ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆಗೆ ಶೀಘ್ರ ಮಂಜೂರಾತಿ: ಸೋಮಣ್ಣ

14,144 ಮನೆಗಳಿಗೆ ಬೇಡಿಕೆ, ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆಗೆ ಸೂಚನೆ
Last Updated 4 ಫೆಬ್ರುವರಿ 2023, 15:46 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ 14,144 ವಸತಿ ಸೌಲಭ್ಯ ಕೋರಿ ಪ್ರಸ್ತಾವ ಬಂದಿದ್ದು, ಶೀಘ್ರ ಮಂಜೂರಾತಿ ಆದೇಶ ಹೊರಡಿಸಲು ಕ್ರಮವಹಿಸಲಾಗುವುದು. ಪಿಡಿಒಗಳು 15 ದಿನಗಳಲ್ಲಿ ನಿವೇಶನ ಹೊಂದಿರುವ ವಸತಿ ರಹಿತರಿದ್ದರೆ, ಇದ್ದರೆ ಅವರ ಆಧಾರ್‌ ಸಂಖ್ಯೆ ಮತ್ತು ಮತದಾರರ ಗುರುತಿನ ಚೀಟಿ ಸಂಗ್ರಹಿಸಿ ಫಲಾನುಭವಿಗಳನ್ನು ಪಟ್ಟಿಮಾಡಬೇಕು ಎಂದು ವಸತಿ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶನಿವಾರ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ವಸತಿ ಯೋಜನೆಗಳ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಯಳಂದೂರು ತಾಲ್ಲೂಕಿನಲ್ಲಿ 525, ಚಾಮರಾಜನಗರ ತಾಲ್ಲೂಕಿನಲ್ಲಿ 2,698, ಗುಂಡ್ಲುಪೇಟೆಯಲ್ಲಿ 3,201, ಕೊಳ್ಳೇಗಾಲದಲ್ಲಿ 3,800 ಹಾಗೂ ಹನೂರು ತಾಲ್ಲೂಕಿನಲ್ಲಿ4,476 ಮನೆಗಳಿಗೆ ಬೇಡಿಕೆ ಇದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ. ಆದರೆ, ಬಸವ ವಸತಿ ಯೋಜನೆಯಲ್ಲಿ ಕೊಡಬಹುದು ’ ಎಂದು ಹೇಳಿದರು.

ಯೋಜನೆ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅರ್ಹರಿಗೆ ಯೋಜನೆಯ ಲಾಭ ತಲುಪಬೇಕು ಎಂಬ ಉದ್ದೇಶದಿಂದ ಅನೇಕ ಪಾರದರ್ಶಕ ಸುಧಾರಣೆ ತರಲಾಗಿದೆ. ಅಡಮಾನ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. ಮನೆಕಟ್ಟಲು ನೀಡುವ ಹಣಕಾಸಿನ ನೆರವನ್ನೂ ಹೆಚ್ಚಿಸಲಾಗುತ್ತಿದೆ’ ಎಂದರು.

‘ಬಡವರಿಗೆ ಇರುವ ಯೋಜನೆಯಲ್ಲಿ ಸಣ್ಣ ಅಪಚಾರವೂ ಆಗಬಾರದು. ಪಿಡಿಒಗಳು ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಜನರನ್ನು ಅಲೆದಾಡಿಸದೇ ಸಮಸ್ಯೆಗಳನ್ನು ಪರಿಹರಿಸಬೇಕು. ಗ್ರಾಮಗಳ ವಿದ್ಯುತ್ ದೀಪ, ಕುಡಿಯುವ ನೀರು, ಸ್ವಚ್ಚತೆಗೆ ಒತ್ತು ನೀಡಬೇಕು’ ಎಂದರು.

ಶಾಸಕ ಆರ್.ನರೇಂದ್ರ ಮಾತನಾಡಿ, ‘ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಕೆಲವು ಪಂಚಾಯಿತಿಗಳಲ್ಲಿ ನರೇಗಾ ಯೋಜನೆ ಅತ್ಯುತ್ತಮವಾಗಿ ಅನುಷ್ಠಾನಗೊಂಡರೆ ಇನ್ನು ಕೆಲವು ಕಡೆಗಳಲ್ಲಿ ಸಾಧನೆ ಕಳಪೆಯಾಗಿದೆ. ಇದಕ್ಕೆ ಪಿಡಿಒಗಳೇ ಕಾರಣ. ಉಪಕರಣಗಳ ಪೂರೈಕೆ ಮಾಡುವ ಹೊಣೆಯನ್ನು ತಮಗೆ ಬೇಕಾದವರಿಗೆ ಕೊಡುತ್ತಾರೆ’ ಎಂದು ದೂರಿದರು. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ, ಬಡವರಿಗೆ ಅನುಕೂಲವಾಗುತ್ತದೆ ಎಂದರು.

ಶಾಸಕ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಲ್ಲಿ ಇ–ಸ್ವತ್ತಿನ ಬಗ್ಗೆ ಹೆಚ್ಚು ದೂರುಗಳು ಬರುತ್ತಿವೆ. ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ನಿವಾರಿಸಿ ಜನರಿಗೆ ಕೆಲಸ ಮಾಡಿಕೊಡಬೇಕು. ನಿಮಗೂ ಒತ್ತಡ ಇದೆ. ಅದರ ನಡುವೆಯೇ ಕೆಲಸ ಮಾಡುತ್ತಿದ್ದೀರಿ ಎಂದು ಗೊತ್ತು. ಹಾಗಿದ್ದರೂ, ಜನರಿಗೆ ಅನುಕೂಲಕರವಾದ ಕೆಲಸಗಳನ್ನು ಮಾಡಿಕೊಡಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಪಿಡಿಒಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇದರಿಂದ ಕೋಪಗೊಂಡ ಸೋಮಣ್ಣ, ‘ಯಾಕೆ ಚಪ್ಪಾಳೆ ತಟ್ಟುತ್ತೀರಿ? ಯಾರಿಂದ ನಿಮಗೆ ಒತ್ತಡ ಇದೆ. ಜನರ ಕೆಲಸ ಮಾಡುವುದು ನಿಮ್ಮ ಕರ್ತವ್ಯ. ಯಾರಿಂದ ಏನಾದರೂ ಸಮಸ್ಯೆಯಾದರೆ ಗಮನಕ್ಕೆ ತನ್ನಿ’ ಎಂದರಲ್ಲದೆ, ನಿರಂಜನ್‌ಕುಮಾರ್‌ ಚುನಾವಣಾ ಭಾಷಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯಿತಿ ಸಿಇಒ ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇದ್ದರು.

ಸಭೆಯಲ್ಲಿ ಚುನಾವಣಾ ಜಪ

ಸಭೆಯಲ್ಲಿ ಹಲವು ಬಾರಿ ಸಚಿವರು, ಶಾಸಕರು ಮುಂಬರುವ ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದರು.

ಶಾಸಕ ಎನ್‌.ಮಹೇಶ್‌ ಅವರಂತು ‘ಇನ್ನು ಮೂರು ತಿಂಗಳಲ್ಲಿ ಚುನಾವಣೆ ಇದೆ. ಅಷ್ಟರೊಳಗೆ ಕೆಲಸಗಳು ಆಗಬೇಕು’ ಎಂದೂ ಹೇಳಿದರು.

ಸಚಿವ ಸೋಮಣ್ಣ ಅವರು, ‘ಚುನಾವಣೆ ಇದೆ ಎಂದು ಈ ಸಭೆ ಕರೆದಿಲ್ಲ. ನೀವು ನಿಮ್ಮ ಕೆಲಸದಿಂದ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸಭೆ ಹಮ್ಮಿಕೊಂಡಿದ್ದೇವೆ’ ಎಂದು ಎರಡು ಬಾರಿ ಹೇಳಿದರು.

‘ಚುನಾವಣೆಯಲ್ಲಿ ಶಾಸಕರ ವಿರುದ್ಧವಾಗಿ ಕೆಲಸ ಮಾಡಬೇಡಿಯಪ್ಪಾ’ ಎಂದೂ ಸಚಿವರು ಹೇಳಿದರು.

ಶಾಸಕ ಎನ್.ಮಹೇಶ್ ಅವರು, ‘ಟಗರುಪುರದಿಂದ ಹೊಸ ಮಾಲಂಗಿ ರಸ್ತೆಯಲ್ಲಿ ಓಡುವುದಕ್ಕೆ ಆಗುವುದಿಲ್ಲ. ರಸ್ತೆಯ ಎರಡೂ ಬದಿಗಳಲ್ಲಿ ಜಾಲಿ ಮುಳ್ಳುಗಳು ಬೆಳೆದಿವೆ. ಐದು ವರ್ಷಗಳಾಯಿತು. ಇನ್ನೂ ತೆರವುಗೊಳಿಸಿಲ್ಲ. ಮಳೆ, ಪ್ರವಾಹದಿಂದಾಗಿ ರಸ್ತೆಗಳು ಹಾಳಾಗಿದ್ದು, ಇನ್ನೂ ದುರಸ್ತಿಯಾಗಿಲ್ಲ. ರಸ್ತೆಯಲ್ಲಿ ನಾವು ಹೋಗುವಾಗ ಜನರು ಕಲ್ಲು ಎಸೆಯುವ ಸ್ಥಿತಿ ಇದೆ’ ಎಂದರು.

ಸೋಮಣ್ಣ ಮಾತನಾಡಿ, ‘ನರೇಗಾ ಯೋಜನೆಯಡಿ ರಸ್ತೆ ಬದಿಯ ಕಳೆಗಿಡಗಳನ್ನು ಕತ್ತರಿಸಲು ಎಲ್ಲ ಪಿಡಿಒಗಳು ಕ್ರಮ ಕೈಗೊಳ್ಳಬೇಕು. ಎನ್‌ಡಿಆರ್‌ಎಫ್‌ ಅನುದಾನದಲ್ಲಿ ಬರುವ ಹಣದಲ್ಲಿ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

‘ಪಿಡಿಒ, ಸದಸ್ಯರ ನಡುವೆ ಸಾಮರಸ್ಯ ಇಲ್ಲ’

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಹಲವು ಗ್ರಾಮಗಳಲ್ಲಿ ಪಿಡಿಒಗಳಿಗೂ ಅಧ್ಯಕ್ಷರು, ಸದಸ್ಯರಿಗೂ ಸಾಮರಸ್ಯ ಇಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಎಲ್ಲರೂ ಒಗ್ಗಟ್ಟಾಗಿ ಇರುವ ಪಂಚಾಯಿತಿಗಳಲ್ಲಿ ಅತ್ಯುತ್ತಮ ಕೆಲಸಗಳಾಗುತ್ತಿವೆ. ಕೋಟ್ಯಂತರ ರೂಪಾಯಿ ಅನುದಾನ ಬಳಸಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ಹೇಳಿದ ಅವರು ಯಳಂದೂರು ತಾಲ್ಲೂಕಿನ ಗುಂಬಳ್ಳಿ ಪಂಚಾಯಿತಿಯ ಉದಾಹರಣೆ ಕೊಟ್ಟರು.

‘ವಸತಿ ಯೋಜನೆ ಇರಬಹುದು ಅಥವಾ ಬೇರೆ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆ ಸಮರ್ಪಕವಾಗಿ ಆಗುತ್ತಿಲ್ಲ. ಗ್ರಾಮ ಸಭೆಗಳಲ್ಲೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂಬ ನಿಯಮ ಇದೆ. ಆದರೆ ಎಲ್ಲೂ ಇದು ಪಾಲನೆಯಾಗುತ್ತಿಲ್ಲ. ಪಂಚಾಯಿತಿಗಳಲ್ಲಿ ರಾಜಕೀಯ ಇರಬಾರದು ಎಂಬ ಕಾರಣಕ್ಕೆ ಪಂಚಾಯತ್‌ ರಾಜ್‌ ವ್ಯವಸ್ಥೆ ಬಂದಿದೆ. ಆದರೆ, ಗ್ರಾಮ ಪಂಚಾಯಿತಿಗಳಲ್ಲೇ ರಾಜಕೀಯ ತೊಳಲಾಟಗಳು ಹೆಚ್ಚಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT