ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮುಂದುವರಿದ ಹೊರ ಗುತ್ತಿಗೆ ನೌಕರರ ಮುಷ್ಕರ

ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಮೇಲೆ ಪರಿಣಾಮ, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ– ಡಿಎಚ್‌ಒ
Last Updated 26 ಸೆಪ್ಟೆಂಬರ್ 2020, 13:14 IST
ಅಕ್ಷರ ಗಾತ್ರ

ಚಾಮರಾಜನಗರ: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಕೆಲಸಕ್ಕೆ ಗೈರಾಗಿ ನಡೆಸುತ್ತಿರುವ ಮುಷ್ಕರ ಮೂರನೇ ದಿನವಾದ ಶನಿವಾರವೂ ಮುಂದುವರಿಯಿತು.

ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಇರುವುದರಿಂದ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಯ ಮೇಲೆ ಪರಿಣಾಮ ಬೀರಿದೆ. ಸ್ವಲ್ಪ ಪ್ರಮಾಣದಲ್ಲಿ ತೊಂದರೆಯಾಗಿರುವುದನ್ನು ಒಪ್ಪಿಕೊಂಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹೊರಗುತ್ತಿಗೆ ನೌಕರರು ರಾಜ್ಯದಾದ್ಯಂತ, ಸೆ.24ರಿಂದ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ)ಅಡಿಯಲ್ಲಿ ಆರೋಗ್ಯ ಇಲಾಖೆಯ ವಿವಿಧ 25 ಹುದ್ದೆಗಳಿಗೆ ಹೊರ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸದ್ಯ 430 ಮಂದಿ ಇದ್ದಾರೆ. ವೈದ್ಯರು, ನರ್ಸ್‌ಗಳು, ಪ್ರಯೋಗಾಲಯ ತಂತ್ರಜ್ಞರು, ಫಾರ್ಮಾಸಿಸ್ಟ್, ಡೇಟಾ ಎಂಟ್ರಿ ಆಪರೇಟರ್‌ ಸೇರಿದಂತೆ ಹಲವರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಕಾಯಂ ನೌಕರರಿಗೆ ಸರಿ ಸಮನಾಗಿ ಕೆಲಸ ಮಾಡುತ್ತೇವೆ. ಆದರೆ ನಮಗೆ ಅವರಷ್ಟು ವೇತನ ಸಿಗುವುದಿಲ್ಲ. ಸೇವಾ ಭದ್ರತೆಯೂ ಇಲ್ಲ. ಹೇಳದೆ ಕೇಳದೆ ಕೆಲಸದಿಂದ ತೆಗೆದುಹಾಕುತ್ತಾರೆ. ಇದರ ಜೊತೆಗೆ ಗುತ್ತಿಗೆದಾರರು ಕೂಡ ನಮಗೆ ತೊಂದರೆ ಕೊಡುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇವೆ. ಹಾಗಿದ್ದರೂ ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸಿಲ್ಲ’ ಎಂದು ಹೊರಗುತ್ತಿಗೆ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂಬ ತೀರ್ಮಾನವನ್ನು ರಾಜ್ಯ ಸಂಘಟನೆಯವರು ತೆಗೆದುಕೊಂಡಿದ್ದಾರೆ. ಅದಕ್ಕೆ ನಾವೂ ಬದ್ಧರಾಗಿದ್ದೇವೆ. ನಮ್ಮ ಬೇಡಿಕೆಗಳನ್ನು ಒಪ್ಪುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದು ಅವರು ಹೇಳಿದರು.

ಸಿಬ್ಬಂದಿ ಕೊರತೆ: ಗುತ್ತಿಗೆ ನೌಕರರು ಕೆಲಸಕ್ಕೆ ಬಾರದಿರುವುದರಿಂದ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದ್ದು, ಜನರಿಗೆ ತೊಂದರೆಯಾಗಿದೆ. ಗುಂಡ್ಲುಪೇಟೆ ಸೇರಿದಂತೆ ಕೆಲವು ಕಡೆಗಳಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಸಮಸ್ಯೆಯಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಆರ್.ರವಿ ಅವರು, ‘ಆರೋಗ್ಯ ಸೇವೆಯ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ಆದರೆ, ಪರ್ಯಾಯ ವ್ಯವಸ್ಥೆ ಮಾಡಿ ಸೇವೆ ಒದಗಿಸಲಾಗುತ್ತಿದೆ. ಯಾವ ಆಸ್ಪತ್ರೆಯಲ್ಲೂ ಹೊರ ರೋಗಿ ವಿಭಾಗಗಳನ್ನು ಬಂದ್‌ ಮಾಡಿಲ್ಲ. ಡಾಟಾ ಎಂಟ್ರಿ ಆಪರೇಟರ್‌ ಹಾಗೂ ಇತರ ಕೆಲವು ಕೆಲಸಗಳಿಗೆ ಜಿಲ್ಲಾಡಳಿತ ಕಚೇರಿ ಸಿಬ್ಬಂದಿಯ ನೆರವು ಪಡೆಯಲಾಗಿದೆ’ ಎಂದು ಹೇಳಿದರು.

‘ಹೊರಗುತ್ತಿಗೆ ನೌಕರರು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT