ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಾಲ್‌ ಜಲಾಶಯ ಭರ್ತಿ, ಉಕ್ಕಿದ ನಾಲೆ

ಬಿಆರ್‌ಟಿ ಅರಣ್ಯದಲ್ಲಿ ಉತ್ತಮ ಮಳೆ, ಅಣೆಕಟ್ಟೆಗೆ ಬರುತ್ತಿದ್ದಾರೆ ಪ್ರವಾಸಿಗರು
Last Updated 29 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಹನೂರು: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಸಮೀಪದ ಗುಂಡಾಲ್ ಜಲಾಶಯ ಭರ್ತಿಯಾಗಿದ್ದು, ಎರಡು ದಿನಗಳಿಂದ ಕೋಡಿ ಬಿದ್ದು ಹರಿಯುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ಇದೇ ರೀತಿ ಸಂಪೂರ್ಣ ಭರ್ತಿಯಾಗಿ ಕೋಡಿ ಹರಿದಿತ್ತು. ಈಗ ಮತ್ತೆ ಕೋಡಿ ಬಿದ್ದಿದೆ.

ಜಲಾಶಯದ ಎಡ ಹಾಗೂ ಬಲದಂಡೆಯ ಎರಡು ನಾಲೆಗಳಲ್ಲೂ ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನೂ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಇನ್ನು ಹೆಚ್ಚಾಗಲಿದೆ .ಜಲಾಶಯ ಭರ್ತಿಯಾಗಿ ಕೋಡಿ ಹರಿಯುತ್ತಿದ್ದಂತೆ ನೀರಾವರಿ ಇಲಾಖೆ ಪೂಜೆಸಲ್ಲಿಸಿದೆ. ಸೋಮವಾರ ಶಾಸಕ ಆರ್. ನರೇಂದ್ರ ಅವರು ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

0.97 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯದ ಜಲಾಶಯವು ನಿರ್ಮಾಣವಾಗಿ 43 ವರ್ಷ ಕಳೆದ ಬಳಿಕ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಭರ್ತಿಯಾಗಿತ್ತು.697 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಅಣೆಕಟ್ಟೆಕೊಳ್ಳೇಗಾಲ, ಹನೂರು ತಾಲ್ಲೂಕುಗಳ 50ಕ್ಕೂ ಹೆಚ್ಚು ಗ್ರಾಮಗಳ 15,100 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ.

ಪ್ರವಾಸಿಗರ ದಂಡು:ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತರ ಸುತ್ತಮುತ್ತಲ ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಅಣೆಕಟ್ಟೆಗೆ ಬರುತ್ತಿದ್ದಾರೆ. ಮಹಿಳೆಯರು, ಮಕ್ಕಳೆಲ್ಲ ಕೋಡಿ ಬಿದ್ದಿರುವ ಸ್ಥಳದಲ್ಲಿ ಈಜಾಡುತ್ತಿದ್ದಾರೆ.

‘ದಿನೇ ದಿನೇ ನೀರಿನ ಪ್ರಮಾಣ ಅಧಿಕವಾಗುತ್ತಿರುವುದರಿಂದ ಯಾವ ಸಂದರ್ಭದಲ್ಲಾದರೂ ಅಪಾಯ ಸಂಭವಿಸಬಹುದು. ಈ ನಿಟ್ಟಿನಲ್ಲಿ ಆಪತ್ತು ಸಂಭವಿಸುವ ಮೊದಲು ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರವಾಸಿಗರ ದುಸ್ಸಾಹಸಕ್ಕೆ ಕಡಿವಾಣ ಹಾಕಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಮೀನಿಗೆ ನುಗ್ಗಿದ ನೀರು:ಜಲಾಶಯದಿಂದ ಹೊರ ಬರುತ್ತಿರುವ ನೀರು ನಾಲೆಯ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಫಸಲು ನಷ್ಟವಾಗಿದೆ. ಸತತ ಎರಡು ದಿನಗಳಿಂದ ಜಮೀನುಗಳಲ್ಲಿ ನೀರು ನಿಂತಿರುವುದರಿಂದ ರೈತರು ಕಂಗಲಾಗಿದ್ದಾರೆ. ಕಟಾವಿಗೆ ಬಂದಿರುವ ಕಬ್ಬು ಹಾಗೂ ಅರಿಶಿನ ಫಸಲು ನೀರಿಗೆ ಸಿಲುಕಿ ನಲುಗಿವೆ.

‘ಮೂರೂವರೆ ಎಕರೆ ಜಮೀನು ಗುತ್ತಿಗೆ ಪಡೆದು ಎರಡು ಎಕರೆಯಲ್ಲಿ ಬೆಳೆದಿರುವ ಕಬ್ಬು ಹಾಗೂ ಒಂದು ಎಕರೆಯಲ್ಲಿ ಬೆಳೆದಿರುವ ಅರಿಸಿನ ಫಸಲು ಈಗ ನೀರಿನಿಂದ ಆವೃತವಾಗಿದೆ. ಎರಡು ಲಕ್ಷ ಹಣ ಖರ್ಚು ಮಾಡಿ ಫಸಲು ಬೆಳದಿದ್ದೆ. ಆದರೆ ಈಗ ಫಸಲಿನಲ್ಲಿ ನೀರು ನಿಂತಿರುವುದರಿಂದ ಆತಂಕ ಎದುರಾಗಿದೆ’ ಎಂದು ರೈತ ರಾಜೇಂದ್ರ ಅಳಲು ತೋಡಿಕೊಂಡರು.

ನಾಲೆಯ ಹೂಳು ತೆಗೆಯದೆ ಸಮಸ್ಯೆ

ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನೀರು ಭರ್ತಿಯಾಗಿ ಕೋಡಿ ಹರಿದರೆ ಆ ನೀರು ಹರಿದು ಹೋಗಲು ನಾಲೆಯನ್ನು ನಿರ್ಮಿಸಲಾಗಿತ್ತು. ಆದರೆ ಕ್ರಮೇಣ ನಾಲೆ ಒತ್ತುವರಿಯಾಗಿರುವುದರಿಂದ ಹರಿಯುವ ಹೆಚ್ರುವರಿ ನೀರು ಜಮೀನುಗಳಿಗೆ ನುಗ್ಗುತ್ತಿದೆ. ಅಲ್ಲದೇ ನಿರ್ಮಾಣವಾದಾಗಿನಿಂದ ಇದುವರೆಗೂ ಒಮ್ಮೆಯೂ ನಾಲೆಯಲ್ಲಿ ಹೂಳು ತೆಗೆಸದೇ ಇರುವುದರಿಂದ ಸಹ ಜಮೀನುಗಳಿಗೆ ನೀರು ನುಗ್ಗಲು ಕಾರಣ ಎನ್ನುತ್ತಾರೆ ಇಲ್ಲಿನ ರೈತರು.

‘ಇರುವ 6 ಎಕರೆಯಲ್ಲಿ 3 ಎಕರೆಯಲ್ಲಿ ಬಾಳೆ ಹಾಗೂ ಉಳಿದ 3 ಎಕರೆಯಲ್ಲಿ ಕಬ್ಬು ಬಳೆದಿದ್ದೇನೆ. ಆದರೆ ಈಗ ಎರಡು ಫಸಲು ನೀರಿನಿಂದ ಆವೃತವಾಗಿವೆ. ವರ್ಷದಿಂದ ಜತನದಿಂದ ಕಾಪಾಡಿಕೊಂಡ ಬಂದ ಫಸಲು ಈಗ ಕೈಗೆ ಸಿಗದೇ ಹಾಳಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ನಿಂಗರಾಜು ಒತ್ತಾಯಿಸಿದರು.

--

ಜಲಾಶಯಕ್ಕೆ ಸೇರಿದ ನಾಲೆಗಳಲ್ಲೂ ಹೂಳು ತೆಗೆಸಿ, ಜಮೀನಿಗೆ ನೀರು ನುಗ್ಗದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ವಹಿಸಬೇಕು.
ನಿಂಗರಾಜು, ಸ್ಥಳೀಯ ರೈತ

---

ನೀರು ನಾಲೆಯ ಮೇಲೆ ಹರಿಯುತ್ತಿರುವುದರಿಂದ ರಸ್ತೆಯೂ ಮುಚ್ಚಿಹೋಗಿದೆ. ಜಮೀನಿಗೆ ಹೋಗುವುದಕ್ಕೆ ಹರಸಾಹಸ ಪಡಬೇಕಾಗಿದೆ
ರಾಜೇಂದ್ರ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT