ಸೋಮವಾರ, ಆಗಸ್ಟ್ 2, 2021
26 °C
ಬದನಗುಪ್ಪೆ–ಕೆಲ್ಲಂಬಳ್ಳಿಯಲ್ಲಿ 31 ಕೈಗಾರಿಕೆ ಸ್ಥಾಪನೆ: ಏಕಗವಾಕ್ಷಿ ಸಮಿತಿ ಒಪ್ಪಿಗೆ

118 ಎಕರೆಯಲ್ಲಿ ಕೈಗಾರಿಕಾ ಉಪ ಬಡಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ಬದನಗುಪ್ಪೆ – ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 31 ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲಾ ಮಟ್ಟದ ಏಕಗಾವಕ್ಷಿ ಸಮಿತಿ ಅನುಮೋದನೆ ನೀಡಿದೆ. 

ಜೊತೆಗೆ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನಿವೇಶನ ಒದಗಿಸುವುದಕ್ಕಾಗಿ 118.44 ಎಕರೆ ವ್ಯಾಪ್ತಿಯಲ್ಲಿ ಕೈಗಾರಿಕಾ ಉಪ ಬಡಾವಣೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಏಕಗವಾಕ್ಷಿ ಸಮಿತಿ ನಿರ್ಧರಿಸಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಮಿತಿ ಸಭೆಯಲ್ಲಿ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆ ಹುಟ್ಟುಹಾಕಿದೆ. 

ಬದನಗುಪ್ಪೆ – ಕೆಲ್ಲಂಬಳ್ಳಿಯಲ್ಲಿ 1,400 ಎಕರೆಗಳಷ್ಟು ಪ್ರದೇಶದಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಲಾಗಿದೆ. ಆದರೆ, ಈವರೆಗೆ ಬೆರಳೆಣಿಕೆಯಷ್ಟು ಉದ್ದಿಮೆಗಳು ಮಾತ್ರ ಇಲ್ಲಿಗೆ ಬಂದಿವೆ. ನೀರು ಹಾಗೂ ಇನ್ನಿತರ ಮೂಲ ಸೌಕರ್ಯಗಳ ಕೊರತೆಯ ಕಾರಣಕ್ಕೆ ಕೈಗಾರಿಕೆಗಳು ಬರಲು ಹಿಂದೇಟು ಹಾಕುತ್ತಿದ್ದವು.  

ಕೆಲವು ತಿಂಗಳ ಹಿಂದೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರು ಕೂಡ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ, ಕೈಗಾರಿಕೆಗಳು ಬರುವಂತೆ ಮಾಡಲು ಏನು ಮಾಡಬಹುದು ಎಂಬುದನ್ನು ಚರ್ಚಿಸಿತ್ತು. ಇತ್ತೀಚೆಗೆ ಭೂ ಹಂಚಿಕೆಗೆ ಮನವಿ ಮಾಡಿ 162 ಅರ್ಜಿಗಳು ಬಂದಿದ್ದವು. ಇವುಗಳಲ್ಲಿ 31 ಉದ್ದಿಮೆದಾರರನ್ನು ಆಯ್ಕೆ ಮಾಡಿ ಅವರಿಗೆ ನಿವೇಶನ ಹಂಚಲು ಏಕಗವಾಕ್ಷಿ ಸಮಿತಿ ಅನುಮೋದನೆ ನೀಡಿದೆ.

₹55 ಕೋಟಿ ಬಂಡವಾಳ: ಹೊಸ ಕೈಗಾರಿಕೆ ಹಾಗೂ ಈ ಹಿಂದೆ ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಅನುಮತಿ ನೀಡಿರುವುದರಿಂದ ಕೈಗಾರಿಕಾ ಪ್ರದೇಶದಲ್ಲಿ ನಾನಾ ಉದ್ಯಮಗಳು ₹ 55 ಕೋಟಿ ಬಂಡವಾಳ ಹೂಡಲಿವೆ. ಜವಳಿ, ಆಹಾರ ಸಂಸ್ಕರಣೆ, ಸ್ಟೋನ್ ಕಟ್ಟಿಂಗ್ ಹಾಗೂ ಪಾಲಿಶಿಂಗ್, ಪ್ಯಾಕೇಜಿಂಗ್ ಕೈಗಾರಿಕೆಗಳು ಸೇರಿದಂತೆ ಹಲವು ಘಟಕಗಳು ಆರಂಭವಾಗಲಿದೆ. 

ಇದುವರೆವಿಗೂ 233 ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 10 ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ರಾಜ್ಯ ಮಟ್ಟದಲ್ಲಿ ಒಪ್ಪಿಗೆ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ 100ಕ್ಕೂ ಹೆಚ್ಚು ಕೈಗಾರಿಕೆ ಉದ್ಯಮಿಗಳಿಗೂ ಕೈಗಾರಿಕಾ ನಿವೇಶನ ಹಂಚಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಉದ್ಯಮಿಗಳಿಗೆ ಶೇ.75 ರಷ್ಟು ಸಹಾಯಧನ ಒದಗಿಸಲಾಗುತ್ತಿದೆ.

800 ಮಂದಿಗೆ ‌ಉದ್ಯೋಗ: ‘31 ಹೊಸ ಕೈಗಾರಿಕೆಗಳ ಘಟಕಗಳ ಸ್ಥಾಪನೆಗೆ ನಿವೇಶನ ಹಂಚಿಕೆ ಮಾಡಲು ಅನುಮತಿ ನೀಡಿರುವುದರಿಂದ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಲಿವೆ. ಸುಮಾರು 800 ಜನರಿಗೆ ಉದ್ಯೋಗ ಅವಕಾಶಗಳು ಲಭಿಸುವ ನಿರೀಕ್ಷೆ ಇದೆ. ಇದರಿಂದ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಹೊಸ ಆಯಾಮ ಸಿಗಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದ್ದಾರೆ.

ಸಣ್ಣ ಉದ್ಯಮಿಗಳಿಗೆ ನೆರವು

ಕೈಗಾರಿಕಾ ಪ್ರದೇಶದಲ್ಲಿ ಚಿಕ್ಕದಾದ ಪ್ಲಾಟ್‍ಗಳನ್ನು ಹಂಚಿಕೆ ಮಾಡಲು ಕೋರಿ ಸಾಕಷ್ಟು ಅರ್ಜಿಗಳು ಸಲ್ಲಿಕೆ ಆಗಿದ್ದವು. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಉದ್ಯಮಿಗಳು ಸಣ್ಣ ಪ್ರಮಾಣದ ಕೈಗಾರಿಕಾ ಪ್ಲಾಟ್‍ಗಳನ್ನು ನೀಡುವಂತೆ ಮನವಿ ಸಲ್ಲಿಸಿದ್ದರು.

ಸಚಿವ ಶೆಟ್ಟರ್‌ ಅವರು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ, ಚಿಕ್ಕ ಪ್ಲಾಟ್‍ಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ರಿಯಾಯಿತಿ ದರದಲ್ಲಿ ಒದಗಿಸುವ ಸಲುವಾಗಿ ಕೈಗಾರಿಕಾ ಸಬ್ ಲೇಔಟ್ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಮನವಿ ಮಾಡಿದ್ದರು. ಸಣ್ಣ ಉದ್ದಿಮೆದಾರರು ಕೂಡ ಇದೇ ಮಾನವಿ ಮಾಡಿದ್ದರು. ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಇದರ ಮುಂದುವರಿದ ಭಾಗವಾಗಿ ಈಗ, ಪರಿಶಿಷ್ಟರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸಣ್ಣ ಪ್ರಮಾಣದ ಅಂದರೆ, ಕಾಲು, ಅರ್ಧ, ಮುಕ್ಕಾಲು, ಒಂದು ಮತ್ತು ಎರಡು ಎಕರೆ ವಿಸ್ತೀರ್ಣದ ಪ್ಲಾಟ್‍ಗಳನ್ನು ಹಂಚಿಕೆ ಮಾಡಲು 118.44 ಎಕರೆ ಜಮೀನಿನಲ್ಲಿ ಕೈಗಾರಿಕಾ ಉಪ ಬಡಾವಣೆ ನಿರ್ಮಾಣ ಮಾಡಲು ಅನುಮೋದನೆ ದೊರತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು