ಶನಿವಾರ, ಮೇ 15, 2021
24 °C
ಕೋಳಿಪಾಳ್ಯದಲ್ಲಿ ಕೈಮಗ್ಗ ಉದ್ಯಮಿಗಳೊಂದಿಗೆ ಜಿಲ್ಲಾಧಿಕಾರಿ ಸಂವಾದ

ಚಾಮರಾಜನಗರ: ಜವಳಿ ಉದ್ಯಮ ಅಭಿವೃದ್ಧಿಗೆ ವಸ್ತ್ರಗ್ರಾಮ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಕೈಮಗ್ಗ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದ್ದು, ಜವಳಿ ಉದ್ಯಮ ಅಭಿವೃದ್ದಿ ಚಟುವಟಿಕೆಗಳಿಗಾಗಿ ಪ್ರತ್ಯೇಕ ವಸ್ತ್ರಗ್ರಾಮ ಅಥವಾ ನೇಕಾರ ಗ್ರಾಮವನ್ನಾಗಿ ರೂಪಿಸಲು ಸಮಗ್ರ ವರದಿ ಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಂಗಳವಾರ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಕೋಳಿಪಾಳ್ಯದಲ್ಲಿ ದೊಡ್ಡಮೂಡಹಳ್ಳಿ, ಕೋಳಿಪಾಳ್ಯ, ಮೂಕನಪಾಳ್ಯ, ಬೆಜ್ಜಲಪಾಳ್ಯ, ವೀರಯ್ಯನಪುರ, ರಂಗಸಂದ್ರ (ಬೂದಿಪಡಗ), ಪುಣಜನೂರು ಭಾಗದಲ್ಲಿ ಕೈಮಗ್ಗ ಉದ್ದಿಮೆ ನಡೆಸಲು ತೊಡಗಿರುವ ಫಲಾನುಭವಿಗಳೊಂದಿಗೆ ನಡೆದ ಸಂವಾದ ಹಾಗೂ ಸಾಲ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

‘ಜಿಲ್ಲೆಯು ಕೈಮಗ್ಗ ಆಧಾರಿತ ಉದ್ಯಮಕ್ಕೆ ಹಿಂದಿನಿಂದಲೂ ಹೆಸರು ಪಡೆದಿದೆ. ವಿಶೇಷವಾಗಿ ಕೊಳ್ಳೇಗಾಲದ ಕೈಮಗ್ಗ ರೇಷ್ಮೆ ಸಹ ಖ್ಯಾತಿ ಪಡೆದಿದೆ. ಅಂಕನಶೆಟ್ಟಿಪುರದಲ್ಲಿ ಕೈಮಗ್ಗದಲ್ಲಿ ನೇಯ್ದ ಸೀರೆಗಳು ಇಡೀ ರಾಜ್ಯದಲ್ಲೇ ಗಮನ ಸೆಳೆದಿವೆ. ಪುಣಜನೂರು ಭಾಗದ ವಿವಿಧ ಬೇರೆ ಕೆಲಸಗಳಲ್ಲಿ ತೊಡಗಿರುವ ಅನೇಕರು ಕೈಮಗ್ಗ ಉದ್ಯಮಕ್ಕೆ ಸ್ವಯಂ ಪ್ರೇರಿತರಾಗಿ ಆಸಕ್ತ ಹೊಂದಿದ್ದು ಅತ್ಯಂತ ಬೇಡಿಕೆಯಲ್ಲಿರುವ ಮ್ಯಾಟ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಜವಳಿ ಉದ್ಯಮ ಅಭಿವೃದ್ಧಿಗೆ ವಸ್ತ್ರಗ್ರಾಮ ಅಥವಾ ನೇಕಾರ ಗ್ರಾಮ ಸ್ಥಾಪಿಸಲು ಯೋಜನೆ ರೂಪಿಸಬೇಕಿದೆ’ ಎಂದರು.  

‘ವಸ್ತ್ರಗ್ರಾಮ ಅಥವಾ ನೇಕಾರ ಗ್ರಾಮದಲ್ಲಿ ಕೈಮಗ್ಗ ಆಧರಿತ ಚಟುವಟಿಕೆಗಳಿಗೆ ಅವಶ್ಯವಾದ ಎಲ್ಲ ಅಂಶಗಳನ್ನು ಸೇರ್ಪಡೆ ಮಾಡಬೇಕು. ವಸ್ತ್ರಗ್ರಾಮದಲ್ಲಿ ನೇಕಾರರಿಗೆ ವಸತಿ, ವರ್ಕ್‌ಶಾಪ್, ಸ್ಮಾರ್ಟ್ ಶೋ ರೂಂ, ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯಗಳು ಲಭ್ಯವಾಗುವಂತಿರಬೇಕು. ಈ ಯೋಜನೆಯ ಅನುಷ್ಠಾನಕ್ಕೆ ಬ್ಯಾಂಕಿನಿಂದ ಸಹಕಾರ, ನೆರವು ಪಡೆಯಬಹುದಾಗಿದೆ. ಇಲಾಖೆಯಿಂದಲೂ ಸಹಾಯ ಮಾಡಿಕೊಡಲಾಗುವುದು. ಅಧಿಕಾರಿಗಳು ಯೋಜನೆಗೆ ಅಗತ್ಯ ವಿರುವ ಭೂಮಿ ಗುರುತಿಸಿ ಪ್ರಕ್ರಿಯೆ ಕೈಗೊಳ್ಳಬೇಕು’ ಎಂದು ಡಾ.ಎಂ.ಆರ್.ರವಿ ಅವರು ಕಾರ್ಯಕ್ರಮದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು. 

‘ನೇಕಾರ ವೃತ್ತಿಗೆ ತೊಡಗಿಕೊಂಡಿರುವ ಅನೇಕ ಸ್ಥಳೀಯರು ವಸತಿ ಸೌಲಭ್ಯ ಕಲ್ಪಿಸಿಕೊಡುವ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಜವಳಿ ಇಲಾಖೆ ಯಾರಿಗೆ ಮನೆ ಇಲ್ಲ, ಎಷ್ಟು ಮಂದಿ ವಸತಿ ಸೌಕರ್ಯ ಪಡೆಯಲು ಅರ್ಹರಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ನಡೆಸಬೇಕು. ಇದರ ವರದಿ ಆಧಾರದ ಮೇಲೆ ವಿಶೇಷವಾಗಿ ಗುರಿ ನಿಗದಿ ಪಡಿಸಿಕೊಂಡು ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ ಪಡೆದುಕೊಳ್ಳಲು ಯೋಜನೆ ಸಿದ್ಧಪಡಿಸಿಕೊಳ್ಳಿ’ ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮಸ್ಥರಿಗೆ ಕೈಮಗ್ಗ ಉದ್ಯಮ ನಡೆಸಲು ಲೀಡ್ ಬ್ಯಾಂಕ್ ಮ್ಯಾನೇಜರ್‌ ವಿಜಯ್‌ಕುಮಾರ್ ಚೌರಾಸಿಯಾ ಅವರು ವಿಶೇಷವಾಗಿ ಪರಿಶ್ರಮ ಪಟ್ಟಿದ್ದಾರೆ. ಬ್ಯಾಂಕ್ ಆಫ್ ಬರೋಡ ಸಾಲ ಸೌಲಭ್ಯ ಒದಗಿಸಿದೆ ಎಂದರು.  

ಇದೇ ಸಂದರ್ಭದಲ್ಲಿ 110 ಫಲಾನುಭವಿಗಳಿಗೆ ಅವರು ಸಾಲ ಮಂಜೂರಾತಿ ಪತ್ರ ವಿತರಿಸಿದರು. 

ವೆಂಕಟಯ್ಯನ ಛತ್ರದ ಬ್ಯಾಂಕ್ ಆಫ್ ಬರೋಡ ಶಾಖೆಯ ವ್ಯವಸ್ಥಾಪಕ ವೆಂಕಟೇಶ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಎ.ಮಂಜುನಾಥ್, ಜವಳಿ ಪ್ರವರ್ಧನ ಅಧಿಕಾರಿ ಇ.ಅಶೋಕ್, ಪ್ರಭಾರ ತಹಶೀಲ್ದಾರ್ ನಂಜಯ್ಯ, ಮುಖಂಡರಾದ ಮೇಘ ನಾಯಕ್ ಇದ್ದರು.

110 ಕುಟುಂಬಗಳಿಗೆ ₹30 ಸಾವಿರ ಸಾಲ 

ತಾಲ್ಲೂಕಿನ ಪುಣಜನೂರು ಭಾಗದ ವಿವಿಧ ಗ್ರಾಮಗಳ 110 ಕುಟುಂಬಗಳಿಗೆ ಕೈಮಗ್ಗ ನೇಕಾರಿಕೆ ವೃತ್ತಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಲೀಡ್‌ ಬ್ಯಾಂಕ್‌ ಆಸಕ್ತಿ ವಹಿಸಿ ಸಾಲ ಮಂಜೂರಾಗುವಂತೆ ಮಾಡಿದೆ. 

ಕಾಡಂಚಿನ ಗ್ರಾಮಗಳಾದ ದೊಡ್ಡಮೂಡಹಳ್ಳಿ, ಕೋಳಿಪಾಳ್ಯ, ಮೂಕನಪಾಳ್ಯ, ಬೆಜ್ಜಲಪಾಳ್ಯ, ವೀರಯ್ಯನಪುರ, ರಂಗಸಂದ್ರದ (ಬೂದಿಪಡಗ) 110 ಕುಟುಂಬಗಳಿಗೆ ನೇಕಾರ ವೃತ್ತಿ ಉದ್ದಿಮೆ ಕೈಗೊಳ್ಳಲು ಬ್ಯಾಂಕ್ ಆಫ್ ಬರೋಡ ಸಾಲ ಒದಗಿಸಿದೆ.  

ಈ ಕುಟುಂಬಗಳ ಸದಸ್ಯರು ಜೀವನೋಪಾಯಕ್ಕಾಗಿ ವ್ಯವಸಾಯ ಸೇರಿದಂತೆ ಇತರೆ ಕೂಲಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಬದುಕಿನಲ್ಲಿ ಆದಾಯ ಹೆಚ್ಚಳ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂಬ ಆಕಾಂಕ್ಷೆ ಹೊಂದಿದ್ದ ಇವರು ನೇಕಾರ ವೃತ್ತಿ ಉದ್ದಿಮೆಯಲ್ಲಿ ಆಕ್ತಿ ತೋರಿದ್ದರು.

ನೇಕಾರ ಉದ್ದಿಮೆಗೆ ಮುಂದಾದ 110 ಮಂದಿಯಲ್ಲಿ 102 ಜನರು ಮಹಿಳೆಯರೇ ಇದ್ದಾರೆ. ಸೌಲಭ್ಯ ಪಡೆದವರಲ್ಲಿ 105 ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಪ್ರತಿ ಉದ್ದಿಮೆ ಘಟಕ ವೆಚ್ಚಕ್ಕೆ ₹ 30 ಸಾವಿರ ಸಾಲ ನೀಡಲಾಗಿದೆ. ಫಲಾನುಭವಿಗಳು ಮಗ್ಗ ಹಾಗೂ ಪರಿಕರಗಳ ಖರೀದಿಗಾಗಿ ಈ ಆರ್ಥಿಕ ನೆರವನ್ನು ಬಳಸಿಕೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು