ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಟಿಕೆಟ್‌: ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಜಯಣ್ಣ, ಬಾಲರಾಜ್‌

ಕೊಳ್ಳೇಗಾಲ: ಟಿಕೆಟ್‌ ವಂಚಿತರನ್ನು ಭೇಟಿ ಮಾಡಿ ಬೆಂಬಲ ಕೋರಿದ ‘ಕೈ’ ಅಭ್ಯರ್ಥಿ ಕೃಷ್ಣಮೂರ್ತಿ
Last Updated 11 ಏಪ್ರಿಲ್ 2023, 6:16 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿರುವುದಕ್ಕಾಗಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಎಸ್‌.ಜಯಣ್ಣ ಮತ್ತು ಎಸ್‌.ಬಾಲರಾಜ್‌ ಸೋಮವಾರ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಎ.ಆರ್‌.ಕೃಷ್ಣಮೂರ್ತಿ ಇಬ್ಬರ ಮನೆಗೂ ಭೇಟಿ ನೀಡಿ, ಮನವೊಲಿಸಲು ಯತ್ನಿಸಿದರಲ್ಲದೆ, ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಇಬ್ಬರೂ ಟಿಕೆಟ್‌ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಮುಖಂಡರೊಂದಿಗೆ ಚರ್ಚಿಸಿದ ನಂತರ ತೀರ್ಮಾನ ಮಾಡುವುದಾಗಿ ಹೇಳಿದರು.

ಪಕ್ಷದ ವರಿಷ್ಠರು ಎ.ಆರ್‌.ಕೃಷ್ಣಮೂರ್ತಿಗೆ ಟಿಕೆಟ್‌ ಘೋಷಿಸಿದ ಬಳಿಕ ಜಯಣ್ಣ, ಬಾಲರಾಜ್‌ ಮೌನಕ್ಕೆ ಶರಣಾಗಿದ್ದರು. ಕ್ಷೇತ್ರದಲ್ಲಿ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಕೃಷ್ಣಮೂರ್ತಿ ಅವರೊಂದಿಗೆ ಮಾತನಾಡಿರಲಿಲ್ಲ.

ಇಬ್ಬರ ಬೆಂಬಲ ಕೋರುವುದಕ್ಕಾಗಿ ಕೃಷ್ಣಮೂರ್ತಿ ಸೋಮವಾರ ಅವರ ಮನೆಗಳಿಗೇ ತೆರಳಿದರು.

ಮೊದಲಿಗೆ ಬಾಲರಾಜ್‌ ಮನೆಗೆ ಭೇಟಿ ಕೊಟ್ಟ ಎಆರ್‌ಕೆ, ಅವರೊಂದಿಗೆ ಕೆಲಕಾಲ ಮಾತನಾಡಿದರು. ಮಾಧ್ಯಮದವರ ಎದುರಿಗೆ ಬಾಲರಾಜ್‌ಗೆ ಸಿಹಿ ತಿನ್ನಿಸಿದರು.

ಪಕ್ಷದ ನಿರ್ಧಾರ ಒಪ್ಪುವೆ: ಬಾಲರಾಜ್‌ ಮಾತನಾಡಿ ‘ಟಿಕೆಟ್ ಕೈ ತಪ್ಪಿರುವುದು ಬೇಸರದ ಸಂಗತಿ. ಹಾಗಾಗಿ ನಾನು ಕ್ಷೇತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ನನಗೆ ಪಕ್ಷ ಮುಖ್ಯ. ಪಕ್ಷಕ್ಕಾಗಿ ಹಗಲು-ರಾತ್ರಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಪಕ್ಷದ ನಿರ್ಧಾರವನ್ನು ಒಪ್ಪುತ್ತೇನೆ. ಅದಕ್ಕೆ ತಲೆಬಾಗುತ್ತೇನೆ. ನನಗೆ ಟಿಕೆಟ್ ಸಿಗದ ಕಾರಣಕ್ಕೆ ನನ್ನ ಬೆಂಬಲಿಗರು ಬೇಸರ ಮಾಡಿಕೊಂಡಿದ್ದಾರೆ. ನಾನು ಅವರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದರು.

‘ಕೆಲವರು ಪಕ್ಷದ ವಿರುದ್ಧ ಬಂಡಾಯ ಎದ್ದು ಪಕ್ಷೇತರವಾಗಿ ಸ್ಪರ್ಧೆ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ. ನಾನು ಯಾವ ನಿರ್ಧಾರವನ್ನೂ ತೆಗೆದುಕೊಳ್ಳದೆ ಮೌನವಾಗಿದ್ದೇನೆ. ಇನ್ನೆರಡು ದಿನಗಳಲ್ಲಿ ನನ್ನ ನಿಲುವನ್ನು ನಿಮಗೆ ಹೇಳುತ್ತೇನೆ ಹಾಗೂ ನಾನು ಮತ್ತು ಜಯಣ್ಣ ಇಬ್ಬರೂ ಚರ್ಚೆ ಮಾಡಿ ನಿಮಗೆ ತಿಳಿಸುತ್ತೇನೆ’ ಎಂದರು.

ನಂತರ ಜಯಣ್ಣ ನಿವಾಸಕ್ಕೂ ಮುಖಂಡರೊಂದಿಗೆ ಭೇಟಿ ನೀಡಿದ ಕೃಷ್ಣಮೂರ್ತಿ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಮುಖಂಡರ ನಡುವೆ ಪರ ಹಾಗೂ ವಿರೋಧದ ಚರ್ಚೆ ನಡೆದವು. ಜಯಣ್ಣ ಮುಖಂಡರ ಜೊತೆ ಮುಖ ಕೊಟ್ಟು ಮಾತನಾಡಲೂ ಇಲ್ಲ.

ಭೇಟಿಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಜಯಣ್ಣ ‘30 ವರ್ಷ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನನಗೆ ಟಿಕೆಟ್ ಸಿಗದಿರುವುದು ನೋವು ತಂದಿದೆ. ನನ್ನ ಬೆಂಬಲಿಗರಿಗೆ, ಕಾರ್ಯಕರ್ತರಿಗೆ ಹಾಗೂ ನನ್ನ ನಂಬಿ ಬಂದ ಜನರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಪಕ್ಷಕ್ಕಾಗಿ, ಪಕ್ಷದ ಸಿದ್ಧಾಂತಕ್ಕಾಗಿ ನಿರಂತರವಾಗಿ ದುಡಿದಿದ್ದೇನೆ. ಸಿದ್ದರಾಮಯ್ಯ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲೇ ಉಳಿದುಕೊಂಡಿದ್ದೇನೆ. ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಕಾಂಗ್ರೆಸ್‌ ಬಿಡುವುದೂ ಇಲ್ಲ. ಕೃಷ್ಣಮೂರ್ತಿ ಜೊತೆ ಕೈಜೋಡಿಸಬೇಕಾದರೆ ವರಿಷ್ಠರು ನಮ್ಮನ್ನು ಕರೆದು ನಮಗೆ ಕೆಲವು ಭರವಸೆ ನೀಡಬೇಕು. ವರಿಷ್ಠರು, ಕೃಷ್ಣಮೂರ್ತಿ, ನನ್ನನ್ನು ಮತ್ತು ಬಾಲರಾಜ್ ಕರೆಸಿ ಸಭೆ ಮಾಡಬೇಕು. ಅಲ್ಲಿ ನಾವು ಕೆಲವು ಬೇಡಿಕೆ ಹೇಳುತ್ತೇವೆ. ಆ ನಂತರ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ನಾವು ಯಾವ ಚುನಾವಣೆ ಪ್ರಚಾರಕ್ಕೂ ಹೋಗುವುದಿಲ್ಲ’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಸದಸ್ಯರಾದ ಶಾಂತರಾಜು, ಮನೋಹರ್, ಮಂಜುನಾಥ್, ಮುಖಂಡರಾದ ಮುಡಿಗುಂಡ ಶಾಂತರಾಜು, ನಾಗರಾಜು, ನಂಜುಂಡಸ್ವಾಮಿ, ಶಿವಕುಮಾರ್, ಸ್ವಾಮಿ ನಂಜಪ್ಪ , ಚಿನ್ನಸ್ವಾಮಿ ಮಾಳಿಗೆ, ಸಿದ್ಧಾರ್ಥ ಇದ್ದರು.

ಶೀಘ್ರ ಸಭೆ: ಕೃಷ್ಣಮೂರ್ತಿ

ಅಭ್ಯರ್ಥಿ ಕೃಷ್ಣಮೂರ್ತಿ ಮಾತನಾಡಿ ‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ದೂರವಾಣಿಯ ಮೂಲಕ ಸಂಪರ್ಕ ಮಾಡಿದ್ದೇನೆ. ಸದ್ಯದಲ್ಲೇ ಟಿಕೆಟ್ ವಂಚಿತರು ಹಾಗೂ ನನ್ನನ್ನು ಕರೆದು ಸಭೆ ಮಾಡುವರು’ ಎಂದು ಹೇಳಿದರು.

‘ಟಿಕೆಟ್ ಸಿಗದಿರುವುದಕ್ಕೆ ಅವರಿಗೆ ಬೇಸರವಾಗಿದೆ ನಿಜ. ಆದರೆ ಎಲ್ಲರೂ ಒಟ್ಟಿಗೆ ಸೇರಿಕೊಂಡು ಶಾಸಕ ಎನ್.ಮಹೇಶ್ ಅವರನ್ನು ಸೋಲಿಸುತ್ತೇವೆ. ಜಯಣ್ಣ ಹಿರಿಯರು. ಅವರ ಮಾರ್ಗದರ್ಶನ ಪಡೆದು ಚುನಾವಣೆ ಎದುರಿಸುತ್ತೇವೆ. ಇದರ ಜೊತೆಗೆ ಇನ್ನಿಬ್ಬರು ಮಾಜಿ ಶಾಸಕರ ಸಹಕಾರವನ್ನೂ ಪಡೆಯುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT