿಕವಾಗಿ ಮೀಸಲಾತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ಎರಡನೇ ಸಭೆ: ಮೀಸಲಾತಿ ಹೋರಾಟಕ್ಕಾಗಿ ಗೌಡ ಲಿಂಗಾಯತ ಸಮುದಾಯದ ಮುಖಂಡರು ನಡೆಸಿರುವ ಎರಡನೇ ಸಭೆ ಇದು. ತಿಂಗಳ ಹಿಂದೆ ಸಂತೇಮರಹಳ್ಳಿಯಲ್ಲಿ ಮೊದಲ ಸಭೆ ನಡೆದಿತ್ತು.

ಮುಖಂಡರಾದ ಹಂಡ್ರಕಳ್ಳಿ ರಾಮಣ್ಣ, ಕೊತ್ತಲವಾಡಿ ಕುಮಾರ್, ಮೂಡ್ಲುಪುರ ರಾಜಶೇಖರಮೂರ್ತಿ, ಕಾವುದವಾಡಿ ಗುರು, ಆರ್.ಎಸ್. ಲಿಂಗರಾಜು, ತಾಲ್ಲೂಕು ಪಂಚಾಹಿತಿ ಸದಸ್ಯ ಪಿ.ಎನ್. ದಯಾನಿಧಿ, ಅಲೂರು ರಮೇಶ್‌ಬಾಬು, ಬಸವನಪುರ ಮಹದೇವಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT