ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೂ ಮುನ್ನ ಮಕ್ಕಳ 'ಸ್ವೀಪ್' ಸದ್ದು!

ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ ಪಾಠ
Last Updated 25 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಯಳಂದೂರು: ಮುಂಬರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಲು ಸಿದ್ಧತೆ ನಡೆಸುತ್ತಿವೆ. ಅಷ್ಟರಲ್ಲಾಗಲೇ ಭಾರತೀಯ ಚುನಾವಣಾ ಆಯೋಗವು ಜನರಲ್ಲಿ ಮತದಾನದ ಬಗ್ಗೆ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಬೇಕಾದ ಅಗತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆರಂಭಿಸಿದೆ.

ಜಿಲ್ಲಾ ಮತಟ್ಟದ ಸ್ವೀಪ್‌ ಸಮಿತಿ, ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿವೆ. ಮತ ಜಾಗೃತಿಯ ಕಾರ್ಯದಲ್ಲಿ ಪ್ರೌಢಶಾಲೆಗಳ ಮಕ್ಕಳೂ ತೊಡಗಿಕೊಂಡಿದ್ದಾರೆ.

ಬಹುತೇಕ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಮತದಾನ ಜಾಗೃತಿ ಅಭಿಯಾನಕ್ಕೆ ವರ್ಣರಂಜಿತ ಕಾರ್ಯಕ್ರಮಗಳ ಮೂಲಕ ಚಾಲನೆ ನೀಡಿವೆ.

ತಾಲ್ಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ವಿಶಿಷ್ಟವಾಗಿ ಸ್ಪಂದಿಸಿದ್ದಾರೆ. ₹4,000 ಮತದಾರರನ್ನು ಹೊಂದಿರುವ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಗಸಾದ ಕಲಾತ್ಮಕ ಭಿತ್ತಿಚಿತ್ರ, ರಂಗೋಲಿ, ನಾಟಕ, ಕವಿಗೋಷ್ಠಿ, ಸಂವಾದ, ಕಲೆ, ಸಂಗೀತ, ಕ್ರೀಡೆ, ಜಾನಪದ ಗಾಯನ, ಪೌರಾಣಿಕ ಪಾತ್ರ ಹಾಗೂ ಸಾಮಾಜಿಕ ನಾಟಕಗಳ ಮೂಲಕ ವೋಟಿನ ಪಾವಿತ್ರ್ಯವನ್ನು ಜನರಿಗೆ ಮನದಟ್ಟು ಮಾಡುತ್ತಿದ್ದಾರೆ.

'ಪ್ರತಿ ಮತಗಟ್ಟೆಯಲ್ಲೂ ಮತದಾನದ ಪ್ರಮಾಣ ಶೇ 100 ಸಾಧಿಸುವುದು ಸವಾಲು. ಆದರೆ, ಕಲಿಯುತ್ತಿರುವ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಕುಟುಂಬದ ಎಲ್ಲರೂ ಮತದಾನ ಕೇಂದ್ರಕ್ಕೆ ಬರುವಂತೆ ಮಾಡಬಹುದು. ಮತದಾರರಿಗೆ ತಮ್ಮ ಹಕ್ಕು ಚಲಾವಣೆ ಬಗ್ಗೆ ಅರಿವು ಮೂಡಿಸಬಹುದು. ಮತದಾನದ ಸಮಯದಲ್ಲಿ ಭ್ರಷ್ಟ ಆಚರಣೆಗಳನ್ನು ತಡೆಗಟ್ಟಲು ಚುನಾವಣಾ ಯಂತ್ರಕ್ಕೆ ಸಹಾಯ ಮಾಡಬಹುದು. 18 ವರ್ಷ ತುಂಬಿದ ಎಲ್ಲರನ್ನೂ ಮತಪಟ್ಟಿಯಲ್ಲಿ ಸೇರಿಸುವಲ್ಲಿ ವಿದ್ಯಾರ್ಥಿಗಳು ಮಹತ್ವದ ಪಾತ್ರ ವಹಿಸಬಹುದು. ಮತದಾನಕ್ಕೂ 6 ತಿಂಗಳ ಮೊದಲು ಮಕ್ಕಳಿಗೆ ಮತದಾನದ ಬಗ್ಗೆ ಕ್ವಿಜ್, ಪ್ರಬಂಧ, ಭಾಷಣ, ಚಿತ್ರಕಲೆ, ವಿಚಾರ ಸಂಕಿರಣ, ಸಂವಾದ. ಕವಿಗೋಷ್ಠಿ ಏರ್ಪಡಿಸಲಾಗುತ್ತಿದೆ’ ಎಂದು ಮಾರ್ಗದರ್ಶಿ ಶಿಕ್ಷಕಿ ರತ್ನಮ್ಮ ಹೇಳಿದರು.

'ಸ್ವೀಪ್' ಎಂದರೇನು?: ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣಾ ಭಾಗವಹಿಸುವಿಕೆ ಎಂಬುದು ‘ಸ್ವೀಪ್’ನ ವಿಸ್ತೃತ ರೂಪ.

‘ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ. ಹೆಸರು ವಿಳಾಸ ತಿದ್ದುಪಡಿ, ಸ್ಥಳಾಂತರಗೊಂಡವರು ಮತ್ತು ಮರಣ ಹೊಂದಿದ ಕುಟುಂಬದ ಸದಸ್ಯರ ಹೆಸರು ತೆಗೆಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಹೆಸರು ಸೇರಿಸಲು ಆನ್ಲೈನ್, ಆಫ್ಲೈನ್ ಸೌಲಭ್ಯ, ಚುನಾವಣೆಗಳ ಸಂದರ್ಭ ಮತದಾರರ ಕರ್ತವ್ಯ, ಮತಯಂತ್ರ ಬಳಕೆ, ಮತ ಖಾತರಿ ಯಂತ್ರ, ಹಣ ಇತರೆ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುವ ಬಗ್ಗೆ ಸ್ವೀಪ್ ಅಡಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ನಾವೂ ಅದರ ಭಾಗವಾಗಿದ್ದೇವೆ’ ಎಂದು ವಿದ್ಯಾರ್ಥಿಗಳಾದ ಮಹೇಶ್, ಮಹೇಶ್ವರಿ ಮತ್ತು ನಮ್ರತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲ ನೀಡುತ್ತಿರುವ ಸ್ವೀಪ್‌ ಕಾರ್ಯಕ್ರಮ...

ಚುನಾವಣಾ ಆಯೋಗವು 2008ರಲ್ಲಿ ಬಿಹಾರದಲ್ಲಿ ಮೊದಲ ಬಾರಿಗೆ ಸ್ವೀಪ್ ಚಟುವಟಿಕೆಗಳನ್ನು ಆರಂಭಿಸಿತು. 2011ರಲ್ಲಿ ಎಲ್ಲ ರಾಜ್ಯಗಳಿಗೂ ವಿಸ್ತರಣೆ ಮಾಡಿತು. 2014ರಿಂದ ದೇಶದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಜಾಗೃತಿ ಚಟುವಟಿಕೆಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ.

ಸ್ತ್ರೀಯರು, ಮೊದಲ ಬಾರಿಯ ಮತದಾರರು, ಲೈಂಗಿಕ ಅಲ್ಪಸಂಖ್ಯಾತರು, ಅಂಗವಿಕಲರು, ಗೃಹಿಣಿಯರು, ವಿವಿಧ ವರ್ಗದ ಮತದಾರರನ್ನು ಕೇಂದ್ರೀಕರಿಸಿ ಪ್ರಚಾರ ನಡೆಸಲಾಗುತ್ತದೆ. ಇದರ ಫಲವಾಗಿ ಮತದಾನದ ಪ್ರಮಾಣ ಪ್ರತಿ ಚುನಾವಣೆಯಲ್ಲೂ ಏರಿಕೆ ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT