ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಕೊರೊನಾ ಸೋಂಕು ತಡೆಗೆ ಜನಪದರ ಮದ್ದು

ಕಿರುನಲ್ಲಿ, ಕೊನ್ನಾರಿ ಗೆಡ್ಡೆ, ಲಾವಂಚ ಸಸ್ಯಗಳಿಗೆ ಹೆಚ್ಚಿದ ಹುಡುಕಾಟ
Last Updated 19 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಯಳಂದೂರು: ಮುಂಗಾರು ಮಳೆಗೆ ತಂಪಾದ ನೆಲದಲ್ಲಿ ಔಷಧೀಯ ಸಸ್ಯಗಳು ಚಿಗುರೊಡೆಯುತ್ತವೆ. ಈವರೆಗೂ ಇವುಗಳ ಬಗ್ಗೆ ಹೆಚ್ಚು ಗಮನ ಹರಿಸದ ಜನ ಕೋವಿಡ್‌ ಕಾಲದಲ್ಲಿ ಈ ಸಸ್ಯಗಳ ಔಷಧೀಯ ಗುಣಗಳ ಬಗ್ಗೆ ಅರಿಯುತ್ತಿದ್ದಾರೆ. ಅವುಗಳ ಮಹತ್ವ ಹೆಚ್ಚೆಚ್ಚು ಮುನ್ನೆಲೆಗೆ ಬರುತ್ತಿದೆ.

ದಿನನಿತ್ಯ ಸುರಿಯುವ ತುಂತುರು ಮಳೆಗೆ ನೆಲನೆಲ್ಲಿ (ಬಾಹುಪತ್ರ), ಕೊನ್ನಾರಿ ಗೆಡ್ಡೆ, ಭೇದಿ ಸೊಪ್ಪು, ಅಶ್ವಗಂಧ ಬಳ್ಳಿಗಳು ಸೊಂಪಾಗಿ ಬೆಳೆದಿವೆ.

‘ಸುವರ್ಣಾವತಿ ಹೊಳೆ, ಹೊಲಗಳಲ್ಲಿ ಬೆಳೆದಿರುವ ಈ ಗಿಡಮೂಲಿಕೆಗಳನ್ನು ಹಲವರು ಹುಡುಕಿಕೊಂಡು ಬರುವುದಿದೆ. ಮನೆ, ಗದ್ದೆಯ ಸುತ್ತಮುತ್ತವೇ ನೆಲನೆಲ್ಲಿ ಮತ್ತು ಕೊನ್ನಾರಿ ಗೆಡ್ಡೆಗಳು ಹೇರಳವಾಗಿ ಬೆಳೆದಿವೆ. ವಯಸ್ಸಾದ ಮಂದಿ ಇವುಗಳನ್ನು ಕಿತ್ತು ಕಷಾಯ ಮತ್ತುಮನೆಮದ್ದು ಮಾಡಿಕೊಂಡು ಸೇವಿಸುತ್ತಾರೆ. ಇತ್ತೀಚೆಗೆ ಇವುಗಳನ್ನು ಹುಡುಕಿ ಬರುವವರಸಂಖ್ಯೆಯಲ್ಲಿ ಏರಿಕೆ ಆಗಿದೆ’ ಎಂದು ಶಿಕ್ಷಕಿ ಸಿಂಗನಪುರ ಅಸಿಯಮ್ಮ ಅವರು ಹೇಳಿದರು.

‘ಅಮೃತಬಳ್ಳಿ ಮನೆಗೆ ಅಲಂಕಾರವಾಗಿ ಹಬ್ಬಿಸಬಹುದು. ಇದನ್ನು ಬಳಸಿ ಪಾನಕ, ಕಷಾಯ ಮಾಡಬಹುದು. ನೆಲನೆಲ್ಲಿಯಿಂದ ತಂಬುಳಿ, ಚಟ್ನಿಯನ್ನೂ ಮಾಡುತ್ತಾರೆ.ಮಳೆಗಾಲದಲ್ಲಿ ಬೇರು ಸಮೇತ ಕಿತ್ತು, ನೆರಳಿನಲ್ಲಿ ಒಣಗಿಸಿಸಂಗ್ರಹಿಸಬಹುದು. ಇದರ ವಿಷ ಹರ ಗುಣಗಳು ಆರೋ‌ಗ್ಯಕ್ಕೆ ಉತ್ತಮ’ ಎಂದು ಸಸ್ಯತಜ್ಞ ರಾಮಾಚಾರಿ ಅವರು ಹೇಳುತ್ತಾರೆ.

ಆಯುರ್ವೇದದಲ್ಲೂ ಅಮೃತಬಳ್ಳಿ, ನೆಲನೆಲ್ಲಿಗೆ ಮಹತ್ವವಿದೆ.

‘ಸಂಜೀವಿನಿಗೆ ಸಮನಾದ ಸಸ್ಯ ಅಮೃತಬಳ್ಳಿ. ಖಾರ, ಒಗರು, ರುಚಿಗಳಿಂದ ಕೂಡಿದೆ. ಜ್ವರ, ವಾತ, ಪಿತ್ತ, ಕಾಮಾಲೆ, ಕೆಮ್ಮು ನಿವಾರಣೆಯಲ್ಲಿ ಬಳಸಲಾಗುತ್ತದೆ. ಇವು ಸ್ವಲ್ಪನೀರು ಇದ್ದರೂ ಹಬ್ಬುತ್ತದೆ. ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ತುಳಸಿ ಅಮೂಲ್ಯಸಸ್ಯ. ಎಲೆಗಳ ಕಷಾಯ ಚೇತೋಹಾರಿ ಎನ್ನುತ್ತಾರೆ’ ಆಯುರ್ವೇದ ತಜ್ಞರು.

101 ರೋಗ ದೂರ:‘ನೂರೊಂದು ಸೊಪ್ಪು ತಿಂದರೆ ನೂರೊಂದು ರೋಗ ಗುಣಪಡಿಸಬಹುದು’ ಎಂಬುದು ಬುಡಕಟ್ಟು ಜನರನಾಣ್ಣುಡಿ. ಬಹುತೇಕ ಗಿರಿಜನರು ಜೇನು ಮತ್ತು ಮೂಲಿಕೆ ಸಸ್ಯಗಳಿಂದಲೇ ಮಳೆಗಾಲದ ಶೀತ,ಜ್ವರ, ಕೆಮ್ಮು ನಿವಾರಿಸಿಕೊಳ್ಳುತ್ತಾರೆ.

‘ಕುಂಬಳದ ಕುಡಿಯ ರಸ, ಶುಂಠಿ, ಒಂದೆಲಗ,ಜೀರಿಗೆ ಸೇರಿಸಿದ ಬಿಸಿನೀರು ಸೇವನೆ ಇಲ್ಲಿನ ಜನರ ಜೀವನಶೈಲಿಯ ಭಾಗವಾಗಿದೆ. ಮಾತ್ರೆಮತ್ತು ಚುಚ್ಚುಮದ್ದು ಪಡೆಯುವವರು ವಿರಳ. ಹೀಗಾಗಿ, ಅಲ್ಪ ಮಳೆ ಸುರಿದರೂ ಕೆರೆ,ಕಟ್ಟೆಗಳ ಬಳಿ ಬೆಳೆಯುವ ಹತ್ತಾರು ರೀತಿಯ ಸೊಪ್ಪುಗಳನ್ನು ಸಂಗ್ರಹಿಸಿ ಆಹಾರದಲ್ಲಿಬಳಸುತ್ತಾರೆ’ ಎಂದು ಮೂಲಿಕೆ ತಜ್ಞ ಬೊಮ್ಮಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗಿಡಮೂಲಿಕೆಗಳಿಗೆ ಮೊರೆ

ಕೋವಿಡ್‌–19 ಹಾವಳಿ ಹೆಚ್ಚಾಗುತ್ತಿದ್ದಂತೆ ಮನೆಮದ್ದು ಅರೆಯುವವರ ಸಂಖ್ಯೆಯಲ್ಲೂ ಏರಿಕೆ ಆಗಿದೆ. ವೈರಸ್ ಮತ್ತು ಬ್ಯಾಕ್ಟೀರಿಯಾ ನಿಯಂತ್ರಿಸುವ ದಿಸೆಯಲ್ಲಿ ನೆಲ್ಲಿಷರಬತ್ತು, ಬೇವಿನ ಸೊಪ್ಪು, ಅರಿಶಿನ, ಭದ್ರಮುಷ್ಟಿ, ಸೊಗದೆ ಬೇರು ಮತ್ತು ಲಾವಂಚಬೇರುಗಳ ಗಿಡಗಳನ್ನು ಸಂರಕ್ಷಿಸುವತ್ತಲೂ ಜನರು ಮುಂದಾಗಿದ್ದಾರೆ.

ದೇಹಕ್ಕೆಸಂಜೀವಿನಿಯಾದ ಇಂತಹ ಕೆಲವು ಬಳ್ಳಿಗಳು ಈಗ ಬಯಲು ಪ್ರದೇಶದಲ್ಲಿ ಸಮೃದ್ಧವಾಗಿಸಿಗುತ್ತಿವೆ. ಇನ್ನೂ ಕೆಲವು ಬೆಟ್ಟ ಗುಡ್ಡಗಳಲ್ಲಿ ಕಾಣುತ್ತಿವೆ. ಕೆಲವು ಸಸ್ಯಗಳು ಹಿತ್ತಲ ಗಿಡವಾಗಿಬದುಕುಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT