ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ‌ | ಸಿಗದ ಇಸಿ, ಆರ್‌ಟಿಸಿ; ರೈತರಿಗೆ ತೊಂದರೆ

ಸೊಸೈಟಿಗಳಲ್ಲಿ ಸಿಗುತ್ತಿಲ್ಲ ಹೊಸ ಸಾಲ, ನಡೆಯುತ್ತಿಲ್ಲ ಕೃಷಿ ಚಟುವಟಿಕೆ
Last Updated 22 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ‌: ಕೋವಿಡ್–19ರ ಕಾರಣಕ್ಕೆ ಲಾಕ್‌ಡೌನ್‌ನಿಂದಾಗಿ ಸರ್ಕಾರಿ ಕಚೇರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಇಸಿ (ಋಣಭಾರ ರಹಿತ ಪ್ರಮಾಣಪತ್ರ ) ಮತ್ತು ಪಹಣಿ (ಆರ್‌ಟಿಸಿ) ದೊರೆಯದ ಕಾರಣ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವಹಿವಾಟಿಗೆ ತೊಡಕಾಗಿದೆ.

ಸಾಲವನ್ನು ಮರುಪಾವತಿಸಿ, ಹೊಸ ಸಾಲ ಪಡೆಯಲು ರೈತರು ಓಡಾಡುತ್ತಿದ್ದಾರೆ. ದಾಖಲೆಗಳನ್ನು ಸರಿಯಾದ ಸಮಯಕ್ಕೆ ಪಡೆದುಕೊಳ್ಳಲು ಆಗದಿರುವುದರಿಂದ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಪರದಾಟ ನಡೆಸುತ್ತಿದ್ದಾರೆ.

ತಾಲ್ಲೂಕಿನ ಶಿವಪುರ ಮತ್ತು ಬರಗ ಗ್ರಾಮಗಳಲ್ಲಿ ರೈತರು ಕಳೆದ ವರ್ಷ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಿದ್ದಾರೆ. ಮರುಪಾವತಿಗೆ ಮಾರ್ಚ್‌ 10 ಕೊನೆಯ ದಿನವಾಗಿತ್ತು. ಅದರಂತೆ ರೈತರು ಸಾಲವನ್ನು ಮರುಪಾವತಿ ಮಾಡಿ ಮತ್ತೆ ಸಾಲವನ್ನು ಪಡೆದುಕೊಳ್ಳಲು ತಯಾರಾಗಿದ್ದರು.

ಬಳಿಕ ಲಾಕ್‌ಡೌನ್‌ ಜಾರಿಯಾದ ನಂತರ ರೈತರಿಗೆ ಸಾಲ ದೊರೆತಿಲ್ಲ. ಇದರಿಂದಾಗಿ ಬಡ್ಡಿಗೆ ಸಾಲ ತೆಗೆದುಕೊಂಡು ಸಹಕಾರ ಸಂಘದ ಸಾಲವನ್ನು ಕಟ್ಟಿದವರು, ಕೃಷಿ ಚಟುವಟಿಕೆಗಳನ್ನು ಆರಂಭ ಮಾಡಬೇಕಾದವರಿಗೆ ತೊಂದರೆಯಾಗಿದೆ ಎಂದು ರೈತರೊಬ್ಬರು ತಿಳಿಸಿದರು.

ಸೊಸೈಟಿಯಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿದರೆ ಮತ್ತೆ ಶೇ 10 ಹೆಚ್ಚಳದೊಂದಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಇದನ್ನು ರೈತರು ಕೃಷಿ ಇನ್ನಿತರ ಕೆಲಸ ಗಳಿಗೆ ಉಪಯೋಗಿಸಿಕೊಳ್ಳುತ್ತಾರೆ.

‘ರೈತರಿಗೆ ಇಸಿ ಮತ್ತು ಆರ್‌ಟಿಸಿ ಸಿಗದಿರುವುದು ಸರ್ಕಾರದ ಸಮಸ್ಯೆ. ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಸೊಸೈಟಿ ಸಾಲವನ್ನು ನಂಬಿರುವ ಅನೇಕ ರೈತರು ಇದ್ದಾರೆ. ತಾಲ್ಲೂಕು ಮತ್ತು ಜಿಲ್ಲಾಡಳಿತ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು ಇಲ್ಲವಾದಲ್ಲಿ ವಿನಾಯಿತಿ ನೀಡಿ ಸಾಲ ನೀಡಬೇಕು’ ಎಂದು ಶಿವಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕ ಬಿ.ಎಂ.ಮಂಜಪ್ಪ ಆಗ್ರಹಿಸಿದರು.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ನಂಜುಂಡಯ್ಯ ಅವರು, ‘ರೈತರಿಗೆ ಅನುಕೂಲವಾಗುವಂತೆ ಇಸಿ ನೀಡಲು ಉಪ ನೋಂದಣಿ ಅಧಿಕಾರಿಗೆ ತಿಳಿಸುತ್ತೇನೆ. ಕೋವಿಡ್‌–19 ಕಾರಣಕ್ಕೆ ಕಚೇರಿ ಮುಚ್ಚಲಾಗಿತ್ತು.

ಈಗ ಕಚೇರಿಗಳನ್ನು ಮತ್ತೆ ಆರಂಭಿಸಲಾಗಿದೆ. ಹಾಗಾಗಿ ಸಮಸ್ಯೆ ಶೀಘ್ರವಾಗಿ ಬಗೆಹರಿಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT