ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಅಕ್ರಮ ಮದ್ಯ ವಹಿವಾಟಿನ ಹಾವಳಿ

ಮೇ ತಿಂಗಳಲ್ಲಿ ಅಬಕಾರಿ ಅಧಿಕಾರಿಗಳಿಂದ 115 ಕಡೆಗಳಲ್ಲಿ ದಾಳಿ, 220 ಲೀಟರ್‌ ಮದ್ಯ ವಶ
Last Updated 11 ಜೂನ್ 2021, 1:18 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್‌ಡೌನ್‌ ಅವಧಿಯಲ್ಲಿ ಅಕ್ರಮ ಮದ್ಯ ವಹಿವಾಟಿನ ಹಾವಳಿ ಹೆಚ್ಚಾಗಿದೆ. ಜಿಲ್ಲೆಯಾದ್ಯಂತ ಪೊಲೀಸರು ಅಕ್ರಮ ಮದ್ಯ ಮಾರಾಟ ಪ್ರಕರಣಗಳನ್ನು ದಿನಂಪ್ರತಿ ಪತ್ತೆ ಹಚ್ಚುತ್ತಿದ್ದಾರೆ.

ಇತ್ತ ಅಬಕಾರಿ ಇಲಾಖೆಯು ಕೂಡ ಅಕ್ರಮವಾಗಿ ಮದ್ಯದ ಸಂಗ್ರಹ, ವಹಿವಾಟಿನ ಮೇಲೆ ನಿಗಾ ಇಟ್ಟಿದ್ದು, ಮೇ ತಿಂಗಳಲ್ಲಿ 115 ಕಡೆ ದಾಳಿ ನಡೆಸಿದೆ. ಒಟ್ಟು 69 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈ ಪೈಕಿ ಆರು ಗಂಭೀರ ಪ್ರಕರಣ (ಘೋರ), 53 ಸಾಮಾನ್ಯ ಪ್ರಕರಣಗಳು. ಒಟ್ಟು 56 ಜನರನ್ನು ಬಂಧಿಸಲಾಗಿದೆ. ಷರತ್ತು ಉಲ್ಲಂಘಿಸಿದ 10 ಸನ್ನದುದಾರರ ವಿರುದ್ಧವೂ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. 220 ಲೀಟರ್‌ಗಳಷ್ಟು ಮದ್ಯ (ಐಎಂಎಲ್‌) ಹಾಗೂ 29 ಲೀಟರ್‌ಗಳಷ್ಟು ಬಿಯರ್‌ ಅನ್ನು ಜಪ್ತಿ ಮಾಡಲಾಗಿದೆ. 660 ಲೀಟರ್‌ ಬೆಲ್ಲದ ಕೊಳೆ, ಒಂದು ಲೀಟರ್‌ ಕಳ್ಳಭಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಮದ್ಯದ ಅಂಗಡಿಗಳ ವಹಿವಾಟಿಗೆ ಸಮಯದ ಮಿತಿ ನಿಗದಿ ಪಡಿಸಲಾಗಿದೆ. ಆರಂಭದಲ್ಲಿ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿತ್ತು. ಈಗ ವಾರದಲ್ಲಿ ಮೂರು ದಿನ ಮಾತ್ರ ಮಾರಾಟ ಮಾಡಬಹುದು.

‘ಲಾಕ್‌ಡೌನ್‌ ಅವಧಿಯಲ್ಲಿ ಅಕ್ರಮ ಮದ್ಯ ವಹಿವಾಟಿನ ಮೇಲೆ ನಿಗಾ ಇಡಲು ಐದು ತಂಡಗಳನ್ನು ರಚಿಸಲಾಗಿದೆ. ಮೂರು ವಲಯಗಳಲ್ಲೂ ತಲಾ ಒಂದು ತಂಡ ಮತ್ತು ಇಡೀ ಜಿಲ್ಲೆಗೆ ಎರಡು ತಂಡಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಜನರಿಗೆ ಮಾಹಿತಿ ನೀಡಲು ಅನುಕೂಲವಾಗಲು ಕಂಟ್ರೋಲ್‌ ರೂಂ (08226–224776) ಕೂಡ ತೆರೆಯಲಾಗಿದೆ. ಮೇ ತಿಂಗಳಲ್ಲಿ 26 ಮಂದಿ ಕಂಟ್ರೋಲ್‌ ರೂಂಗೆ ಕರೆ ಮಾಡಿ ದೂರು ನೀಡಿದ್ದಾರೆ’ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಕೆ.ಎಸ್‌.ಮುರಳಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳ್ಳಭಟ್ಟಿ ತಯಾರಿಸುವ ಪ್ರಯತ್ನ: ಲಾಕ್‌ಡೌನ್‌ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಲಭ್ಯವಿಲ್ಲದೇ ಇರುವುದರಿಂದ ಗ್ರಾಮೀಣ ಭಾಗಗಳಲ್ಲಿ ಕಳ್ಳಭಟ್ಟಿ ತಯಾರಿಸುವ ಪ್ರಯತ್ನಗಳೂ ಬೆಳಕಿಗೆ ಬಂದಿವೆ.

ಮೇ ತಿಂಗಳಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ 600 ಲೀಟರ್‌ಗಳಷ್ಟು‌ ಬೆಲ್ಲದ ಕೊಳೆಯನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜೂನ್‌ ತಿಂಗಳ ಮೊದಲ ಎಂಟು ದಿನಗಳಲ್ಲಿ, ವಿವಿಧ ಕಡೆಗಳಲ್ಲಿ ಕಾರ್ಯಾಚರನೆ ನಡೆಸಿ 60 ಲೀಟರ್‌ಗಳಷ್ಟು ಬೆಲ್ಲದ ಕೊಳೆ ಹಾಗೂ ಒಂದು ಲೀಟರ್‌ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.

‘ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಜಿಲ್ಲೆಯಲ್ಲೆಲ್ಲೂ ಇಂತಹ ಪ‍್ರಕರಣಗಳು ವರದಿಯಾಗಿಲ್ಲ. ಲಾಕ್‌ಡೌನ್‌ ಜಾರಿಯಾಗಿ ವಹಿವಾಟಿಗೆ ಸಮಯ ನಿಗದಿಯಾದ ನಂತರ, ಅದರಲ್ಲೂ ಮೂರು ದಿನ ಮಾತ್ರ ಅವಕಾಶ ನೀಡಿದ ಬಳಿಕ, ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಲಭ್ಯವಾಗದೇ ಇರುವುದರಿಂದ ಗ್ರಾಮೀಣ ಭಾಗಗಳಲ್ಲಿ ಕಳ್ಳಭಟ್ಟಿ ತಯಾರಿಸಲು ಕೆಲವರು ಮುಂದಾಗುತ್ತಿದ್ದಾರೆ’ ಎಂದು ಮುರಳಿ ಅವರು ಮಾಹಿತಿ ನೀಡಿದರು.

ಮಾರಾಟಕ್ಕೆ ಬಿದ್ದಿಲ್ಲ ಹೆಚ್ಚು ಹೊಡೆತ

ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಲಾಕ್‌ಡೌನ್‌ ಇದ್ದರೂ, ಮದ್ಯ ಮಾರಾಟ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಶೇ 9.3ರಷ್ಟು ಕುಸಿತವಾಗಿದೆ ಅಷ್ಟೆ. ಕಳೆದ ವರ್ಷ ಮೇನಲ್ಲಿ ಜಿಲ್ಲೆಯಲ್ಲಿ 79,973 ಬಾಕ್ಸ್‌ ಮದ್ಯ ಮಾರಾಟವಾಗಿತ್ತು. ಈ ಬಾರಿ 72,498 ಬಾಕ್ಸ್‌ ಮಾರಾಟವಾಗಿದೆ.

ಬಿಯರ್‌ ಮಾರಾಟದಲ್ಲಿ ಶೇ 0.5ರಷ್ಟು ಕಡಿತವಾಗಿದೆ. ಕಳೆದ ವರ್ಷ 13,174 ಬಾಕ್ಸ್‌ ಬಿಯರ್‌ ಮಾರಾಟವಾಗಿದ್ದರೆ ಈ ಬಾರಿ 13,113 ಬಾಕ್ಸ್‌ ಬಿಕರಿಯಾಗಿವೆ.

18 ಸಿಬ್ಬಂದಿಗೆ ಕೋವಿಡ್‌

ಜಿಲ್ಲಾ ಅಬಕಾರಿ ಇಲಾಖೆಯಲ್ಲಿ 54 ಮಂದಿ ಸಿಬ್ಬಂದಿ ಇದ್ದು, 18 ಮಂದಿ ಕೋವಿಡ್‌ಗೆ ತುತ್ತಾಗಿದ್ದಾರೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

‘ಇಲಾಖೆಯ ಮೂರನೇ ಒಂದರಷ್ಟು ಸಿಬ್ಬಂದಿಗೆ ಸೋಂಕು ತಗುಲಿದೆ. ಕಳೆದ ವರ್ಷ ಒಬ್ಬರಿಗೆ ಮಾತ್ರ ಸೋಂಕು ತಗುಲಿತ್ತು. ಈ ಬಾರಿ 18 ಮಂದಿ ಕೋವಿಡ್‌ನಿಂದ ಬಳಲಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಕೆಲಸ ಮಾಡುವುದು ಸವಾಲು. ಹೊರಗಡೆ ಕೆಲಸ ಮಾಡುವುದರಿಂದ ಎಷ್ಟೇ ಎಚ್ಚರಿಕೆ ಇದ್ದರೂ, ವೈರಸ್‌ ತಗುಲುವ ಸಾಧ್ಯತೆ ಇರುತ್ತದೆ’ ಎಂದು ಮುರಳಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT