ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ವನ ಸೇತುವೆ: ಕಾಡಿನ ಗ್ರಾಮಗಳಿಗೆ ಸಾರಿಗೆ

ಜಿಲ್ಲಾಡಳಿತ, ಅರಣ್ಯ ಇಲಾಖೆ ಜಂಟಿ ಪ್ರಯತ್ನ, ಮಲೆ ಮಹದೇಶ್ವರ ವನ್ಯಧಾಮದಲ್ಲಿರುವ ಗ್ರಾಮಸ್ಥರಿಗೆ ಅನುಕೂಲ
Last Updated 17 ಜೂನ್ 2022, 16:05 IST
ಅಕ್ಷರ ಗಾತ್ರ

‌ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿರುವ ಕುಗ್ರಾಮಗಳ ನಿವಾಸಿಗಳ ಹಲವು ವರ್ಷಗಳ ಕನಸು ಕೊನೆಗೂ ಈಡೇರುತ್ತಿದೆ.

ರಸ್ತೆ, ಆರೋಗ್ಯ, ಶಿಕ್ಷಣ ಸೇರಿದಂತೆ ಕನಿಷ್ಠ ಸೌಲಭ್ಯಗಳಿಂದ ವಂಚಿತರಾಗಿರುವ ಈ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು, ತುರ್ತು ಆರೋಗ್ಯ ಸೇವೆ ಹಾಗೂ ಸರ್ಕಾರದ ಇತರ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಆರಂಭಿಸಲು ಉದ್ದೇಶಿಸಿದ್ದ ‘ಜನ–ವನ –ಸೇತುವೆ’ ಸಾರಿಗೆ ವ್ಯವಸ್ಥೆಗೆ ಶುಕ್ರವಾರ ಚಾಲನೆ ಸಿಕ್ಕಿದೆ.

ಈ ಉದ್ದೇಶಕ್ಕಾಗಿ ಜಿಲ್ಲಾಡಳಿತ ನಾಲ್ಕು ವಾಹನಗಳನ್ನು ಖರೀದಿಸಿದೆ. ಕಡಿದಾದ ರಸ್ತೆಗಳಲ್ಲೂ ಸಂಚರಿಸುವ ಸಾಮರ್ಥ್ಯವಿರುವ 4x4x4 ವೀಲ್‌ ಡ್ರೈವ್‌ನ ಫೋರ್ಸ್‌ ಕಂಪನಿಯ ಗೂರ್ಖಾ ವಾಹನಗಳು ಬಂದಿದ್ದು, ಶುಕ್ರವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಹಾಗೂ ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ವಾಹನಗಳಿಗೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಅವರು ಸಾಂಕೇತಿಕವಾಗಿ ವಾಹನವನ್ನು ಸ್ವತಃ ಚಲಾಯಿಸಿದರು.ದಿನದ 24 ಗಂಟೆಗಳ ಕಾಲ ವಾರದ ಏಳು ದಿನಗಳೂ ಈ ವಾಹನಗಳ ಸೇವೆ ಲಭ್ಯವಿದ್ದು, ಶನಿವಾರದಿಂದ ಕಾರ್ಯಾರಂಭ ಮಾಡಲಿದೆ.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ‘ಕೆಲವು ತಿಂಗಳ ಹಿಂದೆ ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿದಾಗ ಸಾರಿಗೆ ವ್ಯವಸ್ಥೆಯ ಅಗತ್ಯದ ಬಗ್ಗೆ ತಿಳಿಯಿತು. ಜನರಿಗೆ ಸರ್ಕಾರದ ಸೌಲಭ್ಯ ತಲುಪಿಸುವುದಕ್ಕಾಗಿ, ತುರ್ತು ಸಂದರ್ಭದಲ್ಲಿ ಅವರಿಗೆ ಸೇವೆ ಒದಗಿಸಲು, ಗ್ರಾಮಸ್ಥರ ಓಡಾಟಕ್ಕಾಗಿ ಅರಣ್ಯ ಇಲಾಖೆಯ ನೆರವಿನೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಜಿಲ್ಲಾ ಖನಿಜ ನಿಧಿಯ ಹಣವನ್ನು ಬಳಸಿ ವಾಹನಗಳನ್ನು ಖರೀದಿಸಲಾಗಿದೆ’ ಎಂದರು. ಜಿಲ್ಲಾಡಳಿತವು ವಾಹನಗಳ ಖರೀದಿಗಾಗಿ ₹55 ಲಕ್ಷ ವೆಚ್ಚ ಮಾಡಿದೆ.

ನಾಲ್ಕು ಮಾರ್ಗಗಳು: ನಾಲ್ಕು ವಾಹನಗಳನ್ನು ನಾಲ್ಕು ಮಾರ್ಗಗಳಿಗೆ ನಿಯೋಜಿಸಲು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ನಿರ್ಧರಿಸಿದೆ.

ಮಹದೇಶ್ವರ ಬೆಟ್ಟ ವನ್ಯಜೀವಿ ವಲಯ ವ್ಯಾಪ್ತಿಯ ಇಂಡಿಗನತ್ತ, ಮೆದಗನಾಣೆ, ಮೆಂದಾರೆ, ನಾಗಮಲೆ‌ ಮಾರ್ಗ, ಪಡಸಲನತ್ತ– ಪಾಲಾರ್ ಮಾರ್ಗ, ಕೊಕ್ಬರೆ, ತೇಕಾಣೆ, ತೋಕೆರೆ, ದೊಡ್ಡಾಣೆ ಮಾರ್ಗ, ಹನೂರು ವನ್ಯಜೀವಿ ವಲಯದ ಕಾಂಚಳ್ಳಿ, ಪಚ್ಚೆದೊಡ್ಡಿ ಮಾರ್ಗಗಳನ್ನು ಗುರುತಿಸಲಾಗಿದೆ. ಅರಣ್ಯ ಇಲಾಖೆಯ ನಿಯಂತ್ರಣದಲ್ಲಿ ವಾಹನಗಳು ಇರಲಿವೆ.

‘ಕಾಡಿನಲ್ಲಿರುವ ಗ್ರಾಮಗಳ ಜನರಿಗೆ ಪಟ್ಟಣಕ್ಕೆ ಬರಲು, ಶಾಲಾ ಮಕ್ಕಳ ಸಂಚಾರ, ಪಡಿತರ ಸಾಗಣೆ, ಆಂಬುಲೆನ್ಸ್‌ ಸೇವೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಈ ವಾಹನವನ್ನು ಬಳಸಬಹುದು. ಅಲ್ಲಿರುವ ಶಾಲೆಗಳು, ಅಂಗನವಾಡಿಗಳ ಸಿಬ್ಬಂದಿ ಕೂಡ ಈ ವಾಹನದಲ್ಲಿ ಓಡಾಡಬಹುದು. ವಾಹನಗಳಿಗೆ ಚಾಲಕರ ವ್ಯವಸ್ಥೆಯನ್ನು ಇಲಾಖೆ ಮಾಡಲಿದೆ’ ಎಂದರು.

ಉಚಿತ ಸೇವೆ ಅಲ್ಲ; ಕನಿಷ್ಠ ದರ

‘ಈ ಸಾರಿಗೆ ವ್ಯವಸ್ಥೆ ಉಚಿತ ಅಲ್ಲ. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಾಗೂ ಶಾಲಾ ಮಕ್ಕಳನ್ನು ಉಚಿತವಾಗಿ ಕರೆದೊಯ್ಯಲಾಗುವುದು. ಉಳಿದ ಸಂದರ್ಭಗಳಲ್ಲಿ ಜನರು ಹಣ ನೀಡಬೇಕಾಗುತ್ತದೆ. ಕನಿಷ್ಠ ದರವನ್ನು ನಿಗದಿ ಪಡಿಸಲಾಗುತ್ತದೆ. ಈ ಮೂಲಕ ಸಂಗ್ರಹವಾಗುವ ಹಣದಲ್ಲಿ ವಾಹನಕ್ಕೆ ಇಂಧನ ಖರೀದಿಸಲಾಗುವುದು’ ಎಂದು ಡಿಸಿಎಫ್‌ ಏಡುಕುಂಡಲು ವಿವರಿಸಿದರು.

*
ಅರಣ್ಯದಲ್ಲಿರುವ ಗ್ರಾಮಗಳ ನಿವಾಸಿಗಳಿಗೆ ಈ ವಾಹನಗಳಿಂದ ಅನುಕೂಲವಾಗಲಿದೆ. ಜನರು ಇದರ ಸೌಲಭ್ಯ ಪಡೆದುಕೊಳ್ಳಬೇಕು
-ಚಾರುಲತಾ ಸೋಮಲ್‌, ಜಿಲ್ಲಾಧಿಕಾರಿ

*
ವಾಹನಗಳ ನಿರ್ವಹಣೆಯ ಬಗ್ಗೆ ಈಗಾಗಲೇ ಯೋಜನೆ ರೂಪಿಸಿದ್ದೇವೆ. ದಿನದ 24 ಗಂಟೆಗಳ ಕಾಲವು ವಾಹನಗಳು ಸೇವೆ ಲಭ್ಯವಿರುತ್ತವೆ
-ವಿ.ಏಡುಕುಂಡಲು, ಡಿಸಿಎಫ್‌, ಮಲೆ ಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT