ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗ ಊನಕ್ಕೆ ಸೋಲದವರು...ಜೀವನ ಗೆದ್ದವರು

Last Updated 2 ಡಿಸೆಂಬರ್ 2021, 16:23 IST
ಅಕ್ಷರ ಗಾತ್ರ

ಚಾಮರಾಜನಗರ: ಚಿಕ್ಕಂದಿನಲ್ಲಿ ಪೋಲಿಯೊ ಬಂದು ಎಡಕಾಲಿನ ಶಕ್ತಿಯನ್ನು ಕಳೆದುಕೊಂಡ, ಕೊಳ್ಳೇಗಾಲ ತಾಲ್ಲೂಕಿನ ಕೊಂಗರಹಳ್ಳಿಯ ಚೆನ್ನಂಜಮ್ಮ ಅವರು ಅಂಗವೈಕಲ್ಯಕ್ಕೆ ಕೊರಗದೆ ಬದುಕನ್ನು ಧೈರ್ಯವಾಗಿ ಎದುರಿಸುತ್ತಿರುವ ದಿಟ್ಟೆ.

10ನೇ ತರಗತಿಯವರೆಗೆ ಓದಿರುವ 36 ವರ್ಷದ ಚೆನ್ನಂಜಮ್ಮ, ಟೈಲರಿಂಗ್‌ನಲ್ಲಿ ಪಳಗಿದ ಕೈ. ಕಾಮಗೆರೆಯಲ್ಲಿ ಸ್ವಂತ ಅಂಗಡಿ ಇಟ್ಟು, ಹಲವು ಮಕ್ಕಳಿಗೆ ಟೈಲರಿಂಗ್‌ ತರಬೇತಿ ನೀಡಿ ಸ್ವಾವಲಂಬಿಯಾಗಿ ಬದುಕುತ್ತ, ತಾಯಿಯ ಬದುಕಿಗೂ ಆಧಾರವಾಗಿರುವ ಮಹಿಳೆ.

ಇದುವರೆಗೂ 50ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರಿಗೆ ಬಟ್ಟೆ ಹೊಲಿಯುವ ತರಬೇತಿ ನೀಡಿದ್ದಾರೆ. ಸದ್ಯ 10 ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಪ್ರತಿ ಮಕ್ಕಳಿಂದ ₹150 ಶುಲ್ಕ ಪಡೆಯುತ್ತಾರೆ. ಅದರ ಜೊತೆಗೆ ಶರ್ಟ್‌, ಪ್ಯಾಂಟು ಬಿಟ್ಟು ಉಳಿದೆಲ್ಲ ಬಟ್ಟೆಗಳನ್ನು ಹೊಲಿಯುತ್ತಾರೆ. ಎಡಗಾಲಿನಲ್ಲಿ ಶಕ್ತಿ ಇಲ್ಲದಿರುವುದರಿಂದ ಬಲಗಾಲಿನಲ್ಲಿ ಮಾತ್ರ ಹೊಲಿಯುವ ಯಂತ್ರ ತುಳಿಯುತ್ತಾರೆ. ಮಳಿಗೆಯ ಪಕ್ಕದಲ್ಲಿರುವ ಹೋಲಿಕ್ರಾಸ್‌ ಆಸ್ಪತ್ರೆ, ಅಲ್ಲಿನ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಬಟ್ಟೆ ಹೊಲಿದುಕೊಡುತ್ತಾರೆ. ಸರ್ಕಾರದಿಂದ ಅಂಗವೈಕಲ್ಯ ಮಾಸಾಶನ ಸಿಗುತ್ತಿದೆ. ಇ‌ದುವೇ ಚೆನ್ನಂಜಮ್ಮ ಅವರ ಸಂಪಾದನೆಯ ಮೂಲ. ಅಂಗವಿಕಲರಿಗಾಗಿ ದುಡಿಯುವ ಮಾರ್ಗದರ್ಶಿ, ಹೋಲಿಕ್ರಾಸ್‌, ಸ್ಥಳೀಯ ಗ್ರಾಮ ಪಂಚಾಯಿತಿ, ಸ್ಥಳೀಯರು ಅವರಿಗೆ ಬೆಂಬಲ ನೀಡಿದ್ದಾರೆ.

’ಪೋಲಿಯೊ ಬಂದು ಚಿಕ್ಕಂದಿನಲ್ಲೇ ಎಡಕಾಲಿನ ಶಕ್ತಿ ಕಳೆದುಕೊಂಡೆ. ತಂದೆ ತಾಯಿ ಎಸ್ಸೆಸ್ಸೆಲ್ಸಿವರೆಗೂ ಓದಿಸಿದರು. 2000ದಲ್ಲಿ ಹೋಲಿಕ್ರಾಸ್‌ ಸಂಸ್ಥೆ ನಡೆಸುವ ಟೈಲರಿಂಗ್‌ ತರಬೇತಿಗೆ ಸೇರಿದೆ. ಎರಡು ವರ್ಷ ಹೊಲಿಗೆ ಕಲಿತು. ಅಲ್ಲಿಯೇ ಐದು ವರ್ಷ ಕೆಲಸ ಮಾಡಿದೆ. 2008ರಲ್ಲಿ ಹೋಲಿಕ್ರಾಸ್‌ ಆಸ್ಪತ್ರೆ ಬಳಿಯಲ್ಲಿರುವ ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡದಲ್ಲಿ ಟೈಲರಿಂಗ್‌ ಅಂಗಡಿ ತೆರೆದೆ. ಅಂದಿನಿಂದ ಆಸಕ್ತರಿಗೆ ಟೈಲರಿಂಗ್‌ ಹೇಳಿಕೊಡುತ್ತಿದ್ದೇನೆ. ಗ್ರಾಹಕರಿಗೆ ಬಟ್ಟೆ ಹೊಲಿದುಕೊಡುತ್ತಿದ್ದೇನೆ. 2014ರಲ್ಲಿ ತಂದೆ ತೀರಿ ಹೋದರು. ಆ ಬಳಿಕ ಅಮ್ಮನ ಜವಾಬ್ದಾರಿಯನ್ನೂ ನಾನೇ ನೋಡಿಕೊಳ್ಳುತ್ತಿದ್ದೇನೆ. ಎಲ್ಲರ ಬೆಂಬಲದಿಂದ ತಕ್ಕಮಟ್ಟಿಗೆ ಸಂಪಾದನೆ ಆಗುತ್ತಿದೆ. ಜೀವನವೂ ನಡೆಯುತ್ತಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಚೆನ್ನಂಜಮ್ಮ.

ವಜ್ರಮಣಿ: ಅಂಗವಿಕಲರ ಆಶಾಕಿರಣ

ಯಳಂದೂರು: ತಾಲ್ಲೂಕಿನ ಮೆಲ್ಲಹಳ್ಳಿ ಗ್ರಾಮದ ವಾಮನ ಮೂರ್ತಿ ವಜ್ರಮಣಿ. ಸದಾ ಲವಲವಿಕೆಯ ವ್ಯಕ್ತಿತ್ವ. ಅಶಕ್ತರ ಮತ್ತು ಅಂಗವಿಕಲರ ಸೇವೆಗೆ ಸದಾ ತುಡಿಯುವ ಮನಸ್ಸು. ಹಾಗಾಗಿ ಜಿಲ್ಲೆಯ ಹಲವು ಸ್ವಯಂಸೇವಾ ಸಂಘಗಳಲ್ಲಿ ತೊಡಗಿಸಿಕೊಂಡು ನೂರಾರು ಜನರಿಗೆ ನೆರವಾಗಿದ್ದಾರೆ.

ಪ್ರಸ್ತುತ ಕೆಸ್ತೂರು ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರ ಪುನರ್ವಸತಿ ಕಾರ್ಯಕರ್ತೆಯಾಗಿ ಹಾಗೂ ಜಿಲ್ಲಾ ಅಂಗವಿಕಲರ ಸಂಘದ ಕಾರ್ಯದರ್ಶಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ನೆರವಿಗಾಗಿ ಹಂಬಲಿಸುವ ಗ್ರಾಮೀಣ ಭಾಗದ ಅಂಗವಿಕಲರಿಗೆ ಮಾಹಿತಿ ನೀಡುವುದು ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಅಂಗವಿಕಲರಿಗೆ ಸಿಗುವ ಸೌಲಭ್ಯಗಳನ್ನು ಕಲ್ಪಿಸುವುದು, ಗರ್ಭಿಣಿಯರಿಗೆ, ವೃದ್ಧಾಪ್ಯದಲ್ಲಿ ಇರುವವರಿಗೆ ನೆರವಾಗುವ ಕಾಯಕವನ್ನು ವಜ್ರಮಣಿ ಅವರು ಮುಂದುವರಿಸಿಕೊಂಡು ಬಂದಿದ್ದಾರೆ.
ದ್ವಿತೀಯ ಪಿಯುಸಿ ಪೂರೈಸಿರುವ ಇವರು ಹಲವರಿಗೆ ಟ್ರೈಸಿಕಲ್, ವಾಹನ, ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಕಲ್ಪಿಸಲು ದಿನಪೂರ್ತಿ ಸೇವೆ ಸಲ್ಲಿಸುತ್ತಿದ್ದಾರೆ.

‘ನನ್ನ ಬದುಕು ಕಟ್ಟಿಕೊಳ್ಳಲು ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಡುವಿನ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಅಂಗವೈಕಲ್ಯ ಹೊಂದಿರುವವರನ್ನು ಗುರುತಿಸಿ ಸಂಘದ ಸದಸ್ಯತ್ವ ದೊರಕಿಸಿಕೊಡುವ ಕೆಲಸ ಮಾಡುತ್ತೇನೆ. ಶಾಲಾ ಕಾಲೇಜುಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಸರ್ಕಾರದ ಸವಲತ್ತುಗಳನ್ನು ದೊರಕಿಸಿಕೊಡುವ ದಿಸೆಯಲ್ಲಿ ಮಾಹಿತಿ ನೀಡುತ್ತೇನೆ. ಬಸ್ ಪಾಸ್ ಸೌಲಭ್ಯ, ಅಂಗವಿಕಲರ ಕ್ರೀಡಾಕೂಟಕ್ಕೆ ನೆರವು, ಹಲವು ಕಾರ್ಯಕ್ರಮಗಳ ಮೂಲಕ ಆರೋಗ್ಯ ಸವಲತ್ತನ್ನು ದೊರಕಿಸಿಕೊಡಲು ಶ್ರಮಿಸುತ್ತಿದ್ದೇನೆ. ವಾರ್ಷಿಕ ಅರೋಗ್ಯ ತಪಾಸಣೆ, ಅಗತ್ಯ ಇರುವವರಿಗೆ ಗಾಲಿ ಕುರ್ಚಿ, ಕನ್ನಡಕ, ಕೃತಕ ಕಾಲು ಜೋಡಣೆ, ಥೆರಪಿ ಮೊದಲಾದ ಸೌಲಭ್ಯಗಳನ್ನು ದೊರಕಿಸಿಕೊಡುವ ದಿಸೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ವಜ್ರಮಣಿ.

‘ನನ್ನ ಸೇವೆಗೆ ಸದಾ ಬೆಂಬಲಿಗರಾಗಿ ತಂದೆ ಮಹದೇವಪ್ಪ ಮಾರ್ಗದರ್ಶನ ನೀಡುತ್ತಾರೆ. ಅಂಗವಿಕಲರಿಗೆ ಕನಿಕರ ತೋರುವುದಕ್ಕಿಂತ ಅವಕಾಶ ಕಲ್ಪಿಸಿದರೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ವಜ್ರಮಣಿ.

–ನಾ.ಮಂಜುನಾಥಸ್ವಾಮಿ

ಸ್ವಾವಲಂಬನೆಯ ಛಲ ಹುಟ್ಟಿಸಿದ ನಿಂದನೆ


ಸಂತೇಮರಹಳ್ಳಿ: ‘ನನ್ನ ಕಾಲು ಊನಗೊಂಡಿರುವುದನ್ನು ನೋಡಿ ಸಹಪಾಠಿಗಳು ಹತ್ತಿರ ಸೇರಿಸುತ್ತಿರಲಿಲ್ಲ. ಕೂಲಿಗಾಗಿ ಹೋದರೆ, ‘ನಿನ್ನ ಕೈಯಲ್ಲಿ ಏನಾಗುತ್ತದೆ’ ಎಂದು ಅಪಹಾಸ್ಯ ಮಾಡಿ ಜರಿದವರೇ ಹೆಚ್ಚು. ಈ ಅಪಹಾಸ್ಯವೇ ನನಗೆ ಹೇಗಾದರೂ ಮಾಡಿ ಸ್ವಯಂ ಸಂಪಾದನೆ ಮಾಡಿ ಜೀವನ ಸಾಗಿಸಬೇಕು ಎಂಬ ಛಲ ಹುಟ್ಟುವಂತೆ ಮಾಡಿತು’

– ಹೋಬಳಿಯ ಹೊಸಮೋಳೆ ಗ್ರಾಮದ, ಆಟೊ ಮಾಲೀಕ, ಚಾಲಕ ಗಿರೀಶ್ ಅವರ ಮಾತಿದು.

40 ವರ್ಷದ ಗಿರೀಶ್‌ ಅವರು ಇವರು ಹುಟ್ಟುವಾಗಲೇ ಅಂಗವಿಲರು. ಎಡಗಾಲಿನಲ್ಲಿ ಶಕ್ತಿ ಇಲ್ಲ. ಎಲ್ಲದಕ್ಕೂ ಬಲಗಾಲೇ ಅಧಾರ, ಎಡಗಾಲಿನ ಮೇಲೆ ಎಡ ಕೈ ಊರಿದಾಗ ಮಾತ್ರ ಮುಂದಕ್ಕೆ ಚಲಿಸಲು ಸಾಧ್ಯ. ಅಂಗ ವೈಕಲ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಗಿರೀಶ್‌ ಅವರು ಎಂಟು ವರ್ಷಗಳಿಂದ ಸ್ವಂತ ಆಟೊ ಚಲಾಯಿಸಿ ಯಾರ ಹಂಗು ಇಲ್ಲದೆ ಸಂಪಾದನೆ ಮಾಡಿ ತಂದೆ, ತಾಯಿ, ಪತ್ನಿ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.

ಬಾಲ್ಯದಲ್ಲಿ ಇವರ ಜೊತೆಗಾರರು ಅಟಕ್ಕೂ ಸೇರಿಸಿಕೊಳ್ಳುತ್ತಿರಲಿಲ್ಲ. ದಿನಗಳು ಕಳೆದಂತೆ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದ ಕಾರಣ ಮೇಯಿಸಲು ಮುಂದಾದರು. ನಂತರದ ದಿನಗಳಲ್ಲಿ ಕೂಲಿಗಾಗಿ ತೆರಳಿದಾಗ ಅಲ್ಲಿಯೂ ಅಪಹಾಸ್ಯ, ನಿಂದನೆಯಿಂದ ಕೂಲಿ ಕೆಲಸದಿಂದ ವಂಚಿತರಾದರು. ಗ್ರಾಮದಲ್ಲಿ ಸಣ್ಣದೊಂದು ಚಿಲ್ಲರೆ ಅಂಗಡಿ ನಡೆಸಲು ಮುಂದಾದರು. ಅದು ಯಶ ಕಾಣದೇ ವ್ಯಾಪಾರ ನಷ್ಟವಾಯಿತು. ಮನೆಯಲ್ಲಿ ಸುಮ್ಮನೆ ಕೂರದೇ ಅಕ್ಕಪಕ್ಕದ ಗ್ರಾಮದ ಅಂಗವಿಕಲ ಸದಸ್ಯರೊಡಗೂಡಿ ಸಂಘ ರಚನೆ ಮಾಡಿಕೊಂಡರು. ಎಂಟು ವರ್ಷಗಳ ಹಿಂದೆ ಸಾಲ ಪಡೆದು ಆಟೊ ಖರೀದಿಸಿದರು. ದಿನನಿತ್ಯ ಪ್ರಯಾಣಿಕರನ್ನು ಸಾಗಿಸುವುದು ಇವರಿಗೆ ಕಷ್ಟದ ಕೆಲಸ. ಆದರೂ, ಕಡಿಮೆ ಪ್ರಯಾಣ ನಡೆಸಿ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆತರುವ ಸೇವೆಯನ್ನು ಮಾಡುತ್ತಿದ್ದಾರೆ.

‘ಇದರಿಂದ ಹೆಚ್ಚು ಉಳಿತಾಯ ಮಾಡಲಾಗುವುದಿಲ್ಲ. ದಿನನಿತ್ಯ ₹200 ರಿಂದ ₹300ರವರೆಗೆ ಸಂಪಾದನೆಯಾಗುತ್ತದೆ. ಕುಟುಂಬ ನಿರ್ವಹಣೆ ಮಾಡುತ್ತೇನೆ’ ಎಂದು ಹೇಳುತ್ತಾರೆ ಗಿರೀಶ್.

ಅಂಗವಿಕಲರಿಗೆ ಬರುವ ಪಿಂಚಣಿ ಬಿಟ್ಟು ಸರ್ಕಾರದಿಂದ ಯಾವುದೇ ಸವಲತ್ತು ಬಂದಿಲ್ಲ. ಅಂಗವಿಕಲರಿಗೆ ನೀಡುವ ಗುರುತಿನ ಚೀಟಿ ಮಾತ್ರ ನೀಡಿದ್ದಾರೆ. ಶೇ 3 ರಷ್ಟು ರಿಯಾಯಿತಿ ದೊರಕುತ್ತದೆ ಎಂದು ಹೇಳುತ್ತಾರೆ. ಆದರೇ, ಯಾವ ಭಾಗದಲ್ಲಿಯೂ ರಿಯಾಯಿತಿ ದೊರಕಿಲ್ಲ’ ಅವರು ಹೇಳುತ್ತಾರೆ.

– ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT