ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ನಗ್ನವಾಗಿಯೇ ದೇವಾಲಯಕ್ಕೆ ಬಂದಿದ್ದ ಸಂತ್ರಸ್ತ

ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಪ್ರಕರಣ, ಪೊಲೀಸರಿಂದ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆ
Last Updated 30 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜೂನ್‌ 3ರಂದು ‌ನಡೆದಿದ್ದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಸಂತ್ರಸ್ತ ಯುವಕ ಪ್ರತಾಪ್‌ ಅಂದು ನಗ್ನರಾಗಿಯೇ ದೇವಾಲಯಕ್ಕೆ ಬಂದಿದ್ದರು ಎಂದು ಉಲ್ಲೇಖಿಸಿದ್ದಾರೆ.

ಜಿಲ್ಲೆಯ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಇತ್ತೀಚೆಗೆ ಸಲ್ಲಿಸಿರುವ ಪ್ರಾಥಮಿಕ ಆರೋಪಪಟ್ಟಿಯಲ್ಲಿ, ‘ಮಾನಸಿಕವಾಗಿ ಬಳಲಿದ್ದ ಪ್ರತಾಪ್‌ ಅವರು ಆಶ್ರಯಕ್ಕಾಗಿ ಅಂದು ಬೆಳಿಗ್ಗೆ 6 ಗಂಟೆಗೆ ಕಬ್ಬೇಕಟ್ಟೆ ಶನೇಶ್ವರ ದೇವಾಲಯಕ್ಕೆ ಬಂದಿದ್ದರು. ಮೊದಲ ಆರೋಪಿ ಶಿವಪ್ಪ ಅವರು ಆಶ್ರಯ ಮತ್ತು ಬಟ್ಟೆ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡ ಪ್ರತಾಪ್‌ ಗಲಾಟೆ ಮಾಡಿ ದೇವರ ವಿಗ್ರಹಗಳನ್ನು ಎತ್ತಿ ಎಸೆದು ಭಗ್ನಗೊಳಿಸಿದರು’ ಎಂದು ಹೇಳಲಾಗಿದೆ.

ಅಮಾನವೀಯ ವರ್ತನೆ: ‘ಪ್ರತಾಪ್‌ ಸಂಪೂರ್ಣವಾಗಿ ಬೆತ್ತಲೆಯಾಗಿದ್ದರೂ ಆರೋಪಿಗಳು ಅವರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಓಡಾಡುವವರಿಗೆ ಎದ್ದುಕಾಣುವಂತೆ ಅಪಹಾಸ್ಯ ಮಾಡುತ್ತಾ ದೇವಾಲಯದ ಆವರಣಕ್ಕೆ ಕರೆದುಕೊಂಡು ಬಂದು, ತೆಂಗಿನಮರಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಪ್ರತಾಪ್‌ ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ತಿಳಿದ ಮೇಲೂ ಅವಾಚ್ಯ ಶಬ್ದಗಳಿಂದ ಬೈಯುತ್ತಾ ದೌರ್ಜನ್ಯ ಎಸಗಿರುವುದು ತನಿಖೆಯಿಂದ ದೃಢಪಟ್ಟಿದೆ’ ಎಂದು ಹೇಳಲಾಗಿದೆ.

ಸಾಕ್ಷಿಗಳ ಹೇಳಿಕೆ:ಪ್ರತಾಪ್‌ ಅವರು ಬೇಗೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಗ್ನರಾಗಿ ಬರುತ್ತಿರುವುದನ್ನು ಬೆಳಗಿನ ಜಾವ ಕಂಡಿದ್ದಾಗಿ ನಾಲ್ವರು ನೀಡಿರುವ ಹೇಳಿಕೆಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಜೂನ್‌ 3ರಂದು ಮುಂಜಾನೆ 5.45ರ ಸುಮಾರಿಗೆ ಪ್ರತಾಪ್‌ ಅವರು ಬರಿ ಮೈಯಲ್ಲಿ ನಡೆದುಕೊಂಡು ದೇವಸ್ಥಾನದತ್ತ ಸಾಗುತ್ತಿದ್ದುದನ್ನು ನೋಡಿರುವುದಾಗಿ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಬೇಕರಿಯೊಂದರ ನೌಕರ ಹೇಮಂತ್‌ ಕುಮಾರ್‌, ರೈತ ಮಹಿಳೆ ಮಹದೇವಮ್ಮ, ಡೇರಿಯಲ್ಲಿ ಕೆಲಸ ಮಾಡುವ ನಾಗಮ್ಮ ಹಾಗೂ ಸ್ಥಳೀಯ ಕೃಷಿಕ ರಾಜಪ್ಪ ಅವರು ತನಿಖಾಧಿಕಾರಿಗಳ ಮುಂದೆ ಸಾಕ್ಷಿ ನುಡಿದಿದ್ದಾರೆ.

ಪ್ರತಾಪ್‌ ಅವರ ಕೈಗಳನ್ನು ಕಟ್ಟಿ ರಸ್ತೆಯಲ್ಲಿ ಬೆತ್ತಲೆಯಾಗಿ ಕರೆದುಕೊಂಡು ಹೋಗುತ್ತಿರುವ ವಿಡಿಯೊ ತುಣುಕೊಂದು ಜೂನ್‌ 10ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ರಾಜ್ಯದಾದ್ಯಂತ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಜೂನ್‌ 3ರಂದು ಈ ಘಟನೆ ನಡೆದಿದ್ದರೂ, ಮಾಧ್ಯಮಗಳಲ್ಲಿ ಪ್ರಕಟಗೊಂಡ ನಂತರ ಪೊಲೀಸರು ಪ್ರಕರಣ ದಾಖಲಿಸಿ, ಆರು ಮಂದಿಯನ್ನು ಬಂಧಿಸಿದ್ದರು.

ಪ್ರತಾಪ್‌ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರನ್ನು ಬೆತ್ತಲೆ ಮಾಡಿ, ಮೆರವಣಿಗೆ ಮಾಡಿದ್ದಲ್ಲದೇ ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಲಾಗಿದೆ ಎಂದು ದೂರುದಾರರು ಹಾಗೂ ದಲಿತ ಸಂಘಟನೆಗಳು ಆರೋಪಿಸಿದ್ದವು.

ಸ್ಕಿಜೋಅಫೆಕ್ಟಿವ್‌ ಡಿಸಾರ್ಡರ್‌ನಿಂದ ಬಳಲುತ್ತಿದ್ದ ಪ್ರತಾಪ್‌
ಪ್ರತಾಪ್‌ ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಮೈಸೂರಿನ ಕೆ.ಆರ್‌.ಆಸ್ಪತ್ರೆಯ ಮಾನಸಿಕ ತಜ್ಞ ಡಾ.ಆರ್‌.ರಾಜಗೋಪಾಲ್‌ ಅವರ ಹೇಳಿಕೆ ಹಾಗೂ ಘಟನೆಯ ನಂತರ ಪ್ರತಾಪ್‌ ಚಿಕಿತ್ಸೆ ಪಡೆದಿರುವ ಮೈಸೂರಿನ ಸೇಂಟ್‌ ಮೇರಿಸ್‌ ಮಾನಸಿಕ ಚಿಕಿತ್ಸೆ ಮತ್ತು ಪುನರ್ವಸತಿ ಕೇಂದ್ರದ ವೈದ್ಯಾಧಿಕಾರಿ ನೀಡಿರುವ ಪ್ರಮಾಣಪತ್ರಗಳನ್ನೂ ಪೊಲೀಸರು ಆರೋಪ ಪಟ್ಟಿಯೊಂದಿಗೆ ಸಲ್ಲಿಸಿದ್ದಾರೆ.

‘ಪ್ರತಾಪ್‌ ಅವರಿಗೆ 1994ರಿಂದಲೇ ಮಾನಸಿಕ ಕಾಯಿಲೆ ಇದೆ. ಸ್ಕಿಜೋಅಫೆಕ್ಟಿವ್‌ ಡಿಸಾರ್ಡರ್‌ನಿಂದ (ಅಸಹಜ ಯೋಚನೆಗಳು, ಉನ್ಮಾದ, ಖಿನ್ನತೆಯಂತಹ ಸಮಸ್ಯೆಗಳಿರುವ ಸ್ಥಿತಿ) ಬಳಲುತ್ತಿರುವುದು ಪತ್ತೆಯಾಗಿದೆ’ ವೈದ್ಯರು ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ.

‘ಸ್ವಭಾವತಃ ಪ್ರತಾಪ್‌ ಅವರು ಪ್ರಾಮಾಣಿಕ ಹಾಗೂ ಆಧ್ಯಾತ್ಮಿಕ ವ್ಯಕ್ತಿ. ಆದರೆ, ಮಾನಸಿಕ ಆರೋಗ್ಯದಲ್ಲಿ ಏರುಪೇರಾದಾಗ ಸ್ವತಃ ತಮಗೆ ಅಥವಾ ಇತರರಿಗೆ ಹಾನಿ ಮಾಡಬಹುದು. ಹಿಂದೆಯೂ ಈ ರೀತಿ ಹಲವು ಬಾರಿ ಆಗಿದ್ದು, ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಇಂತಹ ಮಾನಸಿಕ ಸ್ಥಿತಿಯಲ್ಲಿ ರೋಗಿಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಕ್ತಿ ಇರುತ್ತದೆ. ಹೆಚ್ಚು ಮಾತನಾಡುತ್ತಾರೆ, ವರ್ತನೆಯ ಮೇಲೆ ನಿಯಂತ್ರಣ ಇರುವುದಿಲ್ಲ. ಹಾಗಾಗಿ, ದೇವಸ್ಥಾನದಲ್ಲಿ ಪ್ರತಾಪ್‌ ಅವರು ವಿಗ್ರಹಗಳನ್ನು ಒಡೆದು ಹಾಕಿರುವ ಸಾಧ್ಯತೆ ಇದೆ’ ಎಂದು ಡಾ.ರಾಜ್‌ಗೋಪಾಲ್‌ ಅವರು ಪೊಲೀಸರಿಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾತ್ರೆ ತೆಗೆದುಕೊಂಡಿರಲಿಲ್ಲ: ‘ಘಟನೆ ನಡೆಯುವುದಕ್ಕೂ ಹಿಂದಿನ ಕೆಲವು ದಿನಗಳಿಂದ ಪ್ರತಾಪ್‌ ಅವರು ಮಾತ್ರೆ ತೆಗೆದುಕೊಂಡಿರಲಿಲ್ಲ. ಈ ಕಾಯಿಲೆಗೆ ನಿರಂತರವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಒತ್ತಡ ಹೆಚ್ಚಾಗಿ ಅಸಹಜ ವರ್ತನೆ ತೋರುತ್ತಾರೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT