ಸೋಮವಾರ, ಮೇ 23, 2022
20 °C
ಯುವ ಮುಖಂಡರ ನೇತೃತ್ವ, ಪಕ್ಷಾವಾರು ಗುಂಪುಗಳ ಸೃಷ್ಟಿ, ಲೆಕ್ಕಾಚಾರದಲ್ಲಿ ಮುಳುಗಿದ ಮುಖಂಡರು

ಗ್ರಾ.ಪಂ. ಚುನಾವಣೆ| ಗುಂಡ್ಲುಪೇಟೆಯಲ್ಲಿ ವೈರತ್ವದ ಭಯ, ಕೊಳ್ಳೇಗಾಲದಲ್ಲಿ ಯುವಹವಾ

ಮಲ್ಲೇಶ ಎಂ./ಅವಿನ್‌ ಪ್ರಕಾಶ್‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ/ಕೊಳ್ಳೇಗಾಲ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿ, ಎರಡನೇ ಹಂತಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗಿರುವಂತೆಯೇ ಹಳ್ಳಿ ರಾಜಕಾರಣ ಬಿರುಸು ಪಡೆದಿದೆ. 

34 ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆ ಅವಧಿ ಕೊನೆಗೊಂಡಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶುಕ್ರವಾರದಿಂದ ಶುರುವಾಗಿದೆ. ಎರಡೂ ತಾಲ್ಲೂಕುಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪೈಪೋಟಿ ಕಂಡು ಬರುತ್ತಿದೆ. 

ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಈ ಬಾರಿ ಬಿಜೆಪಿ ಬೆಂಬಲಿಗರು ಹಾಗೂ ಕಾಂಗ್ರೆಸ್‌ ಬೆಂಬಲಿಗರು ಎಂಬ ಎರಡು ತಂಡಗಳು ರೂಪುಗೊಂಡಿದ್ದು, ತೀವ್ರ ಪೈಪೋಟಿ ಸೃಷ್ಟಿಯಾಗಿದೆ. 

ಗುಂಪುಗಳ ನಡುವೆ ವೈರತ್ವ ಸೃಷ್ಟಿಯಾಗಬಹುದು ಎಂಬ ಕಳವಳವನ್ನು ಗ್ರಾಮಗಳ ಹಿರಿಯರು ವ್ಯಕ್ತಪಡಿಸಿದ್ದಾರೆ. ಇದುವರೆಗೂ ತಾಲ್ಲೂಕಿನಲ್ಲಿ ಜನರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರಲಿಲ್ಲ. ಇಂತಹ ವಾತಾವರಣವೂ ಸೃಷ್ಟಿಯಾಗಿರಲಿಲ್ಲ ಎಂದು ಹಿರಿಯ ನಾಗಕರಿಕರು ಅಭಿಪ್ರಾಯ ಪಡುತ್ತಿದ್ದಾರೆ.  

‘ಪಕ್ಷದ ಚಿಹ್ನಗಳ ಅಡಿಯಲ್ಲಿ ನಡೆಯುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಚುನಾವಣೆಗಳಂತೆ ಗ್ರಾಮ ಪಂಚಾಯಿತಿ ಚುನಾವಣೆಯೂ ಪ್ರತಿಷ್ಠೆಯಾಗಿ ಬದಲಾಗಿದೆ. ಯುವ ಸಮೂಹ ವೈಯಕ್ತಿಕ ದೃಷ್ಟಿಕೋನದಿಂದ ಚುನಾವಣೆಯನ್ನು ನೋಡುತ್ತಿದೆ. ಒಟ್ಟಾಗಿ ಆಡಿ ಬೆಳೆದ ಮಕ್ಕಳು ಈಗ ವಿರುದ್ಧ ದಿಕ್ಕಿನಲ್ಲಿದ್ದಾರೆ. ಹಿರಿಯರಿಂದಾಗಿ ಮಕ್ಕಳು ಕೂಡ ಪಕ್ಷಗಳ ಸೆಳೆತಕ್ಕೆ ಒಳಗಾಗಿ ಬೇರ್ಪಡುತ್ತಿದ್ದಾರೆ’ ಎಂದು ಗುಂಡ್ಲುಪೇಟೆಯ ನಿವೃತ್ತ ಶಿಕ್ಷಕ ರಾಜಪ್ಪ ಅವರು ಬೇಸರ ವ್ಯಕ್ತಪಡಿಸಿದರು. 

‘ಹಿಂದೆಯೂ ಚುನಾವಣೆಗಳು ನಡೆದಿದ್ದವು. ಗ್ರಾಮದ ಜನರೆಲ್ಲ ಒಗ್ಗೂಡಿ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಚುನಾವಣೆಗೆ ನಿಲ್ಲಿಸುತ್ತಿದ್ದರು. ಇತ್ತೀಚೆಗೆ ಅಧಿಕಾರ ಆಸೆಯೋ, ಇಲ್ಲ ರಾಷ್ಟ್ರೀಯ ಪಕ್ಷಗಳ ಪ್ರಭಾವವೋ ಗೊತ್ತಿಲ್ಲ ಚುನಾವಣೆ ವೈಯಕ್ತಿಕ, ಪಕ್ಷದ ವಿಚಾರವಾಗಿ ಒಗ್ಗಟ್ಟು ಮುರಿದು ಹೋಗುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಅನೇಕ ಗ್ರಾಮಗಳಲ್ಲಿ ಮಹಿಳಾ ಮೀಸಲು ಕ್ಷೇತ್ರಗಳನ್ನು ಬಿಟ್ಟು, ಉಳಿದ ಸ್ಥಾನಗಳಿಗೆ ಯುವಕರು ಸ್ಪರ್ಧೆ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಯುವ ಜನತೆ ಹೆಚ್ಚು ಬರುವುದು ಒಳ್ಳೆಯದೇ. ಆದರೆ ಚುನಾವಣೆಯ ಬಳಿಕ ಒಟ್ಟಾಗಿ ಹೋಗವಂತಾಗಬೇಕು. ವೈಮನಸ್ಸು ಬೆಳೆಯಬಾರದು’ ಎಂದು ಹಿರಿಯ ನಾಗರಿಕ ರಾಜಶೇಖರಮೂರ್ತಿ ಅವರು ಅಭಿಪ್ರಾಯಪಟ್ಟರು. 

‘ಇತ್ತೀಚೆಗೆ ಗ್ರಾಮಗಳಲ್ಲಿ ಒಳ್ಳೆಯ ಕಾರ್ಯಗಳು ನಡೆದರೂ ಗುಂಪುಗಳಾಗುತ್ತಿವೆ. ಒಂದು ಗುಂಪು ಕಾರ್ಯ ಮಾಡಿದರೆ ಮತ್ತೊಂದು ಗುಂಪು ಸೇರುವುದಿಲ್ಲ, ಚುನಾವಣೆಗಳಿಂದ ಮನುಷ್ಯರ ನಡುವೆ ಅಂತರ ಸೃಷ್ಟಿ ಸೃಷ್ಟಿಯಾಗಬಾರದು’ ಎಂದು ಹಿರಿಯರಾದ ಶ್ರೀನಿವಾಸನ್‌ ಅವರು ಆಶಿಸಿದರು.

ಮುಂಚೂಣಿಯಲ್ಲಿ ಯುವಜನತೆ

ಇತ್ತ, 16 ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಯುವ ಜನತೆ ಚುನಾವಣೆಯಲ್ಲಿ ತೀವ್ರ ಆಸಕ್ತಿ ತೋರಿದೆ. 

ಹೆಚ್ಚಿನ ಗ್ರಾಮಗಳಲ್ಲಿ ಹೊಸಬರು ಕಣಕ್ಕಿಳಿಯಸಲು ಬಯಸುತ್ತಿದ್ದಾರೆ. ಮೀಸಲಾತಿಯ ಕ್ಷೇತ್ರಗಳನ್ನು ಬಿಟ್ಟರೆ ಉಳಿದ ಕಡೆಗಳಲ್ಲಿ ಯುವ ಸಮೂಹದವರೇ ಮುಂಚೂಣಿಯಲ್ಲಿ ಕಾಣಿಕೊಳ್ಳುತ್ತಿದ್ದಾರೆ.  

ಜಾತಿ ಲೆಕ್ಕಾಚಾರದ ನಡುವೆ ಅಭಿವೃದ್ಧಿ: ಗೆಲುವಿಗೆ ಜಾತಿ ಲೆಕ್ಕಾಚಾರವೂ ನಡೆದಿದೆ. ಜೊತೆಗೆ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವು ಕಡೆಗಳಲ್ಲಿ ಸಮುದಾಯಗಳ ಮುಖಂಡರು ಸಭೆ ಸೇರಿ, ಇಂತಹವರನ್ನೇ ಬೆಂಬಲಿಸಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.

ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಗ್ರಾಮಗಳಲ್ಲಿ ಜಾತಿ ಲೆಕ್ಕಾಚಾರ ಹೆಚ್ಚು ಕೆಲಸ ಮಾಡದಿರುವ ಸಾಧ್ಯತೆ ಹೆಚ್ಚಿದ್ದು, ಗ್ರಾಮಸ್ಥರು ಅಭಿವೃದ್ಧಿಯ ಬಗ್ಗೆ ಹೆಚ್ಚು ಪ್ರಸ್ತಾಪಿಸುತ್ತಿದ್ದಾರೆ. ಈ ಬಾರಿ ಹೊಸ ಮುಖಗಳನ್ನು ಆಯ್ಕೆ ಮಾಡಲು ಅವರು ತೀರ್ಮಾನಿಸಿದ್ದಾರೆ. ಕೆಲವು ಗ್ರಾಮಗಳಲ್ಲಿ ಊರಿನ ಮುಖಂಡರೇ ಈಗಾಗಲೇ ಸದಸ್ಯರಾಗಬೇಕಾದವರನ್ನು ಗುರುತಿಸಿದ್ದಾರೆ. ಅವರು ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಗೋಪ್ಯ ಸಭೆಗಳೂ ನಡೆದಿವೆ. 

‘ಈಗಿನ ಚಿತ್ರಣ ನೋಡಿದರೆ ಯುವಕರಿಗೆ ಹಾಗೂ ಹೊಸಬರಿಗೆ ಗೆಲ್ಲುವ ಅವಕಾಶ ಹೆಚ್ಚು ಇದ್ದಂತೆ ಕಾಣುತ್ತದೆ.  ಗ್ರಾಮ ಅಭಿವೃದ್ಧಿಯಾಗುವುದನ್ನು ಬಯಸುತ್ತಿದ್ದೇವೆ. ಅಭಿವೃದ್ಧಿ ಪರವಾಗಿರುವವರಿಗೆ ಮಾತ್ರ ಮತ ಹಾಕುತ್ತೇವೆ. ಹಣ ಹಾಗೂ ಇತರ ಆಮಿಷಗಳಿಗೆ ಬಲಿಯಾಗುವುದಿಲ್ಲ’ ಎಂದು ಸತ್ತೇಗಾಲದ ಯುವತಿ ಅಪೇಕ್ಷ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಕಾರ್ಯತಂತ್ರ ಹೆಣೆಯಲು ರಹಸ್ಯ ಸಭೆ

ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಪಕ್ಷಗಳ, ಗ್ರಾಮಗಳ ಮುಖಂಡರು ತೋಟದ ಮನೆಗಳಲ್ಲಿ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. 

ಅಭ್ಯರ್ಥಿಗಳು ಕೂಡ ಪಕ್ಷಗಳ ಮುಖಂಡರನ್ನು ಕರೆಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಮನೆ ಮನೆಗಳಿಗೆ ತೆರಳಿ ಮತ ನೀಡುವಂತೆ ಮನವೊಲಿಸುತ್ತಿದ್ದಾರೆ. ಹಣ, ಮದ್ಯ, ಬಾಡೂಟ ಪೂರೈಸುವ ಅಭ್ಯರ್ಥಿಗಳ ಸಂಖ್ಯೆಯೂ ಕಡಿಮೆ ಏನಿಲ್ಲ ಎಂದು ಹೇಳುತ್ತಾರೆ ಗ್ರಾಮೀಣ ಭಾಗದ ಜನರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು