ಗುಂಡ್ಲುಪೇಟೆ: ‘ಕಾರ್ಖಾನೆ ಹಾಗೂ ನಗರ ಪ್ರದೇಶಕ್ಕೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿರುವ ಸರ್ಕಾರ ರೈತರಿಗೆ ಮಾತ್ರ ಲೋಡ್ ಶೆಡ್ಡಿಂಗ್ ನೆಪವೊಡ್ಡಿ ಕಡಿತ ಮಾಡುತ್ತಿದೆ’ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಹಂಗಳಪುರ ಹಾಗೂ ಕಲ್ಲಿಗೌಡನಹಳ್ಳಿಯಲ್ಲಿ ರಾಜ್ಯ ರೈತ ಸಂಘದ ಗ್ರಾಮದ ಘಟಕ ಉದ್ಘಾಟಿಸಿದ ಅವರು, ‘ಕಾರ್ಖಾನೆ ಹಾಗೂ ನಗರ ಪ್ರದೇಶದವರು ಹಣ ಕಟ್ಟುತ್ತಾರೆ ಎಂಬ ಕಾರಣಕ್ಕೆ ವಿದ್ಯುತ್ ನೀಡುತ್ತಿದೆ. ಆದರೆ, ರೈತರ ಪಂಪ್‌ಸೆಟ್‌ಗಳ ವಿದ್ಯುತ್ ದರವನ್ನು ಸರ್ಕಾರ ಕಟ್ಟಬೇಕಾದ ಕಾರಣ ಸಮರ್ಪಕ ವಿದ್ಯುತ್ ಕೊಡಲು ಮೀನಾ –ಮೇಷ ಎಣಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರೈತ ಬೆಳೆದರೆ ಮಾತ್ರ ದೇಶದ ಜನರಿಗೆ ಅನ್ನ ಸಿಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ಸರ್ಕಾರ ನಿಗದಿಯಂತೆ ವಿದ್ಯುತ್ ನೀಡಬೇಕು. ಕಾರ್ಖಾನೆ ರಾತ್ರಿ ಕೊಟ್ಟು ರೈತರಿಗೆ ಬೆಳಿಗ್ಗೆ ಕೊಡಬೇಕು. ಚಾಮರಾಜನಗರ ಸೇರಿದಂತೆ ರಾಜ್ಯದ ಹಲವೆಡೆ ವಿದ್ಯುತ್‌ಗಾಗಿ ಅಹೋರಾತ್ರಿ ಹೋರಾಟ ಮಾಡಿದ ಫಲವಾಗಿ ಎಚ್ಚೆತ್ತ ಸರ್ಕಾರ ಒಂದೇ ಪಾಳಿಯಲ್ಲಿ ಪಂಪ್ ಸೆಟ್‍ಗಳಿಗೆ 5 ಗಂಟೆ ವಿದ್ಯುತ್ ನೀಡುವುದಾಗಿ ಒಪ್ಪಿಕೊಂಡಿದೆ. ದಸರಾ ಮುಗಿದ ನಂತರ ಈ ಹಿಂದೆ ನಿಗದಿ ಮಾಡಿದಂತೆ 7 ಗಂಟೆ ವಿದ್ಯುತ್ ನೀಡದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಸರ್ಕಾರಗಳು ಸರಿಯಾದ ರೀತಿಯಲ್ಲಿ ಬೆಂಬಲ ಬೆಲೆ ಹಾಗೂ ರೈತಪರ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ. ಇದರಿಂದ ಬೇಸತ್ತ ಅನೇಕ ರೈತರು ಜಮೀನು ಮಾರಾಟ ಮಾಡಲು ಮುಂದಾಗಿದ್ದಾರೆ. ಹಣವುಳ್ಳವರು ಲಕ್ಷಾಂತರ ರೂಪಾಯಿ ಆಮಿಷ ತೋರಿಸಿ ಜಮೀನು ಕೊಂಡು ಕೊಳ್ಳುತ್ತಿದ್ದಾರೆ. ಇದರಿಂದ ರೈತ ಕೂಲಿ ಆಳಾಗಿ ದುಡಿಯಬೇಕಾಗಿದೆ. ನಮ್ಮ ಸಮಸ್ಯೆ ಸಾಕಷ್ಟಿದ್ದರು ಕೂಡ ಸರ್ಕಾರ ಕಿವಿಗೊಡುತ್ತಿಲ್ಲ. ಜೊತೆಗೆ ರೈತ ಮಕ್ಕಳಿಗೆ ರೈತರೇ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ರೈತ ಸಂಕುಲ ಗಟ್ಟಿಯಾಗಿ ನೆಲೆಯೂರಲು ಸಮಸ್ಯೆಗಳನ್ನು ಮೆಟ್ಟಿ ನಿಂತು ಕೃಷಿ ಮಾಡಬೇಕು. ಹೆಚ್ಚಿನ ಯುವಕರು ಸಂಘಟನೆಯಲ್ಲಿ ತೊಡಗಿಕೊಂಡು ಶಕ್ತಿ ತುಂಬುವ ಕೆಲಸ ಮಾಡಬೇಕು’ ಎಂದು ಹೇಳಿದರು.
ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ, ಮಹೇಶ್ ಕುಮಾರ್, ಶಾಂತಮಲ್ಲಪ್ಪ, ತಾಲ್ಲೂಕು ಅಧ್ಯಕ್ಷ ಹಂಗಳ ದಿಲೀಪ್, ಹಂಗಳ ಮಾದು, ಶಿವಣ್ಣ, ಪಾಪಣ್ಣ, ನಾಗರಾಜು, ನಂದೀಶ್, ಪಾಪಣ್ಣ ನಾಗಶೆಟ್ಟಿ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.