ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ: ಸಚಿವ

ರಾಜ್ಯಮಟ್ಟದ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ‘ಶೈಕ್ಷಣಿಕ ಸಮ್ಮೇಳನ’ ಮತ್ತು ಹಿಂದಿ ದಿವಸ್‌ ಕಾರ್ಯಕ್ರಮ
Last Updated 15 ಸೆಪ್ಟೆಂಬರ್ 2019, 13:08 IST
ಅಕ್ಷರ ಗಾತ್ರ

ಚಾಮರಾಜನಗರ: ಹಿಂದಿ ಭಾಷಾ ಶಿಕ್ಷಕರು ಮುಂದಿಟ್ಟಿರುವ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶನಿವಾರ ಭರವಸೆ ನೀಡಿದರು.

ನಗರದ ನಂದಿ ಭವನ ಕಲ್ಯಾಣ ಮಂಟಪದಲ್ಲಿ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ಹಿಂದಿ ದಿವಸ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದಿ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರು 10 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. 2016ರಲ್ಲಿ ಹೊರಡಿಸಿರುವ ವೃಂದ ಮತ್ತು ನೇಮಕಾತಿ ಆದೇಶವನ್ನು ರದ್ದುಪಡಿಸಿ, 2003ರ ಆದೇಶವನ್ನೇ ಪಾಲನೆ ಮಾಡಬೇಕು, ಉಪ ನಿರ್ದೇಶಕರ ಕಚೇರಿಯಲ್ಲಿ ಹಿಂದಿ ಪ‍ರಿವೀಕ್ಷಕರ ಹುದ್ದೆಯನ್ನು ಮಂಜೂರು ಮಾಡಬೇಕು, ಪ್ರೌಢಶಾಲೆಗಳಲ್ಲಿ ಹಿಂದಿ ವಿಷಯದ ಬೋಧನಾ ಅವಧಿಯನ್ನು 4ರಿಂದ 5ಕ್ಕೆ ಹೆಚ್ಚಿಸುವುದು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಿಂದಿ ವಿಷಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸಿ.ಆರ್‌ಪಿ, ಬಿಆರ್‌ಪಿ ಹುದ್ದೆಗಳಿಗೆ ಪರೀಕ್ಷೆ ಬರೆಯಲು ಹಾಗೂ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವುದು ಸೇರಿದಂತೆ ಕೆಲವು ವಾಸ್ತವವಾದ ಬೇಡಿಕೆಗಳಿವೆ. ಶೀಘ್ರದಲ್ಲಿ ಇವುಗಳ ಬಗ್ಗೆ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ’ ಎಂದು ಅವರು ಹೇಳಿದರು.

ಹುದ್ದೆ ಭರ್ತಿ ಮಾಡಿ: ಕೊಳ್ಳೇಗಾಲ ಶಾಸಕ ಎನ್‌.ಮಹೇಶ್ ಮಾತನಾಡಿ, ‘ರಾಜ್ಯದಲ್ಲಿ ಹಿಂದಿ ಭಾಷಾ ಶಿಕ್ಷಕರ ಕೊರತೆ ಇದೆ. ಜಿಲ್ಲೆಯಲ್ಲಿ 202 ಪ್ರೌಢಶಾಲೆಗಳಿದ್ದರೆ, 178 ಶಾಲೆಗಳಲ್ಲಿ ಮಾತ್ರ ಹಿಂದಿ ಶಿಕ್ಷಕರಿದ್ದಾರೆ. 864 ಪ್ರಾಥಮಿಕ ಶಾಲೆಗಳಿವೆ. ಕೇವಲ 56 ಶಾಲೆಗಳಲ್ಲಿ ಹಿಂದಿ ಶಿಕ್ಷಕರಿದ್ದಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಯಶಸ್ವಿಯಾಗಬೇಕು ಎಂದರೆ ಹಿಂದಿ ಶಿಕ್ಷಕರನ್ನು ಹಾಗೂ ಹಿಂದಿ ವಿಷಯ ಪರಿವೀಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. 150ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿರುವ ಪ್ರಾಥಮಿಕ ಶಾಲೆಗಳಿಗೆ ಕಡ್ಡಾಯವಾಗಿ ಹಿಂದಿ ಭಾಷಾ ಶಿಕ್ಷಕರನ್ನು ಹಾಗೂ ಪ್ರತಿ ಜಿಲ್ಲೆಯಲ್ಲೂ ಹಿಂದಿ ವಿಷಯವನ್ನು ನೇಮಕ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವರ್ಗಾವಣೆ ನೀತಿ ಬಗ್ಗೆ ಮಾತನಾಡಿದ ಅವರು, ‘ಶಿಕ್ಷಕಸ್ನೇಹಿ ವರ್ಗಾವಣೆ ನೀತಿ ತಂದೆ ಮಾತ್ರ ಶಿಕ್ಷಣ ಸ್ನೇಹಿ ಶಾಲೆ ನಿರ್ಮಾಣ ಆಗುತ್ತದೆ’ ಎಂದು ಹೇಳಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಶ್ರೀಕಂಠೇಗೌಡ ಮಾತನಾಡಿದರು. ಸರ್ಕಾರಿ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎ.ರಾಜಗೋಪಾಲಾಚಾರ್‌ ಅವರು ಸಂಘದ ಬೇಡಿಕೆಗಳನ್ನು ಓದಿ ಹೇಳಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಶರ್ಮನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಗೀತಾಂಬ, ಪ್ರಭಾರ ಉಪನಿರ್ದೇಶಕ ಪಿ.ಮಂಜುನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್‌.ಲಕ್ಷ್ಮಿಪತಿ, ಚಂದ್ರಪಾಟೀಲ್‌, ಹಾಲತಿ ಸೋಮಶೇಖರ್‌, ಟಿ.ಆರ್‌.ಸ್ವಾಮಿ, ತಿರುಮಲಾಚಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT