ಬುಧವಾರ, ನವೆಂಬರ್ 20, 2019
22 °C
ಚಾಮರಾಜೇಶ್ವರ ದೇವಸ್ಥಾನದ ಸುತ್ತಮುತ್ತಲ ರಸ್ತೆಗಳಲ್ಲಿ 74 ದೀಪಗಳ ಅಳವಡಿಕೆ, ₹1.90 ಕೋಟಿ ವೆಚ್ಚ

ದಸರಾ ವೇಳೆಗೆ ಬೆಳಗಲಿದೆ ಪಾರಂಪರಿಕ ದೀಪ

Published:
Updated:
Prajavani

ಚಾಮರಾಜನಗರ: ನಗರದ ಐತಿಹಾಸಿಕ ಚಾಮರಾಜೇಶ್ವರ ದೇವಾಸ್ಥಾನದ ಸುತ್ತಮುತ್ತ ಇರುವ ರಸ್ತೆಗಳಲ್ಲಿ ಪಾರಂಪರಿಕ ಶೈಲಿಯ ವಿದ್ಯುತ್‌ ದೀಪಗಳು ಬೆಳಗುವ ಸಮಯ ಸನ್ನಿಹಿತವಾಗಿದೆ. 

₹1.90 ಕೋಟಿ ವೆಚ್ಚದಲ್ಲಿ ನಗರಸಭೆ ಕೈಗೆತ್ತಿಕೊಂಡಿರುವ ಕಾಮಗಾರಿ ಈಗ ಬಿರುಸು ಪಡೆದಿದ್ದು, ಅಕ್ಟೋಬರ್‌ ಮೊದಲ ವಾರದಲ್ಲಿ ನಗರದಲ್ಲಿ ನಡೆಯಲಿರುವ ದಸರಾ ವೇಳೆಗೆ ಪಾರಂಪರಿಕ ದೀಪಗಳು ರಸ್ತೆಗಳನ್ನು ಬೆಳಗಲಿವೆ.

ಭುವನೇಶ್ವರಿ ವೃತ್ತದಿಂದ ದೇವಸ್ಥಾನದತ್ತ ತೆರಳುವ ತ್ಯಾಗರಾಜ ರಸ್ತೆ, ರಥದ ಬೀದಿ, ಅಗ್ರಹಾರ ಬೀದಿ ಸೇರಿದಂತೆ ದೇವಾಲಯದ ಸಮೀಪದ ರಸ್ತೆಗಳಲ್ಲಿ  ಪಾರಂಪರಿಕ ದೀಪಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. 

ವಿಳಂಬ: ನಗರಸಭೆಯು ಜನವರಿಯಲ್ಲೇ ಈ ಯೋಜನೆಯ ಕಾಮಗಾರಿ ಆರಂಭಿಸಿತ್ತು. ನೆಲದಡಿಯಲ್ಲಿ ವಿದ್ಯುತ್‌ ವೈರ್‌ಗಳನ್ನು ಹಾಕಿ, ಕೆಲವು ರಸ್ತೆಗಳಿಗೆ ಪಾರಂಪರಿಕ ಶೈಲಿಯ ಕಂಬಗಳನ್ನೂ ಅಳವಡಿಸಲಾಗಿತ್ತು. ಆದರೆ, ನಂತರ ಕಾಮಗಾರಿ ಮುಂದುವರಿದಿರಲಿಲ್ಲ. 

25ರ ಗಡುವು: ‘ಈ ಯೋಜನೆಯಲ್ಲಿ 74 ದೀಪಗಳನ್ನು ಅಳವಡಿಸಲಾಗುತ್ತಿದೆ. ಇದೇ 25ರ ಒಳಗಾಗಿ ಎಲ್ಲ ದೀಪಗಳನ್ನು ಅಳವಡಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದ್ದೇವೆ. ದಸರಾ ಹೊತ್ತಿಗೆ ಕೆಲಸ ಪೂರ್ಣಗೊಳ್ಳಲಿದೆ. ಸೆಸ್ಕ್‌ನಿಂದ ಅನುಮತಿ ಸಿಗುವಾಗ ತಡವಾಗಿದ್ದರಿಂದ ಯೋಜನೆ ಅನುಷ್ಠಾನ ವಿಳಂಬವಾಯಿತು’ ಎಂದು ನಗರಸಭೆ ಆಯುಕ್ತ ಎನ್‌.ರಾಜಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)