ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಬಿಜೆಪಿ ಬೆಂಬಲಿಗನ ಕೋಟಿ ಸವಾಲು, ಕಾಂಗ್ರೆಸ್‌ ಬೆಂಬಲಿಗನ ₹3 ಲಕ್ಷ ಬಾಜಿ

Published 11 ಮೇ 2023, 15:14 IST
Last Updated 11 ಮೇ 2023, 15:14 IST
ಅಕ್ಷರ ಗಾತ್ರ

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಚುನಾವಣಾ ಫಲಿತಾಂಶ ಬರಲು ಒಂದು ದಿನವಷ್ಟೇ ಬಾಕಿ ಇದ್ದು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿಗರು ನಗದು ಹಣವನ್ನು ಎದುರು ಇಟ್ಟುಕೊಂಡು ತಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ. 

ಕಾಂಗ್ರೆಸ್‌ ಬೆಂಬಲಿಗರೊಬ್ಬರು ಮತ್ತು ಬಿಜೆಪಿ ಬೆಂಬಲಿಗರೊಬ್ಬರು ಸವಾಲು ಹಾಕುತ್ತಿರುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ಬಿಜೆಪಿ ಅಭ್ಯರ್ಥಿ ಸಿ.ಎಸ್‌.ನಿರಂಜನಕುಮಾರ್‌ ಅವರು ಗೆಲ್ಲುತ್ತಾರೆ ಎಂದು ₹1 ಕೋಟಿಗೂ ಹೆಚ್ಚು ಹಣ ಬಾಜಿ ಕಟ್ಟಲು ಸಿದ್ಧರಿದ್ದೇವೆ ಎಂದು ಗುಂಡ್ಲುಪೇಟೆ ಪುರಸಭಾ ಸದಸ್ಯ ಕಿರಣ್‌ ಗೌಡ, ಹಣದ ಕಟ್ಟುಗಳನ್ನು ಎದುರು ಇಟ್ಟುಕೊಂಡು ವಿಡಿಯೊದಲ್ಲಿ ಹೇಳಿದರೆ, ಕಾಂಗ್ರೆಸ್‌ ಬೆಂಬಲಿಗರೊಬ್ಬರು ಪ್ಲಾಸ್ಟಿಕ್‌ ಕವರ್‌ನಲ್ಲಿ ನಗದು ಹಣ ಇಟ್ಟುಕೊಂಡು, ₹3 ಲಕ್ಷ ಬಾಜಿಯ ಸವಾಲನ್ನು ವಿಡಿಯೊದಲ್ಲಿ ಹಾಕಿದ್ದಾರೆ. 

ವಿಡಿಯೊಗಳಲ್ಲೇನಿದೆ?: ಬಿಜೆಪಿ ಪುರಸಭಾ ಸದಸ್ಯ ಕಿರಣ್‌ ಗೌಡ, ‘ಗುಂಡ್ಲುಪೇಟೆ ಕ್ಷೇತ್ರದ ಸಿ.ಎಸ್‌.ನಿರಂಜನಕುಮಾರ್‌ ಅವರು ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ನಾವು ₹1 ಕೋಟಿಗೂ ಹೆಚ್ಚು ಬಾಜಿ ಕಟ್ಟುವುದಕ್ಕೆ ಸಿದ್ದರಿದ್ದೇವೆ. ಕಾಫಿ ಡೇ ಹತ್ತಿರ ಸಂಜೆ 6 ಗಂಟೆವರೆಗೆ ಇರುತ್ತೇವೆ. ನಾವು 50 ಮಂದಿ ಕಾರ್ಯಕರ್ತರು ತಲಾ ₹2 ಲಕ್ಷದಂತೆ ₹1 ಕೋಟಿ ಸಿದ್ಧ ಮಾಡಿದ್ದೇವೆ. ಯಾವಾಗ ಬೇಕಾದರೂ ಕಟ್ಟುವುದಕ್ಕೆ ಸಿದ್ಧರಿದ್ದೇವೆ. ಕಾಂಗ್ರೆಸ್‌ ಮುಖಂಡರೇ ದಯಮಾಡಿ ಇದಕ್ಕೆ ನೀವು ಸ್ಪಂದಿಸಿ ₹1 ಕೋಟಿ ಕಟ್ಟಬೇಕಾಗಿ ವಿನಂತಿ’ ಎಂದು ಹೇಳುವ ದೃಶ್ಯ 27 ಸೆಕೆಂಡ್‌ಗಳ ತುಣುಕಿನಲ್ಲಿದೆ. 

ಮತ್ತೊಂದು ವಿಡಿಯೊದಲ್ಲಿ ಗುಂಡ್ಲುಪೇಟೆ ಕ್ಷೇತ್ರ ವ್ಯಾಪ್ತಿಯ ಮಲ್ಲಯ್ಯನಪುರ ಗ್ರಾಮದ ಮುದ್ದರಾಮೇಮೇಗೌಡ ಎಂಬುವವರು, ಕಾಂಗ್ರೆಸ್‌ ಗೆದ್ದೇಗೆಲ್ಲುತ್ತದೆ ಎಂದು ಕಾಂಗ್ರೆಸ್‌ ಮುಖಂಡರಿಗೆ  ₹3 ಲಕ್ಷ ಹಣದ ಸವಾಲು ಹಾಕುವ ದೃಶ್ಯ ಇದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ‘ವಿಡಿಯೊಗಳು ಗಮನಕ್ಕೆ ಬಂದಿಲ್ಲ. ಈ ವಿಚಾರವನ್ನು ಪರಿಶೀಲಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT