ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಸಂಭ್ರಮ; ದೇಶಭಕ್ತಿಯ ಅನುರಣನ

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಕೇಸರಿ, ಬಿಳಿ ಹಸಿರು ಬಣ್ಣದಲ್ಲಿ ಮಿಂದೆದ್ದ ಜಿಲ್ಲಾ ಕ್ರೀಡಾಂಗಣ
Last Updated 15 ಆಗಸ್ಟ್ 2022, 12:17 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಸೋಮವಾರ 76ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿರುವ ಸಂದರ್ಭದಲ್ಲಿ ದೇಶದಾದ್ಯಂತ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವದ ಸಂಭ್ರಮವೂ ಈ ಬಾರಿಯ ಸ್ವಾತಂತ್ರ್ಯದ ಹಬ್ಬವನ್ನು ಕಳೆಕಟ್ಟುವಂತೆ ಮಾಡಿತು.

ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳು, ಸರ್ಕಾರಿ ಕಚೇರಿಗಳು, ವಿವಿಧ ಸಂಸ್ಥೆಗಳ ಕಚೇರಿಗಳು, ಸಂಘಟನೆಗಳು, ಶಾಲಾ ಕಾಲೇಜುಗಳಲ್ಲಿ ತ್ರಿವರ್ಣ ಧ್ವಜ ಹಾರಾಡಿತು. ಎಲ್ಲೆಲ್ಲೂ ಭಾರತ ಮಾತಾ ಕೀ ಜೈ ಘೋಷಣೆ ಮಾರ್ದನಿಸಿತು.

ಮಹಾತ್ಮಗಾಂಧಿ, ಸರ್ದಾರ್‌ ವಲಭಭಾಯಿ ಪಟೇಲ್‌, ಜವಾಹರಲಾಲ್‌ ನೆಹರೂ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರು, ಪ್ರಾಣವನ್ನೇ ತ್ಯಾಗ ಮಾಡಿದ ಹೋರಾಟದ ಕಲಿಗಳನ್ನು ಸ್ಮರಿಸಲಾಯಿತು.

ಜಿಲ್ಲಾಡಳಿತದ ವತಿಯಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸಲ್ಲಿಸಿದರು.

ಕ್ರೀಡಾಂಗಣದ ಸುತ್ತಲೂ ತೆರೆದ ವಾಹನದಲ್ಲಿ ಸಾಗಿ ಪಥಸಂಚಲನಕ್ಕೆ ಸಿದ್ಧವಾಗಿದ್ದ ವಿವಿಧ ತುಕಡಿಗಳ ಪರಿವೀಕ್ಷಣೆ ಮಾಡಿದರು.

ಪೊಲೀಸ್‌, ಅರಣ್ಯ, ಗೃಹರಕ್ಷಕ ದಳ, ಅಬಕಾರಿ, ಅಗ್ನಿಶಾಮಕ ದಳ, ಎನ್‌ಸಿಸಿ, ಸ್ಕೌಟ್ಸ್‌ ಅಂಡ್‌ ಗೈಡ್ಸ್‌, ವಿವಿಧಾ ಶಾಲಾ ತುಕಡಿಗಳಿಂದ ಸಚಿವರು ಗೌರವ ವಂದನೆ ಸ್ವೀಕರಿಸಿದರು. ಬಳಿಕ ಜಿಲ್ಲೆಯ ಜನತೆಗೆ 76ನೇ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧೀಜಿ ಸೇರಿದಂತೆ ಇತರೆ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ವೇದಿಕೆ ಕಾರ್ಯಕ್ರಮದಲ್ಲಿ ಆರ್ಚರಿ, ಫೆನ್ಸಿಂಗ್‌ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು. ಫಲಾನುಭವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು. ಆಯುಷ್ಮಾನ್‌ ಭಾರತ್‌ ಅನುಷ್ಠಾನದಲ್ಲಿ ಉತ್ತಮ ಸಾಧನೆ ಮಾಡಿದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತ ವರ್ಗಕ್ಕೆ ಪ್ರಮಾಣಪತ್ರ ವಿತರಿಸಲಾಯಿತು.

ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಎಸ್‌ಪಿ ಟಿ.ಪಿ.ಶಿವಕುಮಾರ್‌, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ದೀಪ್‌ ಜೆ.ಕಂಟ್ರ್ಯಾಕ್ಟರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಎಎಸ್‌ಪಿ ಕೆ.ಎಸ್‌.ಸುಂದರ್‌ರಾಜ್‌, ನಗರಸಭಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ದೇಶಭಕ್ತಿಯ ವಿರಾಟ್‌ ದರ್ಶನ

ಕೋವಿಡ್‌ ಹಾವಳಿಯಿಂದಾಗಿ ಎರಡು ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಮಾತ್ರ ಸೀಮಿತವಾಗಿತ್ತು. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಪಾಲ್ಗೊಳ್ಳುವಿಕೆಗೆ ಅವಕಾಶ ಇರಲಿಲ್ಲ. ಹೀಗಾಗಿ, ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿಲ್ಲ.

ಈ ಬಾರಿ ಕೋವಿಡ್‌ ಸಮಸ್ಯೆ ಹೆಚ್ಚಿಲ್ಲದಿದ್ದುದರಿಂದ ಹಾಗೂ ಅಮೃತ ಮಹೋತ್ಸವದ ಅಂಗವಾಗಿ ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಹಾಗಾಗಿ, ನಗರದ ವಿವಿಧ ಶಾಲೆಗಳ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರು ಕ್ರೀಡಾಂಗಣದಲ್ಲಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಇಡೀ ಕ್ರೀಡಾಂಗಣ ಕೇಸರಿ, ಬಿಳಿ ಹಸಿರು ಬಣ್ಣಗಳಿಂದ ಕಂಗೊಳಿಸುತ್ತಿತ್ತು.

ನಗರದ ಐದು ಶಾಲೆಗಳ ನೂರಾರು ವಿದ್ಯಾರ್ಥಿಗಳು ಗಣ್ಯರು ಹಾಗೂ ಸಾವಿರಾರು ಜನರ ಮುಂದೆ ದೇಶಭಕ್ತಿ, ಸ್ವಾತಂತ್ರ್ಯದ ಹೋರಾಟದ ಕಥೆಗಳನ್ನು ಸಾರುವ, ಜಿಲ್ಲೆ ಹಾಗೂ ರಾಜ್ಯದ ವೀರ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಪ್ರದರ್ಶನ ಮಾಡಿದ್ದು ನೋಡುಗರ ಗಮನಸೆಳೆಯಿತು. ಸಚಿವ ವಿ.ಸೋಮಣ್ಣ ಸೇರಿದಂತೆ ಸೇರಿದ್ದ ಗಣ್ಯರು, ಮುಖಂಡರು, ಜನರು ಕರತಾಡನದ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.

ನಗರದಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆ, ಸೋಮವಾರ ‌ಪೇಟೆಯ ಯೂನಿವರ್ಸಲ್‌ ಇಂಗ್ಲಿಷ್‌ ಮಾಧ್ಯಮ ಶಾಲೆ‌, ಸೇವಾ ಭಾರತಿ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗ, ಸಂತ ಜೋಸೆಫರ ಪ್ರೌಢ ಶಾಲೆಯ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು.

ಗಮನ ಸೆಳೆದ ಕರಾಟೆ ಪ್ರದರ್ಶನ

ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ ಯೋಜನೆ ಅಡಿಯಲ್ಲಿ ತರಬೇತಿ ಪಡೆದಿರುವ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ವಿದ್ಯಾರ್ಥಿನಿಯರು ಕರಾಟೆ ಪ್ರದರ್ಶನ ನೀಡಿದ್ದು ಗಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT