ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮುಷ್ಕರ ನಿರತ ವೈದ್ಯರಿಗೆ ಐಎಂಎ ಬೆಂಬಲ

ವಿವಿಧ ಸಂಘಟನೆ–ಪಕ್ಷಗಳಿಂದಲೂ ಮುಷ್ಕರಕ್ಕೆ ಬೆಂಬಲ
Last Updated 2 ಡಿಸೆಂಬರ್ 2021, 4:45 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಭತ್ಯೆಗೆ ಆಗ್ರಹಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಿರಿಯ ವೈದ್ಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜಿಲ್ಲಾ ಘಟಕವು ಬುಧವಾರ ಬೆಂಬಲ ಸೂಚಿಸಿದೆ.

ನಗರದ ಹೊರವಲಯದಲ್ಲಿರುವ ಯಡಬೆಟ್ಟದ ಬೋಧನಾ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರನ್ನು ಭೇಟಿ ಮಾಡಿದ ಐಎಂಎ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಬಸವರಾಜೇಂದ್ರ ಹಾಗೂ ಇತರ ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲ ನೀಡುವ ಪತ್ರವನ್ನು ಹಸ್ತಾಂತರಿಸಿದರು.

ಐಎಂಎ ಜಿಲ್ಲಾ ಕಾರ್ಯದರ್ಶಿ ಶ್ವೇತಾ ಶಶಿಧರ್‌, ಕೇಂದ್ರ ಸಮಿತಿ ಸದಸ್ಯ ಡಾ.ಶಶಿಧರ್‌ ಕುಮಾರ್, ಸದಸ್ಯರಾದ ಡಾ.ಜಯಪಾಲ್‌ ಮತ್ತು ಡಾ.ಪದ್ಮಿನಿ ಜಯಪಾಲ್‌ ಇದ್ದರು.

ಬಿಎಸ್‌ಪಿ ಬೆಂಬಲ: ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಮುಖಂಡರು ಹಾಗೂ ಪದಾಧಿಕಾರಿಗಳು ಕೂಡ ಪ್ರತಿಭಟನಾ ಸ್ಥಳಕ್ಕೆ ತೆರಳಿ ಬೆಂಬಲ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರ ಭೇಟಿ: ಬುಧವಾರ ಸಂಜೆ ಬಿಜೆ‍‍ಪಿಯ ಮುಖಂಡರಾದ ನಿಜಗುಣರಾಜು ಹಾಗೂ ಸಿ.ಎನ್‌.ಬಾಲರಾಜು ಅವರು ಬೋಧನಾ ಆಸ್ಪತ್ರೆಗೆ ಭೇಟಿ ನೀಡಿ ಪ್ರತಿಭಟನಾ ನಿರತ ಕಿರಿಯ ವೈದ್ಯರೊಂದಿಗೆ ಮಾತುಕತೆ ನಡೆಸಿದರು. ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಕರೆ ಮಾಡಿ ಕಿರಿಯ ವೈದ್ಯರ ಒಕ್ಕೂಟದ ಅಧ್ಯಕ್ಷ ಡಾ.ಧೀಮಂತ್‌ ಅವರೊಂದಿಗೆ ಮಾತನಾಡಿಸಿದರು.

‘ನಿಮ್ಮ ಸಮಸ್ಯೆ ಗಮನಕ್ಕೆ ಬಂದಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಕ್ಷಣಕ್ಕೆ ಯಾವುದೇ ನಿರ್ಧಾರ, ಘೋಷಣೆ ಮಾಡುವುದಕ್ಕೆ ಆಗುವುದಿಲ್ಲ. ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಬಂದ ನಂತರ ಸಮಸ್ಯೆ ಇತ್ಯರ್ಥಪಡಿಸಲಾಗುವುದು’ ಎಂಬ ಭರವಸೆಯನ್ನು ಸಚಿವರು ನೀಡಿದರು ಎಂಬುದು ಗೊತ್ತಾಗಿದೆ.

ಇಂದು ರಕ್ತದಾನ: ಪ್ರತಿಭಟನೆಯ ಭಾಗವಾಗಿ ಕಿರಿಯ ವೈದ್ಯರು ಬುಧವಾರವೇ ರಕ್ತದಾನ ಶಿಬಿರ ಆಯೋಜಿಸಿದ್ದರು. ಆದರೆ, ಐಎಂಎ ಸದಸ್ಯರ ಜೊತೆಯಲ್ಲಿ ರಕ್ತದಾನ ಮಾಡಲು ನಿರ್ಧರಿಸಲಾಗಿತ್ತು. ಬುಧವಾರ ಮಧ್ಯಾಹ್ನದ ಮೇಲೆ ಐಎಂಎ ಸದಸ್ಯರು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರಿಂದ ರಕ್ತದಾನ ಸಾಧ್ಯವಾಗಿಲ್ಲ. ಗುರುವಾರ ಬೆಳಿಗ್ಗೆ ರಕ್ತದಾನ ಶಿಬಿರ ನಡೆಸುವುದಾಗಿ ಡಾ.ಧೀಮಂತ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT