ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅಂತರರಾಜ್ಯ ಬಸ್‌ ರದ್ದತಿಯಿಂದ ಕಡಿದ ಸಂಪರ್ಕ

ಜಿಲ್ಲೆಯ ಗಡಿ ಭಾಗಗಳಲ್ಲಿ ಸಂಚರಿಸುತ್ತಿಲ್ಲ ಸರ್ಕಾರಿ, ಖಾಸಗಿ ಬಸ್‌ಗಳು
Last Updated 21 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೊರೊನಾ ವೈರಸ್‌ನ ಹರಡುವಿಕೆ ನಿಯಂತ್ರಿಸುವ ಯತ್ನವಾಗಿ ಜಿಲ್ಲೆಯಿಂದ ತಮಿಳುನಾಡು ಹಾಗೂ ಕೇರಳಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್‌ ಹಾಗೂ ಖಾಸಗಿ ಬಸ್‌ಗಳ ಸಂಚಾರ ರದ್ದುಗೊಂಡಿರುವುದರಿಂದ ಗಡಿ ಭಾಗದ ಜನಸಾಮಾನ್ಯರ ಸಂಪರ್ಕ ಕೊಂಡಿ ಕಳಚಿದಂತಾಗಿದೆ.

ಗುಂಡ್ಲುಪೇಟೆ ತಾಲ್ಲೂಕು ಕೇರಳ ಮತ್ತು ತಮಿಳುನಾಡಿನೊಂದಿಗೆ ಸಂಬಂಧ ಇಟ್ಟುಕೊಂಡಿದೆ. ಈರೋಡ್ ಜಿಲ್ಲೆ, ಊಟಿ ಮತ್ತು ಕೇರಳದ ವಯನಾಡು ಜಿಲ್ಲೆಯಲ್ಲಿ ಹೆಚ್ಚು ಕನ್ನಡಿಗರು ಇರುವುದರಿಂದ ಸಂಬಂಧಗಳು ಬೆಸೆದುಕೊಂಡಿವೆ. ಸಂಪರ್ಕ ಕಡಿತದಿಂದ ತಮ್ಮ ಮಕ್ಕಳನ್ನು ನೋಡಲು ಪೋಷಕರಿಗೆ ತೊಂದರೆಯಾಗುತ್ತಿದೆ.

ದಿನನಿತ್ಯ ತಮಿಳುನಾಡಿನ ಊಟಿಗೆ ಮತ್ತು ವಯನಾಡು ಪ್ರದೇಶಕ್ಕೆ ಜಿಲ್ಲೆಯಿಂದ 20 ಬಸ್‌ಗಳು ಸಂಚಾರ ಮಾಡುತ್ತಿದ್ದವು. ಊಟಿಯಲ್ಲಿ ಮಾರ್ಚ್‌ 31ರವರೆಗೆ ಎಲ್ಲ ಪ್ರವಾಸಿ ತಾಣಗಳು ಮತ್ತು ಹೊಟೇಲ್, ರೆಸಾರ್ಟ್‌ಗಳನ್ನು ಮುಚ್ಚಲಾಗಿದೆ. ಜೊತೆಗೆ ಹೊರ ರಾಜ್ಯದ ಬಸ್‌ಗಳಿಗೂ ನಿರ್ಬಂಧ ಹೇರಲಾಗಿದೆ. ಇದರಿಂದ ಗುಂಡ್ಲುಪೇಟೆ ತಾಲ್ಲೂಕಿನ ಸುತ್ತಮುತ್ತಲಿನ ಜನ ಊಟಿ, ಗೂಡಲೂರು, ಮೆಟ್ಟುಪಾಳ್ಯಂ, ಕೇರಳದ ಬತ್ತೆರಿ ಹೋಗಲು ಪರದಾಡುತ್ತಿದ್ದಾರೆ. ಸ್ವಂತ ವಾಹನಗಳು ಇರುವವರಿಗೆ ಈ ಸಮಸ್ಯೆ ಇಲ್ಲ, ಬಡವರಿಗೆ ಸಾರಿಗೆ ಇಲ್ಲದಿರುವುದು ತೊಂದರೆ ಆಗುತ್ತಿದೆ.

‘ಕಳೆದ ವಾರ ಮಕ್ಕಳನ್ನು ನೋಡಲು ಬೆಂಗಳೂರಿಗೆ ಹೋಗಿದ್ದೆ. ಬರುವಾಗ ಬಸ್ ಇಲ್ಲ ಎಂದು ಗೊತ್ತಾಯಿತು. ಹಾಗಾಗಿ ಗುಂಡ್ಲುಪೇಟೆಯಲ್ಲಿರುವ ನೆಂಟರ ಮನೆಯಲ್ಲಿ ತಂಗಿದ್ದೇವೆ’ ಎಂದು ಮಹಿಳೆಯೊಬ್ಬರು ಸಮಸ್ಯೆಯನ್ನು ಹೇಳಿಕೊಂಡರು.

ಹಿಂದೆ ಕಾವೇರಿ ನೀರಿನ ಗಲಾಟೆ ಸಂದರ್ಭದಲ್ಲಿ ಬಸ್‌ಗಳ ಸಂಚಾರ ಬಂದ್‌ ಆಗಿತ್ತು. ಆದರೆ, ಗಡಿ ಭಾಗದವರೆಗೂ ಬಸ್‌ ವ್ಯವಸ್ಥೆ ಇರುತ್ತಿತ್ತು. ಅಲ್ಲಿಂತ ಆಯಾ ರಾಜ್ಯಗಳ ಬಸ್‌ ಮೂಲಕ ಸಂಚಾರ ಮಾಡುತ್ತಿದ್ದರು.

ಕೂಲಿ ಕಾರ್ಮಿಕರಿಗೆ ತೊಂದರೆ: ತಾಲ್ಲೂಕಿನ ಅನೇಕರು ಕೂಲಿ ಕೆಲಸಗಳಿಗೆ ಕೇರಳ ಮತ್ತು ತಮಿಳುನಾಡನ್ನು ಆಶ್ರಯಿಸಿದ್ದಾರೆ. ಬಸ್ ಸಂಚಾರ ಇಲ್ಲದಿರುವುದು ಇವರ ದುಡಿಮೆಯ ಮೇಲೂ ಪರಿಣಾಮ ಬೀರಿದೆ. ಗುಂಡ್ಲುಪೇಟೆ ಡಿಪೋದಿಂದ ಊಟಿ, ಕೊಯಮತ್ತೂರು, ತ್ರಿಶ್ಶೂರ್ಗಡೊ, ವಯನಾಡಿಗೆ ಸಂಚಾರ ಮಾಡುತ್ತಿದ್ದ ಬಸ್‌ಗಳು ಮೈಸೂರಿಗೆ ಸಂಚರಿಸುತ್ತಿವೆ.

ಇಲ್ಲಿಯೂ ಪ್ರಯಾಣಿಕರ ಕೊರತೆ:‘ಪ್ರತಿ ದಿನ ಅಂತರರಾಜ್ಯಕ್ಕೆ ಸುಮಾರು 10 ಬಸ್‌ಗಳುಸಂಚಾರಿಸುತ್ತಿದ್ದವು. ಎಲ್ಲ ಬಸ್‌ಗಳು ಈಗ ಮೈಸೂರು, ಚಾಮರಾಜನಗರ, ಬೆಂಗಳೂರಿನ ಕಡೆಗೆ ಸಂಚಾರಕ್ಕೆಬಳಸಿಕೊಳ್ಳಲಾಗುತ್ತಿದೆ. ವೈರಸ್‌ನ ಪ್ರಭಾವದಿಂದ ಅಲ್ಲಿಗೂ ಪ್ರಯಾಣಿಕರ ಕೊರತೆ ಎದುರಾಗಿದೆ’ ಎಂದುಕೆಎಸ್ಆರ್‌ಟಿಸಿವ್ಯವಸ್ಥಾಪಕ ಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗಡಿಭಾಗದಲ್ಲಿ ನಿಗಾ

ಈ ಮಧ್ಯೆ, ಬಸ್‌ ಸಂಚಾರ ಬಂದ್‌ ಆಗಿರುವುದರಿಂದ ಗಡಿ ಭಾಗಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಖಾಸಗಿ, ಟೂರಿಸ್ಟ್‌ ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ.

ಚಾಮರಾಜನಗರ ತಾಲ್ಲೂಕಿನ ಪುಣಜನೂರು, ಗುಂಡ್ಲುಪೇಟೆ ಹಾಗೂ ಹನೂರು ತಾಲ್ಲೂಕುಗಳ ಗಡಿ ಭಾಗಗಳಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.

ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿಯೊಂದು ವಾಹನದಲ್ಲಿರುವ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT