ಹನೂರು: ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿ, ಟೆನಿಕಾಯಿಟ್, ಗುಡ್ಡಗಾಡು ಓಟ, ಚೆಸ್, ಕ್ರಾಸ್‌ಕಂಟ್ರಿ ಪಂದ್ಯಗಳಲ್ಲಿ ಪಟ್ಟಣದ ಜಿ.ವಿ ಗೌಡ ಪದವಿ ಕಾಲೇಜಿನ ಒಟ್ಟು 17 ಕ್ರೀಡಾಪಟುಗಳು ವಿಜೇತರಾಗಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರನ್ನು ಅಭಿನಂದಿಸಿ ಮಾತನಾಡಿದ ಪ್ರಾಂಶುಪಾಲ ಲಾಜರಸ್, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜಯ ಸಾಧಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಠ್ಯದ ಜೊತೆಗೆ ಕ್ರೀಡೆಯಲ್ಲೂ ಪ್ರಗತಿ ಸಾಧಿಸಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢತೆಯಿಂದ ಇರಬೇಕಾದರೆ ಕ್ರೀಡೆ ಮತ್ತು ಶಿಕ್ಷಣ ಅತ್ಯವಶ್ಯಕವಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತರಬೇಕು ಎಂದು ಶುಭಕೋರಿದರು.
ಕಾಲೇಜಿನ ಉಪನ್ಯಾಸಕರಾದ ನಂಜುಂಡಯ್ಯ, ಸವಿತ, ಕುಸುಮ, ಶಿವಕುಮಾರ್, ಫರ್ಹಾನ, ಹರೀಶ್, ಮಹೇಂದ್ರ, ನಂದಿನಿ, ರಕ್ಷಿತಾ, ದೇವಿಕಾ, ನರ್ಮದಾ, ಚೈತ್ರ, ಸಹನ, ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.