ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ರಾಸಾಯನಿಕ ಮುಕ್ತ ಕೃಷಿ; ಪ್ರಗತಿ ಪರ ರೈತನ ‘ಚಿಯಾ’ ಪ್ರಯೋಗ

Last Updated 28 ಫೆಬ್ರುವರಿ 2021, 1:48 IST
ಅಕ್ಷರ ಗಾತ್ರ

ಹನೂರು: ಹೆಚ್ಚುವರಿ ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರದ ಮೊರೆ ಹೋಗುತ್ತಿರುವ ಇಂದಿನ ದಿನಗಳಲ್ಲಿ ಇಲ್ಲೊಬ್ಬ ರೈತರ, ಇರುವ ಅಲ್ಪ ಜಮೀನಿನಲ್ಲಿ ಸಾವಯವ ಕೃಷಿ ಮೂಲಕ ಮಿಶ್ರ ಬೆಳೆ ಬೆಳೆದು ಗಮನಸೆಳೆದಿದ್ದಾರೆ. ಹೊಸದಾಗಿ ‘ಚಿಯಾ’ ಸಿರಿಧಾನ್ಯವನ್ನು ಪ್ರಯೋಗಿಕವಾಗಿ ಬೆಳೆಯುತ್ತಿದ್ದಾರೆ.

ತಾಲ್ಲೂಕಿನ ಕಣ್ಣೂರು ಗ್ರಾಮದ ರೈತ ಜಗದೀಶ್ ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ರೈತ ಎಂದು ಗುರುತಿಸಿಕೊಂಡವರು. ಇರುವ ನಾಲ್ಕು ಎಕರೆ ಜಮೀನಿನಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ. ಕೃಷಿಯಲ್ಲಿನ ಇವರ ಸಾಧನೆ ಗಮನಿಸಿ ಗುಜರಾತ್‌ನ ಆಡ್‌ಸಾಪ್‌ (ಎಡಿಎಸ್ಎಪಿ)ಎಂಬ ಸಾವಯವ ಸಂಸ್ಥೆ ‘ಸಾವಯವ ರೈತ’ ಹಾಗೂ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಕೃಷಿ ಮೇಳದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರವು ಯುವ ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ.

ತುಂತುರು ನೀರಾವರಿಯಲ್ಲಿ ಕೃಷಿ ಮಾಡುತ್ತಿರುವ ಜಗದೀಶ್ ಈಗಾಗಲೇ ವಿವಿಧ ಬೆಳೆಗಳನ್ನು ಬೆಳೆದು ಆದಾಯವನ್ನು ಗಳಿಸಿದ್ದಾರೆ. ನಾಲ್ಕು ಎಕರೆ ಜಮೀನಿನ ಪೈಕಿ ಎರಡು ಎಕರೆಯಲ್ಲಿ ಬಾಳೆ, ಒಂದು ಎಕರೆ ಜೋಳ ಹಾಗೂ ಮತ್ತೊಂದು ಎಕರೆಯಲ್ಲಿ ಸಿರಿಧಾನ್ಯ ಹಾಗೂ ಬಾಳೆ ಸೇರಿ ಮಿಶ್ರ ಫಸಲು ಬೆಳೆದಿದ್ದಾರೆ. ಎರಡು ಎಕರೆಯಲ್ಲಿ ಬೆಳೆದಿರುವ ಬಾಳೆ ಬೆಳೆ ಸಮೃದ್ಧವಾಗಿದ್ದು ಇನ್ನು ಕೆಲವು ತಿಂಗಳಲ್ಲಿ ಕಟಾವಿಗೆ ಬರಲಿದೆ. ನಿರೀಕ್ಷೆಗೂ ಮೀರಿ ಉತ್ತಮ ಇಳುವರಿ ಬಂದಿರುವುದರಿಂದ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಪ್ರಾಯೋಗಿಕವಾಗಿ ‘ಚಿಯಾ’
ನಾಲ್ಕು ಎಕರೆ ಪೈಕಿ ಒಂದು ಎಕರೆಯಲ್ಲಿ ಬಾಳೆ ಫಸಲಿನೊಂದಿಗೆ ಸಿರಿಧಾನ್ಯಗಳಲ್ಲಿ ಒಂದಾಗಿರುವ ಚಿಯಾ ಬೆಳೆಯನ್ನು ಅವರು ಪ್ರಾಯೋಗಿಕವಾಗಿ ಬಿತ್ತನೆ ಮಾಡಿದ್ದಾರೆ. ಮೊದಲ ಬಾರಿಗೆ ತಮ್ಮ ಜಮೀನಿನಲ್ಲಿ ಚಿಯಾ ಫಸಲು ಬೆಳೆದಿದ್ದಾರೆ.

90 ದಿನಗಳಲ್ಲಿ ಬೆಳೆಯಬಹುದಾದ ಈ ಸಿರಿಧಾನ್ಯವನ್ನು ಬಾಳೆಯೊಂದಿಗೆ ಮಿಶ್ರ ಕೃಷಿಯಾಗಿ ಮಾಡಿದ್ದಾರೆ. ಎಚ್.ಡಿ.ಕೋಟೆಯಲ್ಲಿರುವ ತಮ್ಮ ಸಂಬಂಧಿಕರ ಸಹಾಯದಿಂದ ಈ ಕೃಷಿಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಇದಕ್ಕೆ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಆದರೂ ತಮ್ಮ ಜಮೀನಿನಲ್ಲಿ ಪ್ರಾಯೋಗಿಕವಾಗಿ ಬೆಳೆಯಬೇಕು ಎಂಬುದು ಇವರ ಕುತೂಹಲ.

‘ಸಿರಿಧಾನ್ಯಕ್ಕೆ ಸ್ಥಳೀಯವಾಗಿ ಯಾವುದೇ ಮಾರುಕಟ್ಟೆ ವ್ಯವಸ್ಥೆಯಿಲ್ಲ. ದಲ್ಲಾಳಿ ಮೂಲಕ ಕೇರಳಕ್ಕೆ ಕಳುಹಿಸಬೇಕು. ಪ್ರಾರಂಭದಲ್ಲಿ ಕ್ವಿಂಟಲ್‌ಗೆ ₹35 ಸಾವಿರ ಇತ್ತು ಈಗ ₹ 8,000 ₹ 10 ಸಾವಿರ ಇದೆ. ಆದರೂ, ಇದನ್ನು ಒಮ್ಮೆಯಾದರೂ ಬೆಳೆಯಲೇಬೇಕು ಎಂಬ ಕುತೂಹಲ ನನ್ನದು’ ಎಂದು ಹೇಳುತ್ತಾರೆ ಜಗದೀಶ್‌.

‘ಗುಜರಾತ್‌ನ ಆಡ್‌ಸಾಪ್‌ ಸಂಸ್ಥೆ ತಯಾರಿಸುವ ಸಾವಯವ ಗೊಬ್ಬರವನ್ನು ಬಳಸಿ ಇದನ್ನು ಬೆಳೆದಿದ್ದೇನೆ. ಒಂದು ಎಕರೆಯಲ್ಲಿ ನಾಲ್ಕರಿಂದ ಐದು ಕ್ವಿಂಟಲ್‌ವರೆಗೂ ಇದನ್ನು ಬೆಳೆಯಬಹುದು. ಆದರೆ ಬಾಳೆಯೊಂದಿಗೆ ಮಿಶ್ರ ಕೃಷಿ ಮಾಡಿರುವುರಿಂದ ಮೂರು ಕ್ವಿಂಟಲ್ ನಿರೀಕ್ಷೆಯಲ್ಲಿದ್ದೇನೆ. ಹನಿ ಅಥವಾ ತುಂತುರು ನೀರಾವರಿ, ಬಳಸಿ ಇದನ್ನು ಬೇಸಿಗೆಯಲ್ಲಿ ಬೆಳೆಯಲು ಸೂಕ್ತವಾದ ಬೆಳೆ. ಬಿತ್ತನೆ ಸಂದರ್ಭದಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸುವುದರ ಜೊತೆಗೆ ಕಾಳುಗಳು ಸಣ್ಣವಾಗಿರುವುದರಿಂದ ಮರಳಿನ ಜೊತೆ ಬೆರೆಸಿ ಬಿತ್ತನೆ ಮಾಡಿದರೆ ಒಳ್ಳೆಯದು’ ಎಂದು ಸಲಹೆ ನೀಡುತ್ತಾರೆ ಅವರು.

ಯಾವ ಜಮೀನಿನಲ್ಲಿ ಬೇಕಾದರೂ ಇದನ್ನು ಬೆಳೆಯಬಹುದಾಗಿದೆ. ವನ್ಯಪ್ರಾಣಿಗಳು ಇದನ್ನು ತಿನ್ನದಿರುವುದರಿಂದ ಅವುಗಳ ದಾಳಿಯ ಭಯವೂ ಇಲ್ಲ. ಇದು ಮಧುಮೇಹಕ್ಕೆ ರಾಮಬಾಣವಾಗಿರುವುದರಿಂದ ಎಚ್.ಡಿ.ಕೋಟೆಯಲ್ಲಿ ಈ ಬಾರಿ 25 ಸಾವಿರ ಎಕರೆಯಲ್ಲಿ ಬೆಳೆಯಲಾಗಿದೆ. ಪ್ರತಿ ವರ್ಷ ಒಂದೇ ಬೆಳೆಯನ್ನು ಬೆಳೆದು ಭೂಮಿ ಫಲವತ್ತತೆ ಹಾಳು ಮಾಡುವ ಬದಲು ಈ ರೀತಿಯ ಬೆಳೆಗಳನ್ನು ಬೆಳೆಯುವುದರಿಂದ ಭೂಮಿಯ ಫಲವತ್ತತೆ ಉಳಿಸುವ ಜೊತೆಗೆ ಹೆಚ್ಚಿನ ಆದಾಯವನ್ನು ಗಳಿಸಬಹುದು’ ಎಂದು ಜಗದೀಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT