ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿರಲಿ: ನಾಟಕ ಕಾರ, ಮಕ್ಕಳ ಸಾಹಿತಿ ಚಾಮಶೆಟ್ಟಿ

10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿ.ಚಾಮಶೆಟ್ಟಿ ಪ್ರತಿಪಾದನೆ
Last Updated 22 ಜನವರಿ 2020, 19:45 IST
ಅಕ್ಷರ ಗಾತ್ರ

ನಾಟಕ ಕಾರ, ಮಕ್ಕಳ ಸಾಹಿತಿ ಚಾಮಶೆಟ್ಟಿ ಸಿ. ಅವರು ಹನೂರಿನಲ್ಲಿ ನಡೆಯಲಿರುವ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನವನ್ನು ನಡೆಸುತ್ತಿರುವ ಅವರಿಗೆ ಈಗ 86ರ ಹರೆಯ. ಅವರು ನಿವೃತ್ತಿಯ ನಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ವಿಶೇಷ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನೇತೃತ್ವ ಹೊತ್ತಿರುವ ಸಂದರ್ಭದಲ್ಲಿ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ತವರು ಜಿಲ್ಲೆಯಲ್ಲಿ ಸಮ್ಮೇಳನದ ಅಧ್ಯಕ್ಷರಾಗಿದ್ದೀರಿ. ಹೇಗನಿಸುತ್ತಿದೆ?

ಉ: ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಅಚ್ಚರಿಯ ಜೊತೆಗೆ ಸಂತಸವಾಗಿದೆ. ನನ್ನ ಕೆಲಸವನ್ನು ಗುರುತಿಸಿರುವುದು ಖುಷಿ ನೀಡಿದೆ. ಹಿತೈಷಿಗಳ ಹಾರೈಕೆ, ಪ್ರೀತಿಯಿಂದ ಈ ಗೌರವ ಒಲಿದಿದೆ. ಸಮ್ಮೇಳನಕ್ಕೆ ಹನೂರನ್ನು ಆಯ್ಕೆ ಮಾಡಿರುವುದು ಸೂಕ್ತವಾಗಿದೆ. ಅದು ಗಡಿ ಪ್ರದೇಶವಾಗಿದ್ದು, ತಮಿಳು ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿದೆ. ಇಂತಹ ಸಮ್ಮೇಳನದಿಂದ ಅಲ್ಲಿನ ಜನರಲ್ಲಿ ಕನ್ನಡಾಭಿಮಾನ ಬೆಳೆಸಬಹುದು.

* ಮಾತೃಭಾಷೆಯಲ್ಲಿ ಶಿಕ್ಷಣದ ಬಗ್ಗೆ ಪರ ವಿರೋಧ ಚರ್ಚೆಯಾಗುತ್ತಿದೆ. ನಿಮ್ಮ ಅಭಿಪ್ರಾಯ ಏನು?

ಉ: ಕನ್ನಡ ಕರುಳಿನ ಭಾಷೆ. ಹಾಗಾಗಿ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಇರಬೇಕು. ಕನಿಷ್ಠ 7ನೇ ತರಗತಿಯವರೆಗೆಯಾದರೂ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂಬುದು ನನ್ನ ಬಲವಾದ ಪ್ರತಿಪಾದನೆ. ಆದರೆ, ನಮಗೆ ಇಂಗ್ಲಿಷ್‌ ಮೋಹ ಹೆಚ್ಚು. ಕನ್ನಡ ಶಾಲೆಗಳತ್ತ ನಾವು ಮುಖ ಮಾಡುತ್ತಿಲ್ಲ. ಇಂಗ್ಲಿಷ್‌ ಸಂಪೂರ್ಣವಾಗಿ ಬೇಡ ಎಂದು ನಾನು ಹೇಳುತ್ತಿಲ್ಲ. ಅದನ್ನೂ ಮಕ್ಕಳು ಕಲಿಯಬೇಕು. ಆದರೆ, ನಮ್ಮ ಮಾತೃಭಾಷೆಗೆ ಪ್ರಾಮುಖ್ಯ ನೀಡಬೇಕು.

* ಸರ್ಕಾರವೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು (ಪಬ್ಲಿಕ್‌) ಆರಂಭಿಸಿದೆಯಲ್ಲಾ?

ಉ: ದೊಡ್ಡ ದೊಡ್ಡ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ನಡೆಸುವವರು ರಾಜಕಾರಣಿಗಳೇ. ಹಾಗಾಗಿ ಅವರು ಅದರ ಪರವಾಗಿಯೇ ಇದ್ದಾರೆ. ರಾಜ್ಯದಾದ್ಯಂತ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಎಲ್ಲರ ಸಹಕಾರ ಬೇಕು. ಸರ್ಕಾರ ಮಾತ್ರವಲ್ಲದೇ, ಸಂಘ ಸಂಸ್ಥೆಗಳು, ಜನ ಸಾಮಾನ್ಯರು ಕೂಡ ಕನ್ನಡದ ಪರವಾಗಿ ಇರಬೇಕು. ಇದರಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದಿದೆ.

* ಚಾಮರಾಜನಗರ ಜಿಲ್ಲೆಯಲ್ಲಿನ ಕನ್ನಡದ ಸ್ಥಿತಿ ಗತಿ ಬಗ್ಗೆ ನಿಮ್ಮ ಅನಿಸಿಕೆ...

ಉ: ಕೆಲವು ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಜಿಲ್ಲೆಗೆ ಹೊಂದಿಕೊಂಡಂತೆ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿದ್ದರೂ, ಕನ್ನಡಕ್ಕೆ ಏನೂ ತೊಂದರೆಯಾಗಿಲ್ಲ. ಹಿಂದೆ ತಮಿಳು ಭಾಷಿಕರ ಪ್ರದೇಶದಲ್ಲಿ ತಮಿಳು ಪ್ರಭಾವ ಹೆಚ್ಚಾಗಿತ್ತು. ಈಗ ಕನ್ನಡವನ್ನೂ ಮಾತನಾಡುವವರಿದ್ದಾರೆ. ಇಡೀ ಜಿಲ್ಲೆಯಲ್ಲಿ ಕನ್ನಡ ವಾತಾವರಣ ಇದೆ.

* ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ಹೊಂದಲು ಏನು ಮಾಡಬೇಕು?

ಉ: ಹಿಂದಿನ ಚಾಮರಾಜನಗರಕ್ಕೆ ಹೋಲಿಸಿದರೆ, ಈಗ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮೆಡಿಕಲ್‌ ಕಾಲೇಜು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಬಂದಿವೆ. ಇನ್ನಷ್ಟು ಅಭಿವೃದ್ಧಿ ನಡೆಯುವ ಅಗತ್ಯವಿದೆ. ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಹೆಚ್ಚು ಹೆಚ್ಚು ಅನುದಾನ, ಯೋಜನೆಗಳನ್ನು ತರಬೇಕು.

* ಶಿಕ್ಷಣದಲ್ಲಿ ಕ್ರೀಡೆಯನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ?

ಉ: ಹೌದು ಕ್ರೀಡೆಗೆ ಪ್ರಾಮುಖ್ಯ ಸಿಗುತ್ತಿಲ್ಲ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಶಾಲೆಗಳಲ್ಲಿ ಪಾಠದ ಜೊತೆಗೆ ಆಟ‌ವೂ ಇರಬೇಕು. ವಾಸ್ತವದಲ್ಲಿ ಮಕ್ಕಳಿಗೆ ಪಾಠಕ್ಕಿಂತಲೂ ಆಟವೇ ಅಚ್ಚುಮೆಚ್ಚು. ಬಾಲ್ಯದಲ್ಲೇ ಅವರ ಕ್ರೀಡಾಸಕ್ತಿಗೆ ಉತ್ತಮ ಪ್ರೋತ್ಸಾಹ ದೊರಕಿದರೆ, ಭವಿಷ್ಯದಲ್ಲಿ ಅವರು ಒಳ್ಳೆಯ ಕ್ರೀಡಾಪಟುಗಳಾಗುವ ಅವಕಾಶ ಇರುತ್ತದೆ.

ನಮ್ಮ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಕಡೆಗಣಿಸಲಾಗುತ್ತಿದೆ. ಎಷ್ಟೋ ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಮಕ್ಕಳನ್ನು ಇಡೀ ದಿನ ಕೊಠಡಿಗಳ ಒಳಗೇ ಕೂಡಿ ಹಾಕಲಾಗುತ್ತಿದೆ. ಇದು ತಪ್ಪಬೇಕು. ಪಾಠದಷ್ಟೇ ಪ್ರಾಮುಖ್ಯ ಆಟಕ್ಕೂ ಸಿಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT