ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಸುಳ್ವಾಡಿ ಸಂತ್ರಸ್ತರ ಆರೋಗ್ಯ ತಪಾಸಣೆ

ಮಾರ್ಟಳ್ಳಿ: ಸಿಮ್ಸ್‌ನಿಂದ ತಜ್ಞ ವೈದ್ಯರ ತಂಡ ಭೇಟಿ; 65 ಮಂದಿಗೆ ಪರೀಕ್ಷೆ
Last Updated 13 ಮಾರ್ಚ್ 2022, 16:03 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ದುರಂತದ ಸಂತ್ರಸ್ತರ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ಮಾರ್ಟಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ತಜ್ಞ ವೈದ್ಯರ ತಂಡ ಹಾಗೂ ಸ್ಥಳೀಯ ಆರೋಗ್ಯ ಸಿಬ್ಬಂದಿ ದುರಂತದಲ್ಲಿ ಬದುಕುಳಿದಪುರುಷ, ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಿದರು.

ಕಣ್ಣು, ಮೂಳೆ, ಇಸಿಜಿ, ರಕ್ತದೊತ್ತಡ, ಅಪೌಷ್ಟಿಕ, ಮಧುಮೇಹ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಲಾಯಿತು. ಮಕ್ಕಳ ಆರೋಗ್ಯ ತಪಾಸಣೆಯನ್ನೂ ನಡೆಸಲಾಯಿತು.

ವಿಷ ಪ್ರಸಾದ ದುರಂತದ ಸಂತ್ರಸ್ತರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ಅವರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಣಿ ಅವರು ಸಂತ್ರಸ್ತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಆರೋಗ್ಯ ತಪಾಸಣೆಗೆ ಕ್ರಮ ವಹಿಸುವಂತೆ ಸೋಮಣ್ಣ ಅವರು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರಿಗೆ ಸೂಚಿಸಿದ್ದರು. ಜಿಲ್ಲಾಧಿಕಾರಿ ಅವರು ಆರೋಗ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತಕ್ಕೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವಂತೆ ಸೂಚಿಸಿದ್ದರು.

ಅದರಂತೆ ಭಾನುವಾರ ಸಿಮ್ಸ್‌ನ ತಜ್ಞ ವೈದ್ಯರ ತಂಡ ಹಾಗೂ ಸ್ಥಳೀಯ ಆರೋಗ್ಯ ಸಿಬ್ಬಂದಿ ಬೆಳಿಗ್ಗೆ 10ರಿಂದ 3 ಗಂಟೆಯವರೆಗೂ ವಿಶೇಷ ತಪಾಸಣಾ ಶಿಬಿರ ನಡೆಸಿದರು.ಸುಳ್ವಾಡಿ, ಬಿದರಳ್ಳಿ, ಎಂ.ಜಿ.ದೊಡ್ಡಿ ಸೇರಿದಂತೆ ವಿವಿಧ ಊರುಗಳ ನಿವಾಸಿಗಳು ಹಾಜರಾಗಿದ್ದರು.

ಕೀಲು ಮತ್ತು ಮೂಳೆ ತಜ್ಞ ಡಾ.ಮಹದೇವ ಪ್ರಸಾದ್‌, ನೇತ್ರ ತಜ್ಞ ಡಾ.ಸೂರಜ್‌, ಮಕ್ಕಳ ತಜ್ಞೆ ಡಾ.ಸೌಮ್ಯಶ್ರೀ, ಪಿಸಿಷಿಯನ್‌ ಡಾ.ಅಭಿಲಾಷ್‌, ಶುಶ್ರೂಷಕಾಧಿಕಾರಿಗಳಾದ ಕುಸುಮಾ, ಶಿವಕುಮಾರ್‌ ಸೇರಿದಂತೆ ಇತರ ಆರೋಗ್ಯ ಸಿಬ್ಬಂದಿ ಇದ್ದರು.

‘ಜಿಲ್ಲಾಧಿಕಾರಿಗೆ ವರದಿ’

‘100 ಮಂದಿ ಸಂತ್ರಸ್ತರಲ್ಲಿ 65 ಮಂದಿ ಬಂದಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಇದ್ದರು. ಇಸಿಜಿ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಹಿಮೋಗ್ಲೋಬಿನ್ ಮಟ್ಟ, ಅಪೌಷ್ಟಿಕತೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿದ್ದೇವೆ. ಅಪೌಷ್ಟಿಕತೆಯಂತಹ ಸಮಸ್ಯೆ ಕೆಲವರಲ್ಲಿ ಕಂಡು ಬಂದಿದೆ. ವೈದ್ಯಕೀಯ ಸಲಹೆಯನ್ನೂ ನೀಡಲಾಗಿದೆ. ತಪಾಸಣೆ ವೇಳೆ ಕಂಡು ಬಂದ ವಿವರಗಳನ್ನು ಜಿಲ್ಲಾಧಿಕಾರಿ ಅವರಿಗೆ ವರದಿ ರೂಪ‍ದಲ್ಲಿ ನೀಡಲಾಗುವುದು’ ಎಂದು ಜಿಲ್ಲಾಸ್ಪತ್ರೆಯ ಅರಿವಳಿಕೆ ತಜ್ಞ ಡಾ.ಎಂ.ಮಹೇಶ್‌ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT