ಸೋಮವಾರ, ಅಕ್ಟೋಬರ್ 26, 2020
28 °C
ಚುಡಾ ಅನುಮೋದನೆ ಪಡೆಯದೇ ಬಡಾವಣೆ ನಿರ್ಮಾಣ, ನಿವೇಶನ ಮಾರಾಟ,

ಚಾಮರಾಜನಗರ: ನಗರಾಭಿವೃದ್ಧಿಗೆ ಅಕ್ರಮ ಬಡಾವಣೆ ತೊಡಕು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಚಾಮರಾಜನಗರ–ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ (ಚುಡಾ) ವ್ಯಾಪ್ತಿಯಲ್ಲಿ ಪ್ರಾಧಿಕಾರದ ಪರವಾನಗಿ ಪಡೆಯದೇ ನಿರ್ಮಾಣವಾಗುತ್ತಿರುವ ಬಡಾವಣೆಗಳು ನಗರದ ಯೋಜನಾಬದ್ಧ ಅಭಿವೃದ್ಧಿಗೆ ತೊಡಕುಂಟು ಮಾಡುತ್ತಿದೆ. 

ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಜನರು ಬಡಾವಣೆ ನಿರ್ಮಿಸಲು ಬಯಸಿದರೆ ಅಥವಾ ನಿವೇಶನವನ್ನು ಅಭಿವೃದ್ಧಿ ಪ‍ಡಿಸಲು ಬಯಸಿದರೆ ಪ್ರಾಧಿಕಾರದಿಂದ ವಿನ್ಯಾಸ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಹಲವು ವರ್ಷಗಳಿಂದ ಅನುಮೋದನೆ ಪಡೆಯದೇ ಬಡಾವಣೆ, ಕಟ್ಟಡಗಳನ್ನು ಕಟ್ಟಿದವರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇದ್ದಾರೆ. 

ಚಾಮರಾಜನಗರವು 1997ರಲ್ಲಿ ಮೈಸೂರಿನಿಂದ ಬೇರ್ಪಟ್ಟು ಜಿಲ್ಲೆಯಾದ ಸಮಯದಲ್ಲೇ ರಾಮಸಮುದ್ರ–ಚಾಮರಾಜನಗರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಾಗಿತ್ತು. ಜಿಲ್ಲಾ ಕೇಂದ್ರ ಚಾಮರಾಜನಗರ ಸೇರಿದಂತೆ ಏಳು ಗ್ರಾಮ ಪಂಚಾಯಿತಿಗಳ 27 ಹಳ್ಳಿಗಳು ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತವೆ.

22 ವರ್ಷಗಳ ಅವಧಿಯಲ್ಲಿ ಪ್ರಾಧಿಕಾರವು 65 ಖಾಸಗಿ ಬಡಾವಣೆಗಳಿಗೆ ಅನುಮತಿ ನೀಡಿದೆ. ನಿರ್ಮಾಣವಾಗಿರುವ ಅಕ್ರಮ ಬಡಾವಣೆಗಳ ಬಗ್ಗೆ ಪ್ರಾಧಿಕಾರದಲ್ಲಿ ನಿಖರವಾದ ಮಾಹಿತಿ ಇಲ್ಲ. ಅಂದಾಜು 30ರಿಂದ 40ರಷ್ಟು ಬಡಾವಣೆಗಳು ಪ್ರಾಧಿಕಾರದ ಅನುಮತಿ ಪಡೆಯದೇ ಅಭಿವೃದ್ಧಿ ಪಡಿಸಲಾಗಿದೆ. ಕೆಲವುದರಲ್ಲಿ ಕಟ್ಟಡಗಳನ್ನೂ ಕಟ್ಟಲಾಗಿದೆ. 

ಚುಡಾ ವ್ಯಾಪ್ತಿಗೆ ಬರುವ ಚಾಮರಾಜನಗರದ ನಗರಸಭೆ, ಬದನಗುಪ್ಪೆ, ಚಂದಕವಾಡಿ, ದೊಡ್ಡಮೋಳೆ, ಹರದನಹಳ್ಳಿ, ಕೂಡ್ಳೂರು, ಮಾದಾಪುರ ಹಾಗೂ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ನಡೆಯುತ್ತಿದೆ.

ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ನಿರ್ಮಾಣವಾಗುವ ಬಡಾವಣೆಗಳು, ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. 

ನೋಂದಣಿ ಮೂಲಕ ಖರೀದಿ: ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೃಷಿ ಜಮೀನು ಹೊಂದಿರುವವರು, ನಿರ್ದಿಷ್ಟ ಅಳತೆಗೆ ಅದನ್ನು ನಿವೇಶನಗಳನ್ನಾಗಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ಪ್ರಾಧಿಕಾರದಿಂದ ಅನುಮತಿ ಪಡೆಯುವುದಿಲ್ಲ. ಭೂಮಿ ಪರಿವರ್ತನೆಯೂ (ಕೃಷಿಯಿಂದ ವಸತಿ ಉದ್ದೇಶಕ್ಕೆ) ಮಾಡುವುದಿಲ್ಲ. ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿಯಾಗಿರುತ್ತದೆ. ನೋಂದಣಿಯ ಆಧಾರದಲ್ಲಿ ಮಾಲೀಕತ್ವದ ಜಮೀನು ಅಥವಾ ನಿವೇಶನ ಪರಭಾರೆಯಾಗುತ್ತದೆ. ಆದರೆ, ಖಾತೆ ಬದಲಾವಣೆಯಾಗುವುದಿಲ್ಲ. ಸರ್ಕಾರದ ನಿಯಮದಂತೆ ಅಲ್ಲಿ ಮನೆಗಳನ್ನು ಕಟ್ಟಲು ಆಗುವುದಿಲ್ಲ.  

‘ಉದಾಹರಣೆಗೆ, ಎರಡು ಎಕರೆ ಕೃಷಿ ಜಮೀನು ಹೊಂದಿರುವ ಮಾಲೀಕ, ಒಂದೂಕಾಲು ಗುಂಟೆಗಳ ಹಾಗೆ ಅದನ್ನು ವಿಭಜಿಸಿ ಮಾರಾಟ ಮಾಡುತ್ತಾನೆ. ಭೂ ಪರಿವರ್ತನೆ ಮಾಡಿರುವುದಿಲ್ಲ. ವ್ಯವಹಾರದ ಬಗ್ಗೆ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುತ್ತಾರೆ. ಆದರೆ, ಜಮೀನಿನ ಆರ್‌ಟಿಸಿ ಇರುತ್ತದೆ. ನೋಂದಣಿ ಆಧಾರದಲ್ಲಿ ಖಾತೆ/ಇ–ಸ್ವತ್ತು ಆಗುವುದಿಲ್ಲ. ಅಂತಹ ಜಮೀನಿನಲ್ಲಿ ಮನೆ ಕಟ್ಟಿದರೆ, ಕಾನೂನಿನ ಪ್ರಕಾರ ಅದು ಅಕ್ರಮ ಕಟ್ಟಡವಾಗುತ್ತದೆ. ಬ್ಯಾಂಕುಗಳಲ್ಲಿ ಸಾಲವೂ ಸಿಗುವುದಿಲ್ಲ. ಇಂತಹ ನಿವೇಶನಗಳಲ್ಲಿ ಮೂಲಸೌಕರ್ಯಗಳಿರುವುದಿಲ್ಲ’ ಎಂದು ಚುಡಾ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಾರಾಟ ಮಾಡುವುದಕ್ಕೂ ಮೊದಲು ಜಮೀನಿನ ಮಾಲೀಕ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ವಿನ್ಯಾಸದ ಅನುಮೋದನೆ ಪಡೆದುಕೊಳ್ಳಬೇಕು. ಭೂಮಿ ಪರಿವರ್ತನೆ ಮಾಡಿಕೊಳ್ಳಬೇಕು. ಎಲ್ಲವೂ ನಿಯಮ ಬದ್ಧವಾಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ನಮ್ಮಲ್ಲಿ ಜನರಿಗೆ ಕಾನೂನಿನ ಕೊರತೆ ಇದೆ. ನಿವೇಶನ ಖರೀದಿಸುವುದು ಬಹುತೇಕರ ಕನಸು. ಕೆಲವರು, ಇದನ್ನೇ ಬಳಸಿಕೊಂಡು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. 

‘ಅಕ್ರಮ ಬಡಾವಣೆಗಳು ಎಷ್ಟಿವೆ ಎಂಬ ನಿಖರ ಮಾಹಿತಿ ಇಲ್ಲ. ಜಮೀನು ಖರೀದಿಸಿದ ಅಥವಾ ಕಟ್ಟಡ ಕಟ್ಟಿದವರು ಜನರು ತಮಗಾದ ಸಮಸ್ಯೆಯನ್ನು ಪ್ರಾಧಿಕಾರಕ್ಕೆ ತಿಳಿಸಿದಾಗ ಮಾತ್ರ ಅಕ್ರಮವಾಗಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ನಮಗೆ ಗೊತ್ತಾಗುವುದು. ಇತ್ತೀಚೆಗೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ ನಡೆಸಿ ಈ ಬಗ್ಗೆ ಮಾಹಿತಿ ಕಲೆ ಹಾಕಲು ಸೂಚಿಸಿದ್ದೇನೆ’ ಎಂದು ಶಾಂತಮೂರ್ತಿ ಹೇಳಿದರು. 

‘ಜಮೀನು ಅಥವಾ ನಿವೇಶನ ಖರೀದಿ ಮಾಡುವ ಮೊದಲು ಜನರು ಚುಡಾದಿಂದ ಅನುಮೋದನೆ ಪಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅವರು ನೇರವಾಗಿ ಬಂದು ನಮ್ಮ ಬಳಿ ಕೇಳಿದರೆ ಸಾಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ತೀರ್ಮಾನಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು. 

‘ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೇ ಇದ್ದರೆ ನಗರವು ಯೋಜನಾಬದ್ಧವಾಗಿ ಬೆಳವಣಿಗೆಯಾಗುವುದಿಲ್ಲ. ಸಾರ್ವಜನಿಕರಿಗೂ ಅನನುಕೂಲ ಉಂಟಾಗುತ್ತದೆ. ಸ್ಥಳೀಯ ಸಂಸ್ಥೆಗಳ ಮೇಲೂ ಹೆಚ್ಚಿನ ಹೊರೆ ಬೀಳುತ್ತದೆ. ಅನುಮೋದನೆ ಪಡೆಯದ ಬಡಾವಣೆಗಳು ರಸ್ತೆ, ಒಳಚರಂಡಿ, ಕುಡಿಯುವ ನೀರು, ಉದ್ಯಾನ ಸೌಲಭ್ಯಗಳಿಂದ ವಂಚಿತವಾಗಿವೆ’ ಎಂದು ಹೇಳಿದರು. 

‘ನಾವು ಇದುವರೆಗೆ 65 ಖಾಸಗಿ ಬಡಾವಣೆಗಳ ಅಭಿವೃದ್ಧಿಗೆ ಅನುಮೋದನೆ ನೀಡಿದ್ದೇವೆ. ಇದರಲ್ಲಿ ಕೆಲವರು ಶೇ 100ರಷ್ಟು ಪೂರ್ಣಗೊಳಿಸಿದ್ದರೆ, ಇನ್ನು ಕೆಲವರು ಶೇ 60ರಷ್ಟು ಹಾಗೂ ಶೇ 40ರಷ್ಟು ಪೂರ್ಣಗೊಳಿಸಿದ್ದಾರೆ. ಅಭಿವೃದ್ಧಿ ಕೆಲಸವನ್ನು ಪೂರ್ಣಗೊಳಿಸಲು ಮಾಲೀಕರಿಗೆ ಸೂಚಿಸಲಾಗಿದೆ’ ಎಂದರು. 

‘ಅನುಮೋದನೆ ಪ‍ಡೆದು ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯ (ಸಿಎ) ನಿವೇಶನಗಳು ಸರಿಯಾಗಿ ಬಳಕೆಯಾಗುತ್ತಿಲ್ಲ. ಈ ಬಡಾವಣೆಗಳಲ್ಲಿ ಉದ್ಯಾನಗಳು ನಿರ್ಮಾಣವಾಗಿಲ್ಲ ಎಂಬ ಬಗ್ಗೆ ದೂರುಗಳಿವೆ. ಇದರ ಸಮೀಕ್ಷೆ ಕಾರ್ಯ ನಡೆಸಲು ನಿರ್ಧರಿಸಿದ್ದೇವೆ’ ಎಂದು ಶಾಂತಮೂರ್ತಿ ಹೇಳಿದರು.

7 ಗ್ರಾ.ಪಂ, 27 ಹಳ್ಳಿಗಳು
ಚುಡಾ ವ್ಯಾಪ್ತಿಗೆ ಒಂದು ನಗರಸಭೆ, ಏಳು ಗ್ರಾಮ ಪಂಚಾಯಿತಿಗಳ 27 ಹಳ್ಳಿಗಳು ಬರುತ್ತವೆ.

ಚಾಮರಾಜನಗರ, ಚೆನ್ನೀಪುರದಮೋಳೆ, ರಾಮಸಮುದ್ರ, ಕರಿನಂಜನಪುರ, ಸೋಮವಾರ ಪೇಟೆ, ಗಾಳಿಪುರ, ಮೂಡಲಪುರ, ಬದನಗುಪ್ಪೆ ಗ್ರಾಮ ಪಂಚಾಯಿತಿಯ ಮರಿಯಾಲ ಮತ್ತು ಗಂಗಾವಾಡಿ, ಚಂದಕವಾಡಿ ಗ್ರಾಮ ಪಂಚಾಯಿತಿಯ ಚಂದಕವಾಡಿ, ಕೋಡಿಮೋಳೆ, ಬಸವನಪುರ, ದೊಡ್ಡಮೋಳೆ ಪಂಚಾಯಿತಿಯ ದೊಡ್ಡಮೋಳೆ, ಕೂಡ್ಳೂರು ಗ್ರಾಮ ಪಂಚಾಯಿತಿಯ ಕೂಡ್ಳೂರು ಮತ್ತು ಬೂದಿತಿಟ್ಟು, ಮಾದಾಪುರ ಪಂಚಾಯಿತಿಯ ಮಾದಾಪುರ, ಹಂಡ್ರಕಳ್ಳಿ, ಮಸಗಾಪುರ, ಕಾಡಹಳ್ಳಿ, ಶಿವಪುರ ಗ್ರಾಮ ಪಂಚಾಯಿತಿಯ ಶಿವಪುರ, ಮಲ್ಲಯ್ಯನಪುರ,ಮಣಗನಹಳ್ಳಿ, ಮುನಚನ ಹಳ್ಳಿಗಳು ಪ್ರಾಧಿಕಾರಕ್ಕೆ ಸೇರಿವೆ. 

ಬಡಾವಣೆ ಅಭಿವೃದ್ಧಿ ಪಡಿಸದ ಪ್ರಾಧಿಕಾರ
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೊಂಡು 22 ವರ್ಷಗಳಾದರೂ ಇದುವರೆಗೂ ಒಂದು ಬಡಾವಣೆಯನ್ನೂ ಅಭಿವೃದ್ಧಿಪಡಿಸಲು ಅದಕ್ಕೆ ಆಗಿಲ್ಲ. 

‘1992ರಲ್ಲಿ 50:50 ಅನುಪಾತದಲ್ಲಿ ಬಡಾವಣೆ ನಿರ್ಮಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಸ್ತಾಪಿಸಿತ್ತು. ನಂತರ ಈ ಬಗ್ಗೆ ಈ ನಿರ್ಧಾರ ಕೈಗೊಂಡಿಲ್ಲ. ಈ ಯೋಜನೆ ಅಡಿಯಲ್ಲಿ ಮಸಗಾಪುರ ಗ್ರಾಮದಲ್ಲಿ 14 ಎಕರೆ 24 ಗುಂಟೆ ಜಮೀನು ಗುರುತಿಸಲಾಗಿತ್ತು. ರೈತರ ಸಹಭಾಗಿತ್ವದಲ್ಲಿ ವಸತಿ ಯೋಜನೆ ಆರಂಭಿಸುವ ಪ್ರಸ್ತಾಪ ಇದೆ. ಇಲ್ಲಿ 229 ನಿವೇಶನಗಳನ್ನು ಅಭಿವೃದ್ಧಿ ಪಡಿಸಲು ಅವಕಾಶ ಇದೆ. ಸರ್ಕಾರದ ಅನುಮೋದನೆ ಬಳಿಕ ಬಡಾವಣೆ ನಿರ್ಮಿಸಲಾಗುವುದು’ ಎಂದು ಶಾಂತಮೂರ್ತಿ ಅವರು ಹೇಳಿದರು. 

ಪಾರದರ್ಶಕತೆ ಒತ್ತು
‘ಪ್ರಾಧಿಕಾರವನ್ನು ಜನಸ್ನೇಹಿಯನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಅಧಿಕಾರ ವಹಿಸಿಕೊಂಡ ಮೂರು ತಿಂಗಳಲ್ಲಿ ಬಡಾವಣೆ ಅನುಮೋದನೆಗಾಗಿ ಒಂಬತ್ತು ಅರ್ಜಿಗ‌ಳು ಬಂದಿವೆ. ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ. ಪಾರದರ್ಶಕತೆಗೆ ಒತ್ತು ನೀಡಲಾಗುತ್ತಿದೆ. ನಿವೇಶನ ಖರೀದಿಸುವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಕ್ಕೆ ಆದ್ಯತೆ ನೀಡುತ್ತಿದ್ದೇನೆ. ಅಧಿಕಾರಿಗಳಿಗೂ ಅದನ್ನೇ ಹೇಳಿದ್ದೇನೆ’ ಎಂದು ಶಾಂತಮೂರ್ತಿ ಅವರು ತಿಳಿಸಿದರು. 

‘ಜನರು ಎಚ್ಚೆತ್ತುಕೊಳ್ಳಬೇಕು. ನಿವೇಶನ ಖರೀದಿಸುವುದಕ್ಕೂ ಮುನ್ನ ಕಚೇರಿಗೆ ಬಂದು ವಿಚಾರಿಸಿದರೆ, ಬಡಾವಣೆಗೆ ಅನಮೋದನೆ ನೀಡಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ನಾವು ಮಾಹಿತಿ ನೀಡುತ್ತೇವೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು