ಸೋಮವಾರ, ಜುಲೈ 4, 2022
23 °C
ಪುರಸಭೆಯಲ್ಲಿ ಅಧಿಕಾರ ಹಿಡಿಯಲು ವಿಫಲ, ತಾಲ್ಲೂಕಿನಲ್ಲಿ ಬಿಜೆಪಿಗೆ ಇನ್ನಷ್ಟು ಬಲ

ಗುಂಡ್ಲುಪೇಟೆ: ಕುಸಿದ ಕಾಂಗ್ರೆಸ್ ಶಕ್ತಿ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ದಿವಂಗತ ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರ ಕಾಲದಲ್ಲಿ ಕಾಂಗ್ರೆಸ್‌ ಹಿಡಿತದಲ್ಲಿದ್ದ ತಾಲ್ಲೂಕು, ಅವರ ನಿಧನಾ ನಂತರ ನಿಧಾನವಾಗಿ ‘ಕೈ’ ಜಾರುತ್ತಿರುವಂತೆ ಭಾಸವಾಗುತ್ತಿದೆ.  

2018ರ ವಿಧಾನಸಭಾ ಚುನಾವಣಾ ಸೋಲಿನ ನಂತರ ಪುರಸಭೆ ಚುನಾವಣೆಯಲ್ಲೂ ಎಂಟು ಸ್ಥಾನಗಳನ್ನು ಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಕಾಂಗ್ರೆಸ್‌, ಪುರಸಭೆ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದ ಚುನಾವಣೆಯಲ್ಲಿ ಭಾಗವಹಿಸಿದೇ ಕೈ ಚೆಲ್ಲಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಬಹುಮತ ಸಾಬೀತು ಪಡಿಸಿ ಅಧಿಕಾರಕ್ಕೆ ಏರಿದೆ.

ಇದಕ್ಕೂ ಮೊದಲಿನ ಎಲ್ಲ ಅವಧಿಯಲ್ಲೂ ಕಾಂಗ್ರೆಸ್‌ ಪುರಸಭೆ ಆಡಳಿತದ ಭಾಗವಾಗಿತ್ತು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಸಹಕಾರ ಸಂಘ, ಸ್ಥಳೀಯ ಆಡಳಿತದಲ್ಲಿ ಅಧಿಕಾರ ಅನುಭವಿಸಿದ್ದ ಕಾಂಗ್ರೆಸ್‌ ಈಗ ಒಂದೊಂದನ್ನೇ ಕಳೆದುಕೊಳ್ಳುತ್ತಿದೆ. ವಿಧಾನಸಭಾ ಕ್ಷೇತ್ರದ ಬಳಿಕ ಪುರಸಭೆಯನ್ನು ಕಳೆದುಕೊಂಡಿದೆ. ಹಾಪ್‌ಕಾಮ್ಸ್‌, ಎಂಡಿಸಿಸಿ, ಎಪಿಎಂಸಿ, ಪ‍್ರಾಧಮಿಕ ಕೃಷಿ ಪತ್ತಿನ ಬ್ಯಾಂಕ್‌ಗಳಲ್ಲಿ ಸದ್ಯ ಕಾಂಗ್ರೆಸಿಗರೇ ಮೇಲುಗೈ ಸಾಧಿಸಿದ್ದಾರೆ. 

ಪ್ರಯತ್ನ ಪಟ್ಟಿದ್ದ ಮುಖಂಡರು: ಪುರಸಭೆಯಲ್ಲಿ ಈ ಹಿಂದೆಯೂ ಕಾಂಗ್ರೆಸ್‌ಗೆ ಬಹುಮತ ಇರಲಿಲ್ಲ. ಕೆಜೆಪಿ ಸದಸ್ಯರೊಂದಿಗೆ ಸೇರಿ ಕಳೆದ ಬಾರಿ ಅಧಿಕಾರ ಪಡೆದಿತ್ತು. ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ.ಗಿರೀಶ್‌ ಅವರೇ ಅಧ್ಯಕ್ಷ ಸ್ಥಾನ ಪಡೆದಿದ್ದರು. ಅಧಿಕಾರ ಹಂಚಿಕೆ ಮಾತುಕತೆಯಂತೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಾಗ, ಗಿರೀಶ್‌ ಅವರು ಬಿಜೆಪಿಯೊಂದಿಗೆ ಸೇರಿ ಅಧ್ಯಕ್ಷರಾಗಿ ಮುಂದುವರಿದಿದ್ದರು. 

ಬಹುಮತ ಪಡೆಯಲು ಈ ಬಾರಿ ಬಿಜೆಪಿಯ ನಾಲ್ಕೈದು ಸದಸ್ಯರನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸಿತ್ತು. ಎಸ್‌ಡಿಪಿಐ ಹಾಗೂ ಪಕ್ಷೇತರ ಸದಸ್ಯರ ಬೆಂಬಲ ಪಡೆದು ಅಧಿಕಾರ ಪಡೆಯುವ ಯೋಜನೆಯನ್ನೂ ಹಾಕಿಕೊಂಡಿತ್ತು. ಆದರೆ, ಅದು ಯಶಸ್ವಿಯಾಗಿಲ್ಲ. 

ನಾಲ್ವರು ಸದಸ್ಯರೊಂದಿಗೆ ಮಾತುಕತೆಯೂ ನಡೆದಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವರು ಮಾತು ತಪ್ಪಿದ್ದರಿಂದ ಅಧಿಕಾರ ಬಿಜೆಪಿ ಪಾಲಾಯಿತು ಎಂದು ಹೇಳುತ್ತಾರೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು.  

‘ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರು ಪೂರ್ಣ ಮನಸ್ಸಿನಿಂದ ಪಿ.ಗಿರೀಶ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿಲ್ಲ. ಬ್ಲಾಕ್ ಮೇಲ್ ತಂತ್ರಕ್ಕೆ ಹೆದರಿ ಅದ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಇವರು ಪೂರ್ಣಾವಧಿ ಅಧಿಕಾರ ಮಾಡುವುದಿಲ್ಲ. ಇನ್ನೊಂದು ವರ್ಷದಲ್ಲಿ ಮತ್ತೆ ಚುನಾವಣೆ ಎದುರಾಗುತ್ತದೆ’ ಎಂದು ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಅವರು ತಿಳಿಸಿದರು.

ಸಮರ್ಥನೆ: ‘ನಾಲ್ವರು ಬಿಜೆಪಿ ಸದಸ್ಯರು ನಮ್ಮ ಪಕ್ಷಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಕೊನೆ ಗಳಿಗೆಯಲ್ಲಿ ಮಾತು ಬದಲಾಯಿಸಿದ ಕಾರಣ, ಚುನಾವಣೆಯಲ್ಲಿ ಯಾರೂ ಭಾಗವಹಿಸಬೇಡಿ ಎಂದು ತಿಳಿಸಿದ್ದೆ. ಸ್ಥಳೀಯವಾಗಿ ಎಲ್ಲ ಬೋರ್ಡ್‌ಗಳು (ಸಹಕಾರ ಸಂಘಗಳು, ಎಪಿಎಂಸಿ)  ಕಾಂಗ್ರೆಸ್ ಬಳಿ ಇವೆ. ತಾಲ್ಲೂಕಿನಲ್ಲಿ ಉತ್ತಮ ಬೆಳವಣಿಗೆ ಆಗುತ್ತಿರುವಾಗ ಮುಖಭಂಗವಾಗಬಾರದು ಎಂದು ನಾವು ಚುನಾವಣೆಗೆ ಸ್ಪರ್ಧಿಸಿಲ್ಲ’ ಎಂದು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದ ನಡೆಯನ್ನು ಅವರು ಸಮರ್ಥಿಸಿಕೊಂಡರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು