ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಪಣ

ಬಿಇಒ ತಂಡದಿಂದ ಶಾಲೆಗಳಿಗೆ ಭೇಟಿ, ಪೋಷಕರ ಸಭೆ ಸೇರಿದಂತೆ ಹಲವು ಕಾರ್ಯಕ್ರಮ
Last Updated 9 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ನಾಲ್ಕೈದು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಗುಂಡ್ಲುಪೇಟೆ ತಾಲ್ಲೂಕು ಜಿಲ್ಲೆಯಲ್ಲೇ ಕಡೆಯ ಸ್ಥಾನ ಪಡೆಯುತ್ತಿದ್ದು, ಈ ಬಾರಿ ಹೇಗಾದರೂ ಮಾಡಿ ಉತ್ತಮ ಫಲಿತಾಂಶ ದಾಖಲಿಸಬೇಕು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ವಿವಿಧ ಪ್ರಯೋಗಗಳನ್ನು ಮಾಡುತ್ತಿದೆ.

ಹಿಂದಿನ ವರ್ಷಗಳಲ್ಲಿ ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಫಲಿತಾಂಶ ಉತ್ತಮವಾಗಿತ್ತು. ಆದರೆ, ಅನುದಾನಿತ ಶಾಲೆಗಳ ಸಾಧನೆ ಕಳಪೆಯಾಗಿತ್ತು. ಇದೇ ಕಾರಣದಿಂದ, ಇಡೀ ತಾಲ್ಲೂಕಿನ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು ಎಂಬ ಅಭಿಪ್ರಾಯ ಸರ್ಕಾರಿ ಶಾಲೆಗಳ ಶಿಕ್ಷಕರಲ್ಲಿದೆ.

ಹಲವು ಪ್ರಯೋಗ: ಈ ವರ್ಷ ಗಣನೀಯ ಫಲಿತಾಂಶ ದಾಖಲಿಸಲೇಬೇಕು ಎಂದು ಪಣತೊಟ್ಟಿರುವ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಅವರ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಬಿಇಒ ನೇತೃತ್ವದ ತಂಡ ತಾಲ್ಲೂಕಿನ ಪ್ರತಿ ಪ್ರೌಢಶಾಲೆಗೂ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿಯ ಮೇಲೆ ನಿಗಾ ಇಡುತ್ತಿದೆ.

ವಿಷಯವಾರು ನುರಿತರಿಂದ ತರಬೇತಿ ಕೊಡಿಸಿ, ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡಬೇಕು ಎಂದು ಶಿಕ್ಷಕರಿಗೂ ತಿಳಿಸಲಾಗುತ್ತಿದೆ.

‘ಈಗಾಗಲೇ ತಾಲ್ಲೂಕಿನ 47 ಶಾಲೆಗಳಿಗೂ ಭೇಟಿ ನೀಡಲಾಗಿದೆ. ಕೆಲ ಶಾಲೆಗಳಲ್ಲಿ ಬಾಲಕರಿಗೆ ರಾತ್ರಿ ಶಾಲೆ ತೆರೆಯಲಾಗಿದೆ. ಪೋಷಕರ ಸಭೆ ಕರೆದು, ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಓದಲು ಪೂರಕವಾದ ವಾತಾವರಣ ಸೃಷ್ಟಿಸುವುದು, ಟಿವಿ ಕೇಬಲ್ ತೆಗೆಸುವುದು, ಮಕ್ಕಳು ಮೊಬೈಲ್ ಫೋನ್‌ ಬಳಸದಂತೆ ನೋಡಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿ ಶಾಲೆಯ ಮಕ್ಕಳು ಬೆಳಿಗ್ಗೆ ತಮಗೆ ಸಂಬಂಧಿಸಿದ ಶಿಕ್ಷಕರಿಗೆ ಮಿಸ್ ಕಾಲ್ ನೀಡಿ ಓದಬೇಕು (ವೇಕ್ ಅಪ್ ಕಾಲ್) ಎಂಬ ನಿಯಮ ಜಾರಿಗೆ ತರಲಾಗಿದೆ. ರಾತ್ರಿ ಸಮಯದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ಮಾಡಿ, ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ನಿಗಾ ವಹಿಸುತ್ತಿದ್ದಾರೆ’ ಎಂದು ಬಿಆರ್‌ಸಿ ನಂದೀಶ್ ಮಾಹಿತಿ ನೀಡಿದರು.

‘ಈ ಬಾರಿ ತಾಲ್ಲೂಕಿನಲ್ಲಿ 2,500 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪ್ರತ್ಯೇಕವಾಗಿ ಅನುದಾನಿತ ಶಾಲೆಗೆ ಭೇಟಿ ನೀಡಿ ಫಲಿತಾಂಶ ಉತ್ತಮ ಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಈ ವರ್ಷ ಹೆಚ್ಚು ಫಲಿತಾಂಶ ಬಂದೇ ಬರುತ್ತದೆ. ಅದಕ್ಕಾಗಿ ಶಿಕ್ಷಕರು ಶ್ರಮಪಡುತ್ತಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ವರ್ಗಾವಣೆ ಮಾಡದಂತೆ ಸೂಚನೆ

ಈ ಮಧ್ಯೆ,ಫಲಿತಾಂಶ ಕಡಿಮೆಯಾಗುತ್ತದೆ ಎಂಬ ಉದ್ದೇಶದಿಂದ ಕೆಲವು ಖಾಸಗಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು 9ನೇ ತರಗತಿಯಲ್ಲಿ ಅನುತ್ತೀರ್ಣ ಮಾಡುವುದು ಅಥವಾ ಹತ್ತನೇ ತರಗತಿಗೆ ಬೇರೆ ಶಾಲೆಗೆ ವರ್ಗಾವಣೆ ಪತ್ರ ನೀಡಿ ಕಳುಹಿಸುವ ಪರಿಪಾಠ ಇತ್ತು. ಕಳೆದ ವರ್ಷದಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ, ಕಲಿಕೆಯಲ್ಲಿ ಹಿಂದುಳಿ‌ದಿರುವ ಮಕ್ಕಳನ್ನು ವರ್ಗಾವಣೆ ಮಾಡಬಾರದು ಎಂಬ ಸೂಚನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲ ಶಾಲೆಗಳಿಗೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT