ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಬಲೀಕರಣದಿಂದ ಸಮಾಜದ ಅಭಿವೃದ್ದಿ: ಸಿ.ಪುಟ್ಟರಂಗಶೆಟ್ಟಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಮಹಿಳಾ ದಿನಾಚರಣೆ, ಪ್ರದರ್ಶನ, ಮಾರಾಟ ಮೇಳ ಉದ್ಘಾಟನೆ
Last Updated 15 ಮಾರ್ಚ್ 2023, 4:02 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮಹಿಳಾ ಸಬಲೀಕರಣದಿಂದ ಮಾತ್ರ ಅಭಿವೃದ್ದಿ, ಸಮಾಜದ ಏಳಿಗೆ ಸಾಧ್ಯವಾಗಲಿದೆ. ಹೀಗಾಗಿ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಮಂಗಳವಾರ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಗ್ರಾಮೀಣ ಮತ್ತು ನಗರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಟುಂಬದಲ್ಲಿ ಹಲವಾರು ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ತಾರತಮ್ಯ ಮಾಡಬಾರದು. ಎಲ್ಲ ರಂಗದಲ್ಲಿಯೂ ಮಹಿಳೆಯರು ದಿಟ್ಟತನದಿಂದ ತೊಡಗಿಕೊಂಡಿರುವುದನ್ನು ಇಂದು ಕಾಣಬಹುದಾಗಿದೆ. ಮಹಿಳೆಯರಿಗೆ ಹೆಚ್ಚು ಅವಕಾಶಗಳು ನೀಡಬೇಕು. ಮಹಿಳೆಯರು ಸಬಲರಾದರೆ ಸಮಾಜದ ಪ್ರಗತಿಯು ಆಗಲಿದೆ. ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ’ ಎಂದರು.

‘ಮಹಿಳಾ ಸ್ವ ಸಹಾಯ ಸಂಘಗಳು ಅಸ್ತಿತ್ವಕ್ಕೆ ಬಂದಿದ್ದು, ಇದರಿಂದ ಹಲವು ಕುಟುಂಬಗಳಿಗೆ ನೆರವಾಗಿದೆ. ಮಹಿಳೆಯರು ಸಕ್ರಿಯರಾಗಿ ತೊಡಗಿಕೊಂಡು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಹಿಳೆಯರ ಅಭಿವೃದ್ದಿಗೆ ಪೂರಕವಾಗಿರುವ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕು’ ಎಂದು ಪುಟ್ಟರಂಗಶೆಟ್ಟಿ ಹೇಳಿದರು.

ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಮಾತನಾಡಿ, ‘ಮಹಿಳೆಯರು ಕುಟುಂಬದಲ್ಲಷ್ಟೇ ಅಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಹೊಣೆಗಾರಿಕೆಯಿಂದ ಸಾಧನೆ ಮಾಡಬಲ್ಲವರಾಗಿದ್ದಾರೆ. ರಾಜಕೀಯ ಕ್ಷೇತ್ರ, ಆಡಳಿತ ಸೇವಾ ಕ್ಷೇತ್ರವೇ ಇರಲಿ, ಇಂದು ಹಲವಾರು ಮಹಿಳೆಯರು ಉನ್ನತ ಸ್ಥಾನದಲ್ಲಿ ಇರುವುದನ್ನು ನೋಡಬಹುದಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಮಹಿಳೆಯರಿಗೆ ಹಕ್ಕುಗಳು ಅವಕಾಶಗಳು ಲಭಿಸಿವೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್.ಪೂವಿತಾ ಮಾತನಾಡಿ, ‘ಪ್ರತಿ ಮಹಿಳೆ ಸಬಲವಾಗಬೇಕು. ಎಷ್ಟೋ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯಾವ ಮಹಿಳೆಯೂ ಸಂಕಷ್ಟದಿಂದ ಬಳಲಬಾರದು. ಸಮಾಜದಲ್ಲಿ ಮೇಲೆ ಬರಬೇಕು. ಅಭಿವೃದ್ದಿ ಹೊಂದಬೇಕು. ಉತ್ತಮ ವೇದಿಕೆಗಳಲ್ಲಿ ಅವಕಾಶ ಪಡೆಯುವಂತಾಗಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದರು.

ಇದೇ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಚಾಮರಾಜನಗರ ನಗರಸಭೆಯ ಪ್ರಗತಿ ಪ್ರದೇಶಮಟ್ಟದ ಒಕ್ಕೂಟ ಸಂಘಕ್ಕೆ ₹1.5 ಲಕ್ಷ ಕೊಳ್ಳೇಗಾಲದ ಆದರ್ಶ ನಗರ ಮಟ್ಟದ ಒಕ್ಕೂಟಕ್ಕೆ ₹1 ಲಕ್ಷ ಬಹುಮಾನವನ್ನು ಗಣ್ಯರು ವಿತರಿಸಿದರು. ಅತ್ಯುತ್ತಮ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸರಸ್ವತಿ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಗೀತಾಲಕ್ಷ್ಮಿ, ಗ್ರಾಮೀಣ ಸಣ್ಣ ಕೈಗಾರಿಕೆ ಉಪನಿರ್ದೇಶಕ ರಾಜೇಂದ್ರಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಬಸವರಾಜು, ಜಿಲ್ಲಾ ಹಿಂದುಳಿದ ವಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಜಿಲ್ಲಾ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್, ಭೂ ದಾಖಲೆಗಳ ಉಪನಿರ್ದೇಶಕರಾದ ವಿದ್ಯಾಯಿನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಇದ್ದರು.

ಮಾರಾಟ ಮೇಳ ಉದ್ಘಾಟನೆ: ಕಾರ್ಯಕ್ರಮದ ಬಳಿಕ ಚಾಮರಾಜೇಶ್ವರ ದೇವ‌ಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ತಯಾರಿಸಿದ ವಿವಿಧ ರೀತಿಯ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಕ್ಕೆ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಅವರು ವಿವಿಧ ಮಳಿಗೆಗಳನ್ನು ಉದ್ಘಾಟಿಸಿದರು. 16ರವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT