ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಶೈಕ್ಷಣಿಕ ಪ್ರಗತಿ ಕುಂಠಿತದ ಆತಂಕ

ಪ್ರಾಥಮಿಕ ಶಾಲೆಗಳಲ್ಲಿ 127, ಪ್ರೌಢಶಾಲೆಗಳಲ್ಲಿ 40 ಶಿಕ್ಷಕರಿಲ್ಲ
Last Updated 3 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಹನೂರು: ಅಭಿವೃದ್ಧಿಯಲ್ಲಿ ‘ಹಿಂದುಳಿದ ತಾಲ್ಲೂಕು’ ಎಂಬ ಹಣೆಪಟ್ಟಿ ಹೊತ್ತಿದ್ದರೂ, ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿರುವ ಹನೂರು ಶೈಕ್ಷಣಿಕ ವಲಯದ ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆ ಎದುರಿಸುತ್ತಿವೆ. ಇದು ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಆತಂಕ ನಿರ್ಮಾಣವಾಗಿದೆ.

ಶೈಕ್ಷಣಿಕ ವಲಯದಲ್ಲಿ18 ಪ್ರೌಢಶಾಲೆ, 80 ಕಿರಿಯ ಪ್ರಾಥಮಿಕ ಶಾಲೆ, 77 ಹಿರಿಯ ಪ್ರಾಥಮಿಕ ಶಾಲೆ ಹಾಗೂ 15 ಉನ್ನತೀಕರಿಸಿದ ಶಾಲೆಗಳಿವೆ. ಪ್ರಾಥಮಿಕ ಶಾಲೆಗಳಿಗೆ 601 ಶಿಕ್ಷಕರ ಹುದ್ದೆ ಮಂಜೂರಾಗಿದೆ. ಈ ಪೈಕಿ 127 ಶಿಕ್ಷಕರ ಹುದ್ದೆ ಇನ್ನೂ ಖಾಲಿ ಇದೆ.ಪ್ರೌಢಶಾಲೆಗಳಿಗೆ 161 ಹುದ್ದೆಗಳು ಮಂಜೂರಾಗಿದ್ದು, 121 ಮಂದಿ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಪ್ರಾಥಮಿಕ, ಪ್ರೌಢಶಾಲೆಗಳು ಸೇರಿ ಒಟ್ಟು 167 ಶಿಕ್ಷಕರ ಕೊರತೆ ಇದೆ.

13 ಕ್ಲಸ್ಟರ್‌ಗಳನ್ನು ಹೊಂದಿರುವ ಹನೂರು ಶೈಕ್ಷಣಿಕ ವಲಯ ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಇಲ್ಲಿನ ಬಹುತೇಕ ಶಾಲೆಗಳು ಅರಣ್ಯದಂಚಿನ ಹಾಗೂ ಗಡಿಭಾಗದಲ್ಲಿರುವುದರಿಂದ ಶಿಕ್ಷಕರು ಶಾಲೆಗೆ ತಲುಪುವುದೇ ದುಸ್ತರವಾಗಿದೆ. ಕೆಲ ಶಿಕ್ಷಕರು ವಾರಗಟ್ಟಲೇ ವಾಸ್ತವ್ಯ ಹೂಡಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಗೋಪಿನಾಥಂ, ಹತ್ತಖಾನೆ, ಪಾಲಾರ್, ಮಿಣ್ಯಂ, ಹೂಗ್ಯಂ, ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಪಡಸಲನತ್ತ, ತೊಳಸಿಕೊರೆ, ದೊಡ್ಡಾಣೆ, ಚಂಗಡಿ ಮುಂತಾದ ಕಡೆ ಶಾಲೆಗಳು ಅರಣ್ಯದೊಳಗಿರುವುದರಿಂದ ಇಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಶಾಲೆಗಳಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೋಗುತ್ತಾರೆ, ಬರುವುದಿಲ್ಲ

ಪಾಠ ಮಾಡಿದ ಬಳಿಕ ಶಾಲೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಒಂದಡೆಯಾದರೆ, ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ಶಿಕ್ಷಕರು ಬೇರೆಡೆ ವರ್ಗಾವಣೆ ಬಯಸುತ್ತಾರೆ. ವರ್ಗವಾಗಿ ಹೋಗಲು ಶಿಕ್ಷಕರು ತುದಿಗಾಲಲ್ಲಿ ನಿಂತಿರುತ್ತಾರೆ. ಹೊಸ ಶಿಕ್ಷಕರು ಬರಲು ಹಿಂದೇಟು ಹಾಕುತ್ತಾರೆ.

‘ಕಳೆದ ಕೌನ್ಸೆಲಿಂಗ್‌ ಸಮಯದಲ್ಲಿ ಶೈಕ್ಷಣಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ 28 ಶಿಕ್ಷಕರು ಕೊಳ್ಳೇಗಾಲ ಹಾಗೂ ಇನ್ನಿತರ ವಲಯಗಳಿಗೆ ವರ್ಗಾವಣೆಗೊಂಡರು. ಆದರೆ ಇಲ್ಲಿಗೆ ಮಾತ್ರ ಯಾರು ಬರಲಿಲ್ಲ. ಶಿಕ್ಷಕರ ಕೊರತೆಯಿಂದ ಕಾಡುತ್ತಿರುವ ವಲಯದಲ್ಲಿ ಇಷ್ಟು ಶಿಕ್ಷಕರು ವರ್ಗಾವಣೆಯಾಗಿ ಒಬ್ಬರೂ ಬರದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ (ಬಿಇಒ) ಟಿ.ಆರ್.ಸ್ವಾಮಿ ಹೇಳಿದರು.

ಅತಿಥಿ ಶಿಕ್ಷಕರು

ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಶಿಕ್ಷಕರ ಕೊರತೆಯನ್ನು ನೀಗಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಿದೆ. ಪ್ರಾಥಮಿಕ ಶಾಲೆಗಳಲ್ಲಿ 102 ಹಾಗೂ ಪ್ರೌಢಶಾಲೆಗಳಲ್ಲಿ 16 ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಹಾಗಿದ್ದರೂ ಇನ್ನೂ 49 ಶಿಕ್ಷಕರ ಹುದ್ದೆ ಖಾಲಿ ಇದೆ.

ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ಪರಿಣಾಮ?

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿಸತತ ನಾಲ್ಕು ವರ್ಷಗಳಿಂದ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವ ಹನೂರು ವಲಯದ ಶೈಕ್ಷಣಿಕ ಸಾಧನೆಯ ಮೇಲೆ ಶಿಕ್ಷಕರ ಕೊರತೆ ಪರಿಣಾಮ ಬೀರುವ ಆತಂಕ ಪೋಷಕರು ಹಾಗೂ ಜನರಲ್ಲಿದೆ.

18 ಪ್ರೌಢಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕ 2, ಇಂಗ್ಲಿಷ್‌ ಭಾಷೆ 5, ಹಿಂದಿ 1, ಗಣಿತ ವಿಷಯದ ಇಬ್ಬರು ಶಿಕ್ಷಕರ ಕೊರತೆಯಿದೆ. ಉಳಿದಂತೆ 7 ದೈಹಿಕ ಶಿಕ್ಷಣ ಶಿಕ್ಷಕ, 8 ತೋಟಗಾರಿಕೆ, 1 ಸಂಗೀತ ವಿಷಯದ ಶಿಕ್ಷಕರಿಲ್ಲ.9 ಶಾಲೆಗಲ್ಲಿ ಮುಖ್ಯಶಿಕ್ಷಕರೇ ಇಲ್ಲ.

ಇದನ್ನು ಅಲ್ಲಗಳೆದಿರುವ ಬಿಇಒ ಸ್ವಾಮಿ ಅವರು, ‘ಅತಿಥಿ ಶಿಕ್ಷಕರ ಮೂಲಕ ಕೊಂಚ ಮಟ್ಟಿಗೆ ಶಿಕ್ಷಕರ ಕೊರತೆ ನೀಗಿಸಲಾಗಿದೆ. ಪ್ರೌಢಶಾಲೆಗೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ ಎಲ್ಲಾ ಭಾಷೆ ಹಾಗೂ ವಿಷಯದ ಅತಿಥಿ ಶಿಕ್ಷಕರನ್ನು ನಿಯೋಜಿಸಿಕೊಳ್ಳಲಾಗಿದೆ. ಹಾಗಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT