ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರದನಹಳ್ಳಿ: ಪ್ರಚಾರ ಭರಾಟೆ ಜೋರು

ಉಪಚುನಾವಣೆ: ಕಾಂಗ್ರೆಸ್‌, ಬಿಜೆಪಿಗೆ ಪ್ರತಿಷ್ಠೆ, ಗೆಲ್ಲಲು ಶತಾಯ ಗತಾಯ ಯತ್ನ
Last Updated 8 ನವೆಂಬರ್ 2019, 17:45 IST
ಅಕ್ಷರ ಗಾತ್ರ

ಚಾಮರಾಜನಗರ: ಇದೇ 12ರಂದು ನಡೆಯಲಿರುವ ಜಿಲ್ಲಾ ಪಂಚಾಯಿತಿಯ ಹರದನಹಳ್ಳಿ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಭರಾಟೆ ಬಿರುಸುಗೊಂಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಪೈಪೋಟಿಗೆ ಬಿದ್ದವರಂತೆ ಬಿರುಸಿನ ಪ್ರಚಾರ ನಡೆಸುತ್ತಿವೆ.

2016ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು, ಬಿಜೆಪಿ ಸೇರಿರುವ ಎಂ.ರಾಮಚಂದ್ರ ಅವರು ರಾಜೀನಾಮೆ ನೀಡಿರುವುದರಿಂದ ಉಪ ಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ಶ್ರೀನಿವಾಸ್ ಅವರು ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ರಮೇಶ್‌ ಅವರು ಕಣಕ್ಕಿಳಿದಿದ್ದಾರೆ. ಇಬ್ಬರ ನಡುವೆ ಸಮ ಬಲದ ಪೈಪೋಟಿ ಏರ್ಪಟ್ಟಿದೆ.

ಘಟಾನುಘಟಿಗಳ ಪ್ರಚಾರ: ಎರಡೂ ಪಕ್ಷಗಳಿಗೂ ಪ್ರತಿಷ್ಠೆಯಾಗಿರುವ ಈ ಚುನಾವಣೆಯನ್ನು ಮುಖಂಡರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಶತಾಯ ಗತಾಯವಾಗಿ ಗೆಲ್ಲಲೇ ಬೇಕು ಎಂದು ಪಣತೊಟ್ಟಿರುವ ಕಮಲ ಪಾಳಯ ಹಾಗೂ ಕೈ ಪಾಳಯ ಪ್ರಭಾವಿ ರಾಜಕೀಯ ಮುಖಂಡರ ಮೂಲಕ ಪ್ರಚಾರ ಮಾಡುತ್ತಿವೆ.

ಬಿಜೆಪಿಯು ಸ್ಥಳೀಯ ಮುಖಂಡರು ಮಾತ್ರವಲ್ಲದೇ, ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಅವರನ್ನು ಕರೆಸಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದೆ. ಕಾಂಗ್ರೆಸ್‌ನಿಂದ ಹಿರಿಯ ನಾಯಕ ಆರ್‌.ಧ್ರುವನಾರಾಯಣ ಅವರು ಶನಿವಾರ ಮತ್ತು ಭಾನುವಾರ ಪ್ರಚಾರ ನಡೆಸಲಿದ್ದಾರೆ.ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಂತು ಕ್ಷೇತ್ರ ವ್ಯಾಪ್ತಿಯಲ್ಲಿ ಎಡೆಬಿಡದೆ ಸುತ್ತಾಡುತ್ತಾ ಮತಯಾಚನೆ ಮಾಡುತ್ತಿದೆ.

ಕಾಂಗ್ರೆಸ್‌ ಕೋಟೆ: ವಾಸ್ತವದಲ್ಲಿ ಜಿಲ್ಲಾ ಪಂಚಾಯಿತಿಯ ಹರದನಹಳ್ಳಿ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. 2011ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೈ ಪಕ್ಷದ ಕಾವೇರಿ ಶಿವಕುಮಾರ್‌ ಅವರು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. 2016ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಂ.ರಾಮಚಂದ್ರ ಅವರು ಗೆದ್ದಿದ್ದರು.

ಬದಲಾದ ರಾಜಕೀಯ ಸನ್ನಿವೇಶನದಲ್ಲಿ ಎಂ.ರಾಮಚಂದ್ರ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದ ಮೂಲೆ ಮೂಲೆಯನ್ನೂ ಅರಿತಿರುವ ಅವರು ಚುನಾವಣೆಯಲ್ಲಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಬಿಜೆಪಿಯ ಸ್ಥಳೀಯ ನಾಯಕತ್ವ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿದಂತೆ ಕಾಣುತ್ತಿದೆ. ಪಕ್ಷದ ಅಭ್ಯರ್ಥಿ ಪರ ಅವರು ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಕಾಂಗ್ರೆಸ್‌ಗೆ ಬಿದ್ದಿತ್ತು ಕಡಿಮೆ ಮತ‌

ಕಳೆದ ಲೋಕಸಭಾ ಚುನಾವಣೆಯಲ್ಲಿ ಹರದನಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಹೆಚ್ಚು ಮತಗಳಿಸಿರುವುದು ಕಾಂಗ್ರೆಸ್‌ ಮುಖಂಡರನ್ನು ಕೊಂಚ ವಿಚಲಿತರನ್ನಾಗಿ ಮಾಡಿದೆ. ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್‌ ಅವರು ಆರ್‌.ದ್ರುವನಾರಾಯಣ ಅವರಿಗಿಂತ 2,215 ಹೆಚ್ಚು ಮತಗಳನ್ನು ಗಳಿಸಿದ್ದರು.

ಹೇಗಾದರೂ ಮಾಡಿ ಮತ್ತೆ ಮುನ್ನಡೆ ಕಾಯ್ದುಕೊಳ್ಳಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಕ್ಷೇತ್ರದಲ್ಲಿ ಇನ್ನಿಲ್ಲದಂತೆ ಪ್ರಚಾರ ನಡೆಸುತ್ತಿದ್ದಾರೆ.

ಲೋಕಸಭಾ ಚುನಾವಣೆಗೂ ಈ ಉಪಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಸ್ಥಳೀಯ ವಿಷಯಗಳ ಮೇಲೆ ಈ ಚುನಾವಣೆ ನಡೆಯುತ್ತದೆ. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ಆಗಿದ್ದಂತೆ ಈ ಬಾರಿಯೂ ಹಿನ್ನಡೆಯಾಗುವುದು ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT