ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ಗುಂಡ್ಲುಪೇಟೆ ಸಾಧಕ

ಜಪಾನ್‌ನ ಕನ್ಸಾಯಿಯಲ್ಲಿ ನಡೆಯಲಿರುವ ಕೂಟದಲ್ಲಿ ದೇಶ ಪ್ರತಿನಿಧಿಸಲಿರುವ ದೊಡ್ಡಪ್ಪಾಜಿ
Last Updated 15 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಪಾನಿನ ಕನ್ಸಾಯಿ ನಗರದಲ್ಲಿ 2022ರ ಮೇ 13ರಿಂದ 29ರವರೆಗೆ ನಡೆಯಲಿರುವ ವಿಶ್ವ ಮಾಸ್ಟರ್ಸ್‌ (ಹಿರಿಯರ) ಕ್ರೀಡಾಕೂಟ–2022ಕ್ಕೆ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹೊನ್ನಶೆಟ್ಟರ ಹುಂಡಿಯ ಕ್ರೀಡಾಪಟು ದೊಡ್ಡಪ್ಪಾಜಿ ಆಯ್ಕೆಯಾಗಿದ್ದಾರೆ.

ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ರುವ 30 ವರ್ಷದ ದೊಡ್ಡಪ್ಪಾಜಿ 5 ಸಾವಿರ, 10 ಸಾವಿರ ಮೀಟರ್‌ ಹಾಗೂ ಹಾಫ್‌ ಮ್ಯಾರಥಾನ್‌ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕಳೆದ ವರ್ಷ ಗುಜರಾತ್‌ನ ವಡೋ ದರಾದಲ್ಲಿ ನಡೆದಿದ್ದ 3ನೇ ರಾಷ್ಟ್ರೀಯ ಮಾಸ್ಟರ್ಸ್‌ ಕ್ರೀಡಾಕೂಟ ಹಾಗೂ ಈ ವರ್ಷದ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯ ಮಟ್ಟದ2ನೇ ಮಾಸ್ಟರ್ಸ್‌ ಕ್ರೀಡಾಕೂಟದಲ್ಲಿ ದೊಡ್ಡಪ್ಪಾಜಿ ತೋರಿದ ಪ್ರದರ್ಶನದ ಆಧಾರದಲ್ಲಿ ವಿಶ್ವ ಮಾಸ್ಟರ್ಸ್‌ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲ್ಯದ ಆಸಕ್ತಿ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಗೆಯಲ್ಲಿ ರುವ ಜೆಎಸ್‌ಎಸ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ದೊಡ್ಡಪ್ಪಾಜಿ ಅವರಿಗೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ. ಅವರ ಕ್ರೀಡಾ ಸಾಧನೆಗೆ ಪ್ರೇರಣೆಯಾದವರು ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಗುರುಮಲ್ಲೇಶ್‌.

‘2004ರಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟವೊಂದರ ಮ್ಯಾರಥಾನ್‌ನಲ್ಲಿ ಇಥಿಯೋಪಿಯಾದ ಕ್ರೀಡಾಪಟುವೊಬ್ಬರು ಚಿನ್ನ ಗಳಿಸಿದ್ದರು. ನಮಗೆ ದೈಹಿಕ ಶಿಕ್ಷಣ ಮೇಷ್ಟ್ರಾಗಿದ್ದ ಗುರುಮಲ್ಲೇಶ್‌, ಕ್ರೀಡಾಪಟು ಹಾಗೂ ಅವರ ಸಾಧನೆಯ ಬಗ್ಗೆ ವಿವರಿಸಿದ್ದು ನನ್ನಲ್ಲಿ ಕ್ರೀಡೆಯ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿಸಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಅಂದುಕೊಂಡು ಕ್ರೀಡಾಭ್ಯಾಸದಲ್ಲಿ ತೊಡಗಿಸಿಕೊಂಡೆ’ ಎಂದು ದೊಡ್ಡಪ್ಪಾಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಒಲಿದ ದೂರ ಅಂತರ ಓಟ: ಸಣ್ಣಕೆ, ಸ್ವಲ್ಪ ಕುಳ್ಳಗೆ ಇರುವ ದೊಡ್ಡಪ್ಪಾಜಿ ಅವರ ದೇಹ ರಚನೆ ವೇಗದ ಓಟಕ್ಕೆ ಸೂಕ್ತವಾಗಿಲ್ಲ. ಹಾಗಾಗಿ ದೂರ ಅಂತರ ಓಟ (ಲಾಂಗ್‌ ರನ್‌) ವಿಭಾಗವನ್ನು ಅವರು ಆಯ್ದುಕೊಂಡರು.

ಟ್ರ್ಯಾಕ್‌ನಲ್ಲಿ ಇದುವರೆಗೆ ಅವರು 3 ಸಾವಿರ ಮೀಟರ್‌ಗಿಂತ ಹೆಚ್ಚು ದೂರ ಓಟದ ಸ್ಪರ್ಧೆಗಳಲ್ಲೇ ಭಾಗವಹಿಸಿದ್ದಾರೆ. ಹಾಫ್‌ ಮ್ಯಾರಥಾನ್‌, ಮ್ಯಾರಥಾನ್‌ ಹಾಗೂ ಕ್ರಾಸ್‌ ಕಂಟ್ರಿ ಸ್ಪರ್ಧೆಗಳಲ್ಲೂ ಅವರು ಸಾಧನೆ ಮಾಡಿದ್ದಾರೆ.

ಪ್ರೌಢಶಾಲೆ, ಪಿಯುಸಿಯಲ್ಲಿರುವಾ ಗಲೇ ತಾಲ್ಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಗೆದ್ದು ರಾಜ್ಯಮಟ್ಟ ದಲ್ಲೂ ಸ್ಪರ್ಧಿಸಿದ್ದರು. ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆಯು ತ್ತಿದ್ದ ಸಂದರ್ಭದಲ್ಲಿ ಕಾಲೇಜು, ವಿಶ್ವವಿದ್ಯಾ ಲಯದ ಮಟ್ಟದಲ್ಲಿ ರಾಷ್ಟ್ರೀಯ ಮಟ್ಟದ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಕ್ರೀಡಾ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು.

‘2009ರಲ್ಲಿ ಕೇರಳದ ಕೊಟ್ಟಾಯಂನ ಎಂ.ಜಿ.ವಿಶ್ವವಿದ್ಯಾಲಯ ದಲ್ಲಿ ನಡೆದ ಅಂತರ ವಿ.ವಿ. ಕ್ರಾಸ್‌ ಕಂಟ್ರಿ ಸ್ಪರ್ಧೆ ನಾನು ಭಾಗವಹಿಸಿದ ಮೊದಲ ರಾಷ್ಟ್ರೀಯ ಮಟ್ಟದ ಸ್ಪರ್ಧೆ. ಮರು ವರ್ಷ ಉತ್ತರಾಖಂಡ್‌ನಲ್ಲಿ ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಬಳಿಕ ಸ್ನಾತಕೋತ್ತರ ಕೋರ್ಸ್‌ ಮುಗಿಯುವವರೆಗೆ ಹಲವು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದೆ’ ಎಂದು ದೊಡ್ಡಪ್ಪಾಜಿ ವಿವರಿಸಿದರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾ ಮಟ್ಟದಲ್ಲಿ ನೀಡುವ ಜಿಲ್ಲಾ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ 2012–13ರಲ್ಲಿ ದೊಡ್ಡೊಪ್ಪಾಜಿ ಭಾಜನರಾಗಿದ್ದರು.2016ರಲ್ಲಿ ಮೈಸೂರು ಅಥ್ಲೆಟಿಕ್‌ ಕ್ಲಬ್‌ ಮತ್ತು ಮೈಸೂರಿನ ವಿದ್ಯಾ ವಿಕಾಸ್‌ ಎಜುಕೇಷನ್‌ ಟ್ರಸ್ಟ್‌ಗಳು ‘ಮೈಸೂರು ಜಿಲ್ಲೆಯ ಉತ್ತಮ ಕ್ರೀಡಾಪಟು ಪ್ರಶಸ್ತಿ’ ನೀಡಿ ಗೌರವಿಸಿದ್ದವು.

ದಿನಕ್ಕೆ ಎರಡು ಗಂಟೆ ಅಭ್ಯಾಸ

‘ಕೌಟುಂಬಿಕ ಕಾರಣಗಳಿಂದ ಮುಖ್ಯವಾಹಿನಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆಗಲಿಲ್ಲ. ಅಷ್ಟೊತ್ತಿಗೆ ವಯಸ್ಸೂ ದಾಟಿತ್ತು. ಹಾಗಾಗಿ, ವಯಸ್ಸು ಆಧಾರಿತ ಹಿರಿಯರ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದೆ’ ಎಂದು ಮಾಸ್ಟರ್ಸ್‌ ಕ್ರೀಡಾಕೂಟಗಳಲ್ಲಿ ತೊಡಗಿಕೊಳ್ಳಲು ಕಾರಣವಾದ ಅಂಶಗಳನ್ನು ದೊಡ್ಡಪ್ಪಾಜಿ ವಿವರಿಸಿದರು.

ಪ್ರತಿ ದಿನ 30ರಿಂದ 40ಕಿ.ಮೀ. ದೂರದವರೆಗೆ ಓಟದ ಅಭ್ಯಾಸವನ್ನು ಅವರು ಮಾಡುತ್ತಾರೆ.

‘ಈಗ ತರಗತಿ ಆರಂಭವಾಗಿರುವುದರಿಂದ ದಿನಕ್ಕೆ 2 ಗಂಟೆ ಮಾತ್ರ ಅಭ್ಯಾಸಕ್ಕೆ ಅವಕಾಶ ಸಿಗುತ್ತಿದೆ. ಸಕಲೇಶಪುರ ಭಾಗದಲ್ಲಿ ಮಳೆಯೂ ಹೆಚ್ಚಿರುವುದರಿಂದ ಹೊರಾಂಗಣದಲ್ಲಿ ಅಭ್ಯಾಸ ಮಾಡುವುದಕ್ಕೆ ಕಷ್ಟ’ ಎಂದು ಅವರು ಹೇಳಿದರು.

‘ಕ್ರೀಡಾಕೂಟದಲ್ಲಿ ಭಾಗವಹಿಸಲು ನೋಂದಣಿಗೆ ಸಾಲ ಮಾಡಿ ಕಟ್ಟಿದ್ದೇನೆ. ಪೌಷ್ಟಿಕಾಹಾರ ಕೊರತೆ ಇದೆ. ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು. ಆದ್ದರಿಂದ ಸ್ವಲ್ಪ ಆರ್ಥಿಕ ಸಹಾಯ ಅವಶ್ಯಕತೆ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT