ಸೋಮವಾರ, ಜನವರಿ 17, 2022
19 °C
ಕೊಳ್ಳೇಗಾಲ: ರಸ್ತೆಗಳಿಗೆ ಚಾಚಿದ ಕಳೆ ಗಿಡಗಳು, ಎಚ್ಚರಿಕೆ ಫಲಕ ಅಳವಡಿಸಲು ಆಗ್ರಹ

ಇರದ ಸೂಚನಾ ಫಲಕ; ಅಪಾಯಕಾರಿ ಸಂಚಾರ

ಅವಿನ್ ಪ್ರಕಾಶ್ .ವಿ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ನಗರ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಸೂಚನಾ ಫಲಕಗಳು ಇಲ್ಲದಿರುವುದರಿಂದ ವಾಹನ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. 

ತಾಲ್ಲೂಕಿನಲ್ಲಿ ಪ್ರತಿ ದಿನ ಎಲ್ಲಿಯಾದರೂ ಅಪಘಾತ ನಡೆದಿರುವ ಬಗ್ಗೆ ವರದಿಯಾಗುತ್ತಿರುತ್ತದೆ. ಜೀವ ಹಾನಿ ಸಂಭವಿಸದಿದ್ದರೂ, ಜನರು ಗಾಯಗೊಳ್ಳುತ್ತಿದ್ದಾರೆ. ರಸ್ತೆಗಳಲ್ಲಿ ಸೂಚನಾ ಫಲಕಗಳು ಇಲ್ಲದೇ ಇರುವುದರಿಂದ ರಸ್ತೆಯಲ್ಲಿ ಸಂಚರಿಸುವ ಹೊಸಬರು ಹೆಚ್ಚಾಗಿ ಅಫಘಾತಕ್ಕೆ ಒಳಗಾಗುತ್ತಿದ್ದಾರೆ. 

ರಸ್ತೆಗಳಲ್ಲಿ ಈ ಹಿಂದೆ ಸೂಚನಾ ಫಲಕಗಳಿದ್ದವು. ಬಹುತೇಕ ಕಡೆಗಳಲ್ಲಿ ಈ ಫಲಕಗಳನ್ನು ರಸ್ತೆ ಕಾಮಗಾರಿ ಮಾಡುವಾಗ ತೆರವುಗೊಳಿಸಿದ್ದಾರೆ. ಮತ್ತೆ ಅವುಗಳನ್ನು ಅಳವಡಿಸುವ ಕೆಲಸ ಆಗಿಲ್ಲ. 

ಬೆಂಗಳೂರು ರಸ್ತೆ, ಮೈಸೂರು ರಸ್ತೆ, ಚಾಮರಾಜನಗರ ರಸ್ತೆ, ಮಹದೇಶ್ವರ ಬೆಟ್ಟದ ರಸ್ತೆಗಳಲ್ಲಿ ಕೆಲವೇ ಕಡೆಗಳಲ್ಲಿ ಮಾತ್ರ ಸೂಚನಾ ಫಲಕ ಹಾಕಿದ್ದಾರೆ. ಇವು ಕೂಡ ಐದಾರು ವರ್ಷಗಳಷ್ಟು ಹಳೆಯದಾಗಿದ್ದು, ಬಣ್ಣ ಮಾಸಿ ಹೋಗಿದೆ.

ರಸ್ತೆಗೆ ಚಾಚಿದ ಜಾಲಿ ಗಿಡಗಳು: ತಾಲ್ಲೂಕಿನ ತೇರಂಬಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ದಾರಿ ಯುದ್ದಕ್ಕೂ ಜಾಲಿ ಗಿಡಗಳು ಆಳೆತ್ತರದಂತೆ ರಸ್ತೆಯತ್ತ ಚಾಚಿವೆ. ತಿರುವಿನಲ್ಲಿ ರಸ್ತೆಯ ಮುನ್ನೋಟವನ್ನು ಸಂಪೂರ್ಣವಾಗಿ ಇದು ಮರೆಮಾಚುತ್ತಿದೆ. 

ಕಳೆ ಗಿಡಗಳಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸುವುದು ಕಷ್ಟವಾಗಿದೆ. ಸೂಚನಾ ಫಲಕಗಳು ಇಲ್ಲದಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೊಂದು ಕಡೆ ರಸ್ತೆಗಳು ಹದಗೆಟ್ಟಿದ್ದು ಹಳ್ಳ ಕೊಳ್ಳಗಳಿಂದ ಕೂಡಿದೆ. ಹೀಗಾಗಿ ರಸ್ತೆಯಲ್ಲಿನ ಸಂಚಾರ ಕಷ್ಟಕರವಾಗಿದೆ’ ಎಂದು ಪ್ರಯಾಣಿಕ ಮಹಮ್ಮದ್ ಉಬೇದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಗ್ರಾಮೀಣ ರಸ್ತೆಗಳ ಸ್ಥಿತಿಯೂ ಉತ್ತಮವಾಗಿಲ್ಲ. ತಿರುವು ರಸ್ತೆಗಳು, ರಸ್ತೆ ಪಕ್ಕದಲ್ಲಿ ದೊಡ್ಡ ತಗ್ಗುಗಳು, ತೋಟದ ಬಾವಿ, ಕೆರೆಗಳಿರುವ ಸ್ಥಳಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸಿಲ್ಲ. ಇದರಿಂದಾಗಿ ಅಪಘಾತದ ಅಪಾಯ ಹೆಚ್ಚು. ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ಬೆಳೆದು ನಿಂತಿರುವ ಗಿಡ ಗಂಟಿಗಳಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ತೆರವುಗೊಳಿಸುವ ಕಾರ್ಯವಾಗಬೇಕು’ ಎಂದು ತೇರಂಬಳ್ಳಿ ಗ್ರಾಮದ ಸದಸ್ಯ ಪುರುಷೋತ್ತಮ ಅವರು ಹೇಳಿದರು. 

ಸಂಚಾರ ನಿಯಮ ಪಾಲಿಸಲು ಜಾಗೃತಿ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಶಿವರಾಜ್ ಆರ್.ಮುಧೋಳ್ ಅವರು, ‘ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದು ಮತ್ತು ರಸ್ತೆ ಬದಿಯಲ್ಲಿ ಬೆಳೆದಿರುವ ಕಳೆಗಿಡಗಳನ್ನು ತೆರವುಗೊಳಿಸುವ ಕೆಲಸವನ್ನು ಸಂಬಂಧಿಸಿದ ಇಲಾಖೆಗಳು ಮಾಡಬೇ‌ಕು. ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಪ್ಪಿಸಬಹುದು. ರಸ್ತೆ ಸುರಕ್ಷತಾ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದರು.

‘ತಿರುವುಗಳಲ್ಲಿ ಸವಾರರು ನಿಧಾನವಾಗಿ ವಾಹನಗಳನ್ನು ಚಲಿಸಬೇಕು. ಹೆಲ್ಮೆಟ್, ಸೀಟ್‍ಬೆಲ್ಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಜಾಗೃತಿ ಮೂಡಿಸಲಾಗುವುದು’ ಎಂದರು.

–––

ರಸ್ತೆಗಳಲ್ಲಿ ಸಮರ್ಪಕವಾಗಿ ಸೂಚನ ಫಲಕಗಳು ಇಲ್ಲದೆ, ಸವಾರರು ದಿಕ್ಕು ತಪ್ಪುತ್ತಿದ್ದಾರೆ. ಸಂಬಂಧಿಸಿದ ಇಲಾಖೆಗಳು ಸೂಚನೆ, ಎಚ್ಚರಿಕೆ ಫಲಕ ಅಳವಡಿಸಲು ಕ್ರಮವಹಿಸಬೇಕು
ಗೌರವ್, ಸವಾರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.